ರಿಯಾದ್: ಇನ್ಮುಂದೆ ಸೌದಿ ಅರೇಬಿಯಾದಲ್ಲಿ ಅಧಿಕೃತ ದಿನಾಂಕಗಳನ್ನು ಇಂಗ್ಲಿಷ್ (ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ ಲೆಕ್ಕಹಾಕಲಾಗುವುದು.
ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಎಲ್ಲಾ ಅಧಿಕೃತ ಕಾರ್ಯವಿಧಾನಗಳು ಮತ್ತು ವಹಿವಾಟುಗಳಲ್ಲಿ ಇಂಗ್ಲಿಷ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಆದರೆ ಧಾರ್ಮಿಕ ವಿಷಯಗಳಿಗೆ ಅರಬಿಕ್ (ಹಿಜ್ರಿ) ಕ್ಯಾಲೆಂಡರನ್ನೇ ಬಳಸಲಾಗುವುದು. ದೇಶದಲ್ಲಿ ಸರ್ಕಾರದ ಮಟ್ಟದಲ್ಲಿ ಸೇರಿದಂತೆ ಸಾಮಾನ್ಯ ದಿನಾಂಕಗಳು ಮತ್ತು ಅವಧಿಗಳನ್ನು ಇಂಗ್ಲಿಷ್ ಕ್ಯಾಲೆಂಡರ್ ಆಧರಿಸಿ ಕ್ರಮೀಕರಿಸಲಾಗುವುದು.
ರಾಷ್ಟ್ರೀಯ ಗುರುತಿನ ಚೀಟಿ, ಚಾಲನಾ ಪರವಾನಗಿ, ವೀಸಾ, ದೇಶದ ನಾಗರಿಕರು ಮತ್ತು ವಿದೇಶಿಯರ ವಾಣಿಜ್ಯ ಪರವಾನಗಿ ಮುಂತಾದ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಈ ಬದಲಾವಣೆ ಇರಲಿದೆ.
ಇಂಗ್ಲಿಷ್ ದಿನಾಂಕದೊಂದಿಗೆ ಹಿಜ್ರಿ ದಿನಾಂಕವನ್ನು ದಾಖಲಿಸುವ ವಿಧಾನವನ್ನು ಬದಲಾಯಿಸಿ ಇವುಗಳ ದಿನಾಂಕಗಳ ನಿರ್ಣಯವನ್ನು ಸಂಪೂರ್ಣವಾಗಿ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಮಾಡಲಾಗುತ್ತದೆ.