janadhvani

Kannada Online News Paper

ಔರಂಗಜೇಬ ನೆಪ ಮಾತ್ರ: ಈದ್ ಮಿಲಾದ್‌ ಟಾರ್ಗೆಟ್‌ಗೆಂದೇ ಈ ದ್ವಾರ ಹಾಕಲಾಗಿತ್ತಾ?

ಶ್ರೀರಾಮನ ಬಿಲ್ಲು ಮುಸ್ಲೀಮರೇ ಅತ್ಯಧಿಕವಾಗಿರುವ ಇಲ್ಯಾಸ್ ನಗರ ಎಂಬ ಊರನ್ನು ಗುರಿಯಾಗಿರಿಸಿದೆ. ಇದು ಯಾವ ಉದ್ದೇಶದಿಂದ ಮಾಡಲಾಗಿದೆ ?

✍️ನವೀನ್ ಸೂರಿಂಜೆ

ಈದ್ ಮಿಲಾದ್‌ಗೂ ಔರಂಗಜೇಬನಿಗೂ ಏನು ಸಂಬಂಧ ? ಮುಸ್ಲಿಂ ಕೋಮುವಾದಿಗಳು ಯಾಕೆ ಇಂತಹ ಕಿಡಿಗೇಡಿತನ ಮಾಡಬೇಕಿತ್ತು? ಎಂದು ಬಲಪಂಥೀಯರು, ಎಡಪಂಥೀಯರು ಸೇರಿದಂತೆ ಇಡೀ ಸಮಾಜ ಪ್ರಶ್ನಿಸಿದ್ದಾಯ್ತು. ಇದೀಗ ಔರಂಗಜೇಬನಿಗೂ ಮೊದಲು ಶಿವಮೊಗ್ಗ ಈದ್ ಮಿಲಾದ್ ಹಾಳು ಮಾಡಲೆಂದೇ ಯಾರ್ಯಾರು ಬಂದಿದ್ದರು ಎಂಬ ಸತ್ಯಶೋಧನಾ ವರದಿಯೊಂದು ಬೇಕಾಗಿದೆ. ಪರ-ವಿರೋಧದ ಚರ್ಚೆಯನ್ನು ಬದಿಗಿಟ್ಟು ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಮಾಡಬೇಕಿದೆ.

ಈದ್ ಮಿಲಾದ್ ಗೂ ಮುನ್ನ ನಡೆದ ಶಿವಮೊಗ್ಗ ಗಣೇಶೋತ್ಸವಕ್ಕೂ ಶ್ರೀರಾಮನಿಗೂ ಏನು ಸಂಬಂಧ ? ಗಣೇಶ ಮೆರವಣಿಗೆಗೆಂದು ತೀರ್ಥಹಳ್ಳಿ ರಸ್ತೆಯಲ್ಲಿ ದೊಡ್ಡದಾದ ದ್ವಾರವೊಂದನ್ನು ನಿರ್ಮಿಸಲಾಗುತ್ತದೆ. ದ್ವಾರದ ಮಧ್ಯಭಾಗದಲ್ಲಿ ಶ್ರೀರಾಮ ಬಿಲ್ಲನ್ನು ಹಿಡಿದು ನಿಂತಿದ್ದಾನೆ. ಶ್ರೀರಾಮನ ಬಿಲ್ಲು ಮುಸ್ಲೀಮರೇ ಅತ್ಯಧಿಕವಾಗಿರುವ ಇಲ್ಯಾಸ್ ನಗರ ಎಂಬ ಊರನ್ನು ಗುರಿಯಾಗಿರಿಸಿದೆ. ಇದು ಯಾವ ಉದ್ದೇಶದಿಂದ ಮಾಡಲಾಗಿದೆ ? ಗಣೇಶೋತ್ಸವ ಮುಗಿದು ಈದ್ ಮಿಲಾದ್ ಮೆರವಣಿಗೆ ಮುಗಿದರೂ ಇನ್ನೂ ಆ ದ್ವಾರ ರಸ್ತೆಯಲ್ಲಿದೆ ಯಾಕೆ ?

ಶಿವಮೊಗ್ಗ ಬಸ್ ನಿಲ್ದಾಣದ ಎದುರು ಜ್ಞಾನವ್ಯಾಪಿ ಶಿವನ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಜ್ಞಾನವ್ಯಾಪಿ ಶಿವಲಿಂಗ ವಿವಾದ ಆಗಿರುವುದು ಉತ್ತರ ಪ್ರದೇಶದಲ್ಲಿ..! ಅದಕ್ಕೂ ಶಿವಮೊಗ್ಗಕ್ಕೂ ಏನು ಸಂಬಂಧ ? ಜ್ಞಾನವ್ಯಾಪಿ ಮಸೀದಿಯನ್ನು ಗಣೇಶೋತ್ಸವ ಮೆರವಣಿಗೆಯಲ್ಲಿ ಯಾಕೆ ನೆನಪಿಸಬೇಕಿತ್ತು ?

ಮುಸ್ಲಿಂ ಸಮುದಾಯ ಕ್ರಿಯೆಗೆ ಪ್ರತಿಕ್ರಿಯೆ ನೀಡಬಾರದು ಎಂಬುದು ನಿಜ. ಆದರೆ ಪ್ರತಿಕ್ರಿಯೆಗಾಗಿಯೇ ಕಾಲು ಕೆರೆಯುವುದು ತಪ್ಪಲ್ಲವೇ? ದ್ವಾರಗಳ ಪೈಪೋಟಿಯನ್ನು ಸೃಷ್ಟಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತಲ್ಲವೇ ? ಗಣೇಶೋತ್ಸವ ಮುಗಿದರೂ, ಈದ್ ಮಿಲಾದ್ ಆರಂಭಗೊಂಡರೂ ಸಂಬಂಧವಿಲ್ಲದ ಈ ದ್ವಾರಗಳನ್ನು ಪೊಲೀಸರೇಕೆ ತೆರವುಗೊಳಿಸಲಿಲ್ಲ ? ಇವೆರಡೇ ದ್ವಾರಗಳಲ್ಲ, ಸಾವರ್ಕರ್ ಸಾಮ್ರಾಜ್ಯ ಸೇರಿದಂತೆ ಹತ್ತಾರು ಬ್ಯಾನರ್ ಗಳನ್ನು ಪೇಟೆಯಾದ್ಯಂತ ಹಾಕಲಾಗಿತ್ತು.

ಗಲಭೆ ಆರಂಭಗೊಂಡ ರಾಗಿಗುಡ್ಡ ಸೌಹಾರ್ದತೆಯ ಊರು. ಇಲ್ಲಿ ಗಣೇಶೋತ್ಸವ ಸೇರಿದಂತೆ ಎಲ್ಲಾ ಹಬ್ಬಗಳಲ್ಲೂ ಸೌಹಾರ್ದತೆ ಇರುತ್ತದೆ. ಆದರೆ ಮಿಲಾದ್ ಗೆ ಬಂಟಿಂಗ್ಸ್ ಹಾಕುವಾಗ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ತಗಾದೆ ತೆಗೆದ ಘಟನೆಯಿಂದ ಘರ್ಷಣೆ ಆರಂಭವಾಯಿತು. ಅದಾಗಲೇ ರಸ್ತೆಗಳಲ್ಲಿ ಗಣೇಶೋತ್ಸವ ಸಂಬಂಧ ಹಾಕಲಾಗಿದ್ದ ಪ್ರಚೋದನಕಾರಿ ದ್ವಾರಗಳಿಂದ ಕೆಲ ಮುಸ್ಲಿಂ ಯುವಕರು ಪ್ರಚೋದನೆಗೆ ಒಳಗಾಗಿರಬಹುದು.

ಗಣೇಶೋತ್ಸವದ ಮೆರವಣಿಗೆಗೆ ಸಂಬಂಧವೇ ಇಲ್ಲದ ಹೆಸರು, ಫೋಟೋಗಳ ಬ್ಯಾನರ್, ದ್ವಾರಗಳನ್ನು ಉದ್ದೇಶ ಪೂರ್ವಕವಾಗಿ ಸಂಘಟಿತವಾಗಿ ಹಾಕಲಾಗಿತ್ತು. ಸಂಘಟಿತ ಕೋಮುವಾದಕ್ಕೆ ಬರುವ ಕಿಡಿಗೇಡಿ ಪ್ರತಿಕ್ರಿಯೆಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ತಪ್ಪಾಗುತ್ತದೆ. ಔರಂಗಜೇಬ್ ಸರಿಯೋ ತಪ್ಪೋ ಎಂಬ ಪ್ರಶ್ನೆಗೆ ಉತ್ತರ ಇದಲ್ಲ. ಆದರೆ, ಕೋಮುಗಲಭೆಗೆ ಮತ್ತು ಪ್ರತಿಕ್ರಿಯೆಗೆ ಕಾರಣವಾದ ಪ್ರಚೋದನೆಯ ಅಂಶಗಳನ್ನು ಹುಡುಕಿ ಬಯಲು ಮಾಡುವುದು ಈಗಿನ ಅಗತ್ಯ.

ಕೃಪೆ :eedina.com