ರಿಯಾದ್: ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯಾಗಿರುವ ಲೂಸಿಡ್ ಕಂಪನಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಮೂಲಕ ದೇಶದಲ್ಲಿ 4000 ಉದ್ಯೋಗಾವಕಾಶಗಳು ಮತ್ತು 117 ಬಿಲಿಯನ್ ಮೌಲ್ಯದ ರಫ್ತು ಆಗಲಿದೆ ಎಂದು ಸಚಿವ ಖಾಲಿದ್ ಅಲ್ಫಾಲಿಹ್ ಹೇಳಿದರು.
ಜಿದ್ದಾ ಸಮೀಪದ ರಬಿಕ್‌ನಲ್ಲಿರುವ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯಲ್ಲಿ ಲೂಸಿಡ್ ಗ್ರೂಪ್‌ನ ಎಎಂಪಿ-2 ಕಾರ್ಖಾನೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಲೂಸಿಡ್ ಕಾರು ತಯಾರಿಕಾ ಕಾರ್ಖಾನೆಯನ್ನು ತೆರೆಯುವುದು ಅಸಾಧಾರಣ ಯೋಜನೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.
ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಬದಲಾವಣೆಗೊಳ್ಳುತ್ತಿದೆ.ಇದು ಐಷಾರಾಮಿಯೋ, ಫ್ಯಾಶನೋ ಅಲ್ಲ. ಎಲೆಕ್ಟ್ರಿಕ್ ಕಾರುಗಳ ಏರಿಕೆಯು ಭೂಮಿಯನ್ನು ವಾಯು ಮಾಲಿನ್ಯದಿಂದ ರಕ್ಷಿಸಲು ಮತ್ತು ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಮಾನವಕುಲದ ಸಮರ್ಪಣೆಗೆ ಸಾಕ್ಷಿಯಾಗಿದೆ. ಸೌದಿ ಅರೇಬಿಯಾ ದೇಶದಲ್ಲಿ ಇಂತಹ ಕಾರ್ಖಾನೆ ಆರಂಭಿಸಲು ಸಾಧ್ಯವಾಗಿರುವುದು ಐತಿಹಾಸಿಕ ಸಾಧನೆಯಾಗಿದೆ.
ಮೊದಲ ಹಂತದಲ್ಲಿ ವಾರ್ಷಿಕ 5,000 ಕಾರುಗಳನ್ನು ತಯಾರಿಸಲಾಗುವುದು. ಮುಂದಿನ ಹಂತಗಳು ಪೂರ್ಣಗೊಂಡಾಗ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 1,55,000 ಕಾರುಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೂಡಿಕೆ ಸಚಿವರು ಹೇಳಿದರು. ಸೌದಿ ಮಾರುಕಟ್ಟೆಯಲ್ಲಿ ಪರಿಚಯಿಸಲು ಮತ್ತು ಇತರ ಮಾರುಕಟ್ಟೆಗಳಿಗೆ ರಫ್ತು ಮಾಡಲು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಾಗಿ ತಯಾರಿಸಲಾಗುವುದು ಎಂದು ಲುಸಿಡ್ ಗ್ರೂಪ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ತಯಾರಿಕಾ ಕೇಂದ್ರವು, ಹೂಡಿಕೆ, ಕೈಗಾರಿಕಾ ಅಭಿವೃದ್ಧಿ ನಿಧಿ ಮತ್ತು ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯಿಂದ ಗಮನಾರ್ಹ ಬೆಂಬಲವನ್ನು ಪಡೆದಿದೆ. ಸೌದಿ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಕಾರ್ಯತಂತ್ರದ ಉದ್ದೇಶವನ್ನು ವೇಗಗೊಳಿಸುವಲ್ಲಿ ಇದು ಮೂಲಭೂತ ಪಾತ್ರವನ್ನು ವಹಿಸುತ್ತದೆ. 2030 ರ ವೇಳೆಗೆ ಕನಿಷ್ಠ 30 ಪ್ರತಿಶತ ಸೌದಿ ಕಾರುಗಳು ಎಲೆಕ್ಟ್ರಿಕ್ ಆಗಿರುವ ಸೌದಿ ಗ್ರೀನ್ ಇನಿಶಿಯೇಟಿವ್‌ನ ಗುರಿಯನ್ನು ಸಾಧಿಸುವಲ್ಲಿ ಲುಸಿಡ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲುಸಿಡ್ ಗ್ರೂಪ್ ಸೂಚಿಸಿದೆ.