ಮಂಗಳೂರು: ಹಸಿರು ಬಟ್ಟೆ ತೊಟ್ಟು, ಕುಣಿದು ಕುಪ್ಪಳಿಸಿ, ಕೇಕೆ ಹಾಕುವುದು ಪ್ರವಾದಿ ಪ್ರೇಮವಲ್ಲ, ಸಹೋದರ ಧರ್ಮೀಯರ ಮನಪರಿವರ್ತನೆ ಮಾಡುವಂತಹ ಸತ್ಕರ್ಮಗಳನ್ನು ಮಾಡುವುದೇ ಪ್ರವಾದಿ ಪ್ರೇಮವಾಗಿದೆ ಎಂದು ಸುನ್ನಿ ಸಂಘಟನೆಗಳ ನೇತಾರ ಡಾ. ಎಂ.ಎಸ್.ಎಂ. ಅಬ್ದುರ‌್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಅವರು ಕಳೆದ ಸೋಮವಾರ ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ದ.ಕ. ಜಿಲ್ಲೆ ವೆಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ‘ಇಲಲ್ ಹಬೀಬ್’ ಮೀಲಾದ್ ಬೃಹತ್ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದರು.
‘ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಪ್ರತಿಮೆಯನ್ನು ಜಗತ್ತಿನ ಎಲ್ಲೂ ಕಾಣಲು ಸಾಧ್ಯವಿಲ್ಲ, ಅವರ ಸ್ಮಾರಕ ಕಟ್ಟಡಗಳೂ ಇಲ್ಲ. ಅವರ ಹೆಸರಿನ ಮಾರ್ಗಗಳೂ ಇಲ್ಲ. ಸಭಾಂಗಣ, ಶಾಲೆ, ಪಾರ್ಕ್‌ಗಳೂ ಇಲ್ಲ. ಯಾಕೆಂದರೆ ಪ್ರೀತಿ, ವಿಶ್ವಾಸ, ಸ್ನೇಹ, ಶಾಂತಿ, ಕರುಣೆ, ದಯೆ, ಮಾನವೀಯತೆ, ಸಹಿಷ್ಣುತೆಯ ಮೂಲಕ ಜಗತ್ತಿನ 200 ಕೋಟಿ ಮುಸ್ಲಿಮರ ಹೃದಯ ಗೆದ್ದ ಧೀಮಂತ ನಾಯಕರಾಗಿದ್ದರು. ಅವರ ಸಂದೇಶವು ಅಂದಿಗೆ ಮಾತ್ರವಲ್ಲ, ಇಂದಿಗೂ ಪ್ರಸ್ತುತವಾಗಿದೆ ಎಂದರು.
ಜಗತ್ತಿನಲ್ಲಿ ಶಾಂತಿ ನೆಲೆಸಬೇಕು, ಎಲ್ಲರೂ ನೆಮ್ಮದಿಯಿಂದ ಬಾಳಬೇಕು. ಯಾರೂ ಯಾರ ಮೇಲೆ ಅನ್ಯಾಯ, ಅಕ್ರಮ ಎಸಗಬಾರದು. ಜಾತಿ, ಭಾಷೆ, ಧರ್ಮ, ವರ್ಣ ಇತ್ಯಾದಿ ಭೇದಭಾವ ಮಾಡದೆ ಶಾಂತಿ-ಸೌಹಾರ್ದದ ಜೀವನ ಸಾಗಿಸ ಬೇಕು ಎಂದು ಪ್ರವಾದಿಯವರು ಸಂದೇಶ ಸಾರಿದ್ದರು. ಆ ಸಂದೇಶ ಸಾರ್ವಕಾಲಿಕವಾಗಿದೆ ಎಂದು ಝೈನಿ ಕಾಮಿಲ್ ಸಖಾಫಿ ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ನೆಲ್ಸನ್ ಮಂಡೇಲಾ, ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ಪ್ರಮುಖರು ಕೂಡ ಪ್ರವಾದಿ ಅವರನ್ನು ಕೊಂಡಾಡಿದ್ದಾರೆ. ಅವರ ಜೀವನದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಅಸಹಿಷ್ಣುತೆಯನ್ನು ಎಂದಿಗೂ ಸಹಿಸದ ಪ್ರವಾದಿಯು ಜಗತ್ತನ್ನು ತನ್ನ ಕುಟುಂಬ ಎಂಬಂತೆ ಕಂಡಿದ್ದರು. ಹಾಗಾಗಿ ದೇಶ, ಭಾಷೆ, ಸಂಸ್ಕೃತಿಯನ್ನು ಮೀರಿ ಅವರನ್ನು ಮುಸ್ಲಿಮರು ಪ್ರೀತಿಸುತ್ತಿದ್ದಾರೆ. ನಾಡಿನ ಗಣ್ಯರು ಅವರನ್ನು ಗೌರವಿಸುತ್ತಿದ್ದಾರೆ ಎಂದು ಝೈನಿ ಕಾಮಿಲ್ ಹೇಳಿದರು.
ನಗರದ ಬಾವುಟಗುಡ್ಡ ಈದ್ಗಾ ಮಸ್ಜಿದ್ ಬಳಿಯಿಂದ ಆರಂಭಗೊಂಡ ರ‍್ಯಾಲಿಯು ಜ್ಯೋತಿಯ ಅಂಬೇಡ್ಕರ್ ವೃತ್ತದ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಸಾಗಿಬಂದು ಮಂಗಳೂರು ಮಿನಿ ವಿಧಾನಸೌಧದ ಬಳಿ ತಲುಪಿತು. ದ.ಕ. ವೆಸ್ಟ್ ಜಿಲ್ಲೆಯ ಸುರತ್ಕಲ್, ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಮುಡಿಪು, ದೇರಳಕಟ್ಟೆ, ಉಳ್ಳಾಲ ಸಹಿತ ಏಳು ರೆನ್ ಹಾಗೂ ಡಿವಿಷನ್‌ಗಳ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಆಕರ್ಷಕ ದಫ್, ಸ್ಕೌಟ್ ತಂಡದ ಜೊತೆ ಸಾವಿರಾರು ಕಾರ್ಯಕರ್ತರು ಪ್ರವಾದಿ ಗುಣಗಾನ, ಘೋಷಣೆ ಮೊಳಗಿಸಿದರು.
ದ.ಕ.ಜಿಲ್ಲೆ ವಕ್ಫ್ ಬೋರ್ಡ್ ಅಧ್ಯಕ್ಷ ಬಿ.ಎ.ನಾಸಿರ್ ಲಕ್ಕಿಸ್ಟಾರ್ ಜಾಥಾದ ನಾಯಕರಿಗೆ ಧ್ವಜ ಹಸ್ತಾಂತರಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು. ಸುನ್ನಿ ಸಂಘಟನೆಗಳ ನಾಯಕ ವಳವೂರು ಮುಹಮ್ಮದ್ ಸಅದಿ ದುಆಗೈದರು.
ಮಂಗಳೂರು ಮಿನಿ ವಿಧಾನಸೌಧದ ಮುಂದೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ದ.ಕ.ಜಿಲ್ಲಾ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ ಮಾತನಾಡಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಇಲಲ್ ಹಬೀಬ್ ಮೀಲಾದ್ ಸಮಿತಿಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ವಿ.ಯು.ಇಸ್ಹಾಕ್ ಝುಹ್ರಿ, ಎಸ್‌ಎಂಎ ಜಿಲ್ಲಾಧ್ಯಕ್ಷ ಎ.ಪಿ.ಇಸ್ಮಾಯೀಲ್ ಅಡ್ಯಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ, ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಶ್ರಫ್ ಸಅದಿ ಮಲ್ಲೂರು, ಕೆಕೆಎಂ ಕಾಮಿಲ್ ಸಖಾಫಿ, ಬಶೀರ್ ಮದನಿ ಕೂಳೂರು, ಇಸ್ಮಾಯೀಲ್ ಸಅದಿ ಕಿನ್ಯ, ಕೆಎಂ ಮುಸ್ತಫಾ ನಯೀಮಿ, ಎಸ್‌ಕೆ ಖಾದರ್ ಹಾಜಿ ಮುಡಿಪು, ಹಮೀದ್ ಬಜ್ಪೆ, ಮುಹಮ್ಮದ್ ಸುಹೈಲ್ ಫರಂಗಿಪೇಟೆ, ಶಾಕಿರ್ ಎಂಎಸ್ಸಿ ಬಜಪೆ, ಮುತ್ತಲಿಬ್ ಮೂಡುಬಿದಿರೆ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಇಲಲ್ ಹಬೀಬ್ ಮೀಲಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಕತರ್, ಎಸ್‌ವೈಎಸ್ ದ.ಕ. ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಪ್ರಿಂಟೆಕ್, ಎಸ್ಸೆಸ್ಸೆಫ್ ಕೋಶಾಧಿಕಾರಿ ಇರ್ಷಾದ್ ಹಾಜಿ ಗೂಡಿನಬಳಿ, ಸಮಿತಿಯ ಕೋಶಾಧಿಕಾರಿ ಮುಹಮ್ಮದ್ ಅಝ್ಮಲ್ ಕಾವೂರು ಮತ್ತಿತರರು ಪಾಲ್ಗೊಂಡಿದ್ದರು.