janadhvani

Kannada Online News Paper

ಮಂಚಿ: ಸ್ವಾತಂತ್ರ ದಿನಾಚರಣೆ ವೇಳೆ ಸಾವರ್ಕರ್ ಗೆ ಜೈಕಾರ- ಶಾಲಾ ಮುಖ್ಯೋಪಾಧ್ಯಾಯಿನಿ ವಿರುದ್ಧ ಆಕ್ರೋಶ

ಪ್ರಕರಣದ ಹಿಂದೆ ಶಿಕ್ಷಣದ ಕೇಸರೀಕರಣ ಷಡ್ಯಂತ್ರ ಇನ್ನೂ ಜೀವಂತವಿರುವುದಾಗಿ ಕಂಡು ಬರುತ್ತಿದೆ.

ಬಂಟ್ವಾಳ: ಇಲ್ಲಿನ ಮಂಚಿ, ಕೊಳ್ನಾಡು ಸರಕಾರಿ ಪ್ರೌಢ ಶಾಲೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಮೂಲಕ ಸಾವರ್ಕರ್ ಗೆ ಜೈಕಾರ ಕೂಗಿಸಿದ್ದು ವಿವಾದವೆಬ್ಬಿಸಿದೆ.

ಶಿಕ್ಷಣ ಸಚಿವರು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾವರ್ಕರ್ ಪಠ್ಯವನ್ನು ಕಿತ್ತು ಬಿಸಾಕಿದ್ದೇವೆ ಎಂದು ಹೇಳಿದ್ದು, ಮತ್ತೆ ಸರ್ಕಾರಿ ಶಾಲೆಯಲ್ಲಿ ಸಾವರ್ಕರ್ ಗೆ ಜೈಕಾರ ಕೂಗಿಸುವ ಅಗತ್ಯವೇನಿತ್ತು ಎಂದು ವಿದ್ಯಾರ್ಥಿಗಳ ಪೋಷಕರು ಪ್ರಶ್ನಿಸಿದ್ದಾರೆ.

ಶಾಲೆಯ ಶಿಕ್ಷಕಿಯೋರ್ವರು ವಿದ್ಯಾರ್ಥಿನಿಯ ಮೂಲಕ ಹೇಡಿ ಸಾವರ್ಕರ್ ಗೆ ಜೈಕಾರ ಕೂಗಿಸಿದ್ದಾರೆ. ವಿದ್ಯಾರ್ಥಿನಿಯ ಹೆತ್ತವರು ಈ ಬಗ್ಗೆ ವಿಚಾರಿಸಲು ತೆರಳಿದಾಗ ಅಲ್ಲಿನ ಮುಖ್ಯ ಉಪಾದ್ಯಾಯಿನಿ ಗೈರು ಹಾಜರಾಗಿದ್ದು, ಇತರ ಶಿಕ್ಷಕಿಯರ ಬಳಿ ವಿಚಾರಿಸಿದಾಗ ಹಾರಿಕೆಯ ಉತ್ತರ ಲಭಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಘಟನೆ ನಡೆದ ದಿನದಲ್ಲೇ ಬಂಟ್ವಾಳ ಕ್ಷೇತ್ರ ಶಿಕ್ಷಣ ಇಲಾಖಾ ಅಧಿಕಾರಿಗೆ ಟೆಲಿಫೋನ್ ಮೂಲಕ ಮಾಹಿತಿ ನೀಡಲಾಗಿದ್ದು, ಅವರು ಸ್ಥಳದಲ್ಲಿ ಇಲ್ಲ ಸ್ವಲ್ಪ ಹೊರಗಡೆ ಇದ್ದೇನೆ ಆಮೇಲೆ ವಿಚಾರಿಸುವೆ ಎಂಬ ಅಸಡ್ಡೆಯ ಉತ್ತರ ನೀಡಿದ್ದಾರೆ.

ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬ್ರಿಟೀಷರ ಬೂಟ್ ನೆಕ್ಕಿದ ಹೇಡಿ ಸಾವರ್ಕರ್ ಗೆ ಜೈ ಕೂಗಿದ ವಿಡಿಯೋ ಭಾರೀ ವೈರಲ್ ಆಗಿದ್ದರೂ ಕೂಡ ಈವರೆಗೆ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

ಇಷ್ಟೇಲ್ಲಾ ವಿದ್ಯಮಾನಗಳು ನಡೆದರೂ ಕೂಡ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಏನೂ ನಡೆದೇ ಇಲ್ಲ ಎಂಬಂತೆ, ಸುರಿಬೈಲು ಶಾಲೆಯಲ್ಲಿ ನಡೆಯುವ ಹೈಸ್ಕೂಲ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಅಚ್ಚರಿ ಮೂಡಿಸಿದೆ!

ಸದ್ರಿ ಶಾಲೆಯ ವಿದ್ಯಾರ್ಥಿಗಳ ಪೋಷಕರ ಪರವಾಗಿ ಕೆಲವರು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರ ಬಳಿ ಮೌಖಿಕ ಮನವಿ ನೀಡಿದಾಗ, ಅವರು ಪಂಚಾಯತ್ ಪಿಡಿಒ ಅವರಿಗೆ ಮನವಿ ನೀಡಿ ಎಂದು ಹಾಸ್ಯಾಸ್ಪದ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದೆ.

ಒಟ್ಟಿನಲ್ಲಿ ಪ್ರಕರಣದ ಹಿಂದೆ ಶಿಕ್ಷಣದ ಕೇಸರೀಕರಣ ಷಡ್ಯಂತ್ರ ಇನ್ನೂ ಜೀವಂತವಿರುವುದಾಗಿ ಕಂಡು ಬರುತ್ತಿದೆ. ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಪ್ರಕರಣದ ರುವಾರಿಯಾಗಿರುವ ಶಿಕ್ಷಕಿಯನ್ನು ಅಮಾನತು ಗೊಳಿಸುವಂತೆ ಸರಕಾರಿ ಪ್ರೌಢ ಶಾಲೆ ಮಂಚಿ ಇಲ್ಲಿನ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com