janadhvani

Kannada Online News Paper

ಕೇಂದ್ರ ಸರಕಾರದ ಹಸ್ತಕ್ಷೇಪ: ಸುಪ್ರೀಂ ನ್ಯಾಯಮೂರ್ತಿ ನೇಮಕಾತಿಯಲ್ಲಿ ಗೊಂದಲ

ನವದೆಹಲಿ : ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದ ಇಬ್ಬರಲ್ಲಿ ಒಬ್ಬರನ್ನು ನೇಮಕ ಮಾಡಿ ಇನ್ನೊಬ್ಬರನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರ ನೇಮಕ ಶಿಫಾರಸನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು ಚಿಂತೆಯ ವಿಚಾರ ಎಂದು ಸುಪ‍್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಹೇಳಿದ್ದಾರೆ. ನ್ಯಾಯಾಂಗದಲ್ಲಿ ಸರ್ಕಾರವು ಈ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದು ಅಪೇಕ್ಷಣೀಯ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಕೀಲ ಪ್ರಶಾಂತ್ ಭೂಷಣ್‌ ಅವರೂ ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರದ ನಿರ್ಧಾರಕ್ಕೆ ರಾಜಕೀಯ ವಲಯದಲ್ಲಿಯೂ ಭಾರಿ ಟೀಕೆ ಎದುರಾಗಿದೆ. ಸರ್ಕಾರದ ನಿಲುವನ್ನು ಕಾಂಗ್ರೆಸ್‌ ಖಂಡಿಸಿದೆ. ‘ನ್ಯಾಯಮೂರ್ತಿ ಗಳ ನೇಮಕ ವಿಚಾರದಲ್ಲಿ ಕೊಲಿಜಿಯಂ ಶಿಫಾರಸು ಅಂತಿಮ. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಕಾನೂನಿ ಗಿಂತ ಮೇಲಿನದ್ದೇ’ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

‘ಈ ನೇಮಕ (ಇಂದೂ ಮಲ್ಹೋತ್ರಾ) ತಪ್ಪು ನಡೆಯಾಗಿದ್ದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಜ್ಯೇಷ್ಠತೆಯಲ್ಲಿ ಗೊಂದಲ ಮೂಡಿಸುತ್ತದೆ. ನ್ಯಾಯಮೂರ್ತಿಗಳ ಸೇವಾ ಹಿರಿತನ ಸುಪ್ರೀಂ ಕೋರ್ಟ್‌ನಲ್ಲಿ ಎಷ್ಟು ಮುಖ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೂಕ್ಷ್ಮವಾದ ಪ್ರಕರಣಗಳ ವಿಚಾರಣೆ ಯನ್ನು ಕಿರಿಯ ನ್ಯಾಯಮೂರ್ತಿಗಳಿಗೆ ವಹಿಸಬಾರದು ಎಂದು ಹೇಳಲಾ ಗುತ್ತಿದೆ. ಮುಂದೊಂದು ದಿನ ನ್ಯಾಯಮೂರ್ತಿ ಜೋಸೆಫ್‌ ಅವರು ಕಿರಿಯರಾಗಿದ್ದು ನಿರ್ದಿಷ್ಟ ಪ್ರಕರಣದ ವಿಚಾರಣೆಗೆ ಅರ್ಹರಲ್ಲ ಎಂಬ ಮಾತು ಬಂದರೆ ಅದು ಬೇಸರದ ವಿಚಾರ’ ಎಂದು ವಿಕಾಸ್‌ ಸಿಂಗ್‌ ಹೇಳಿದ್ದಾರೆ.

ಕೊಲಿಜಿಯಂ ಶಿಫಾರಸು ಮಾಡಿದ ವ್ಯಕ್ತಿಯನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡದೆ ನ್ಯಾಯಾಂಗದ ಸ್ವಾಯತ್ತೆಯನ್ನು ನಾಶ ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಪ್ರಶಾಂತ್‌ ಭೂಷಣ್ ಆರೋಪಿಸಿದ್ದಾರೆ.

‘ಜೋಸೆಫ್‌ ಪ್ರಕರಣ ಇದಕ್ಕೆ ಅತ್ಯಂತ ಸ್ಪಷ್ಟವಾದ ನಿದರ್ಶನವಾಗಿದೆ. ಅವರ ಹೆಸರನ್ನು ನಾಲ್ಕು ತಿಂಗಳ ಹಿಂದೆ ಶಿಫಾರಸು ಮಾಡಲಾಗಿತ್ತು. ಉತ್ತರಾಖಂಡ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ತೀರ್ಪು ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೊಲಿಜಿಯಂನ ಸರ್ವಾನುಮತದ ಶಿಫಾರಸನ್ನು ಸರ್ಕಾರ ಹಿಡಿದಿಟ್ಟುಕೊಂಡಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಚಾರ’ ಎಂದು ಅವರು ಹೇಳಿದ್ದಾರೆ.

ನಡೆದದ್ದೇನು 
ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೋಸೆಫ್‌ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಕೊಲಿಜಿಯಂ ಜನವರಿಯಲ್ಲಿ ಶಿಫಾರಸು ಮಾಡಿತ್ತು. ಜನವರಿ 22ರಂದು ಈ ಪಟ್ಟಿ ಕಾನೂನು ಸಚಿವಾಲಯ ತಲುಪಿತ್ತು.

ಫೆಬ್ರುವರಿ ಮೊದಲ ವಾರದಲ್ಲಿ ಈ ಪಟ್ಟಿಯನ್ನು ಸರ್ಕಾರ ಪರಿಶೀಲನೆಗೆ ಒಳಪಡಿಸಿತ್ತು. ಮಲ್ಹೋತ್ರಾ ಅವರನ್ನು ಮಾತ್ರ ನೇಮಕ ಮಾಡಲು ಬಯಸಿದ್ದ ಕೇಂದ್ರ, ಶಿಫಾರಸನ್ನು ತಡೆ ಹಿಡಿಯಿತು. ಈಗ ಮಲ್ಹೋತ್ರಾ ಅವರನ್ನು ಮಾತ್ರ ನೇಮಕ ಮಾಡಲಾಗಿದೆ. ಜೋಸೆಫ್‌ ಅವರ ನೇಮಕದ ಶಿಫಾರಸನ್ನು ಮರುಪರಿಶೀಲನೆ ನಡೆಸುವಂತೆ ಸರ್ಕಾರ ಸೂಚಿಸಿದೆ.
ಇಂದೂ ನೇಮಕ ತಡೆಗೆ ‘ಸುಪ್ರೀಂ’ ನಕಾರ
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ನಿಯೋಜಿಸಲಾಗಿರುವ ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರ ನೇಮಕಾತಿಯನ್ನು ತಡೆ ಹಿಡಿಯಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಮಲ್ಹೋತ್ರಾ ನೇಮಕಾತಿಗೆ ತಡೆ ನೀಡುವಂತೆ ಕೋರಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ನೂರಕ್ಕೂ ಹೆಚ್ಚು ಸದಸ್ಯರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

‘ಇದೊಂದು ಊಹೆಗೂ ಮೀರಿದ, ಯೋಚಿಸಲೂ ಅಸಾಧ್ಯವಾದ ಮತ್ತು ಆತ್ಮಸಾಕ್ಷಿಗೆ ವಿರುದ್ಧವಾದ ಅರ್ಜಿ. ಇಂತಹ ಅರ್ಜಿಯನ್ನು ಈ ಮೊದಲು ನೋಡಿರಲಿಲ್ಲ’ ಎಂದು ಮಿಶ್ರಾ ಆಶ್ಚರ್ಯ ವ್ಯಕ್ತಪಡಿಸಿದರು.

ಜೋಸೆಫ್‌ ಅವರ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡುವವರೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಇಂದೂ ಮಲ್ಹೋತ್ರಾ ಅವರಿಗೆ ಅವಕಾಶ ನೀಡದಂತೆ ಇಂದಿರಾ ಜೈಸಿಂಗ್‌ ಮನವಿ ಮಾಡಿದರು.

ಕೇಂದ್ರದ ತಾರತಮ್ಯ: 
‘ಕೊಲಿಜಿಯಂ ಶಿಫಾರಸು ಮಾಡಿದ್ದ ಮಲ್ಹೋತ್ರಾ ಮತ್ತು ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌  ಈ ಇಬ್ಬರ ಹೆಸರನ್ನೂ ಸರ್ಕಾರ ಸ್ವೀಕರಿಸಬೇಕಿತ್ತು. ತಿರಸ್ಕರಿಸುವುದಿದ್ದರೆ ಇಬ್ಬರ ಹೆಸರನ್ನೂ ತಿರಸ್ಕರಿಸಬೇಕಿತ್ತು. ಒಬ್ಬರ ಹೆಸರನ್ನು ಮಾತ್ರ ಸ್ವೀಕರಿಸಿ, ಇನ್ನೊಬ್ಬರ ಹೆಸರು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ತಾರತಮ್ಯ ಎಸಗಿದೆ’ ಎಂದು ಅವರು ವಾದಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಮಲ್ಹೋತ್ರಾ ಜತೆಗೆ ಜೋಸೆಫ್‌ ಅವರನ್ನೂ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಅವರು ಮನವಿ ಮಾಡಿದರು.

ಇದೆಂಥಾ ಮನವಿ!: ‘ಅರೇ…ಇದೆಂಥಾ ಮನವಿ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಮಿಶ್ರಾ, ‘ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರನ್ನು ಮರು ಪರಿಶೀಲನೆಗೆ ವಾಪಸ್‌ ಕಳಿಸುವ ಅಧಿಕಾರ ಸರ್ಕಾರಕ್ಕಿದೆ’ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಮಲ್ಹೋತ್ರಾ ಮತ್ತು  ಜೋಸೆಫ್‌ ಹೆಸರನ್ನು ದೀಪಕ್‌ ಮೀಶ್ರಾ ನೇತೃತ್ವದ ಐವರು ಸದಸ್ಯರ ಕೊಲಿಜಿಯಂ ಇದೇ ಜನವರಿ 10ರಂದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
**
ತಿರಸ್ಕರಿಸಲು ಕಾರಣ 
ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಹಿರಿತನ ಪಟ್ಟಿಯಲ್ಲಿ ಜೋಸೆಫ್‌ ಅವರದ್ದು 42ನೇ ಹೆಸರು. ಮುಖ್ಯ ನ್ಯಾಯಮೂರ್ತಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೂ ಜೋಸೆಫ್‌ ಅವರು ಹಿರಿತನದಲ್ಲಿ 11ನೆಯವರು.

ಜೋಸೆಫ್‌ ಅವರು ಕೇರಳ ಹೈಕೋರ್ಟ್‌ನಿಂದ ಬಂದವರು. ಈ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾಕಷ್ಟು ಪ್ರಾತಿನಿಧ್ಯ ಇದೆ. ಕೋಲ್ಕತ್ತ, ಛತ್ತೀಸಗಡ, ಗುಜರಾತ್‌, ರಾಜಸ್ಥಾನ, ಜಾರ್ಖಂಡ್‌, ಉತ್ತರಾಖಂಡ, ಸಿಕ್ಕಿಂ, ಮಣಿಪುರ ಮತ್ತು ಮೇಘಾಲಯ ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ಹೊಂದಿಲ್ಲ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ನ್ಯಾಯಮೂರ್ತಿಗಳು ಬಹಳ ಕಾಲದಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಇಲ್ಲ. ಹಾಗಾಗಿ ಜೋಸೆಫ್‌ ಬದಲಿಗೆ ಈ ಸಮುದಾಯಗಳಿಗೆ ಸೇರಿದವರಿಗೆ ಆದ್ಯತೆ ನೀಡುವುದು ಉತ್ತಮ ಎಂಬ ಅರ್ಥದ ಸಲಹೆಯನ್ನು ಕೇಂದ್ರ ನೀಡಿದೆ.

ಶಿಫಾರಸಿನಲ್ಲಿ ಏನಿತ್ತು ? 
ಹೈಕೋರ್ಟ್‌ಗಳ ಇತರ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಮೂರ್ತಿಗಳಿಗಿಂತ ಸುಪ‍್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಲು ಜೋಸೆಫ್‌ ಅವರು ಎಲ್ಲ ರೀತಿಯಲ್ಲಿಯೂ ಹೆಚ್ಚು ಸೂಕ್ತವಾಗಿದ್ದಾರೆ. ಅವರು ಅತ್ಯುತ್ತಮ ಆಯ್ಕೆ ಎಂದು ಶಿಫಾರಸಿನಲ್ಲಿ ಕೊಲಿಜಿಯಂ ಹೇಳಿತ್ತು.

ಈ ನಿರ್ಧಾರ ಕೈಗೊಳ್ಳುವಾಗ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಮೂರ್ತಿಗಳ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದೂ ಸ್ಪಷ್ಟವಾಗಿ ತಿಳಿಸಿತ್ತು.
**
ಮರುಕಳಿಸಿದ ಇತಿಹಾಸ 
ಕೊಲಿಜಿಯಂನ ಪೂರ್ವಾನುಮತಿ ಇಲ್ಲದೆ ಶಿಫಾರಸು ಪಟ್ಟಿಯಲ್ಲಿ ಇರುವ ಕೆಲವರನ್ನು ನೇಮಕ ಮಾಡಿ ಕೆಲವರನ್ನು ಕೈಬಿಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು 2014ರ ಜೂನ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್‌.ಎಂ. ಲೋಧಾ ಅವರು ಪತ್ರ ಬರೆದು ಸರ್ಕಾರಕ್ಕೆ ತಿಳಿಸಿದ್ದರು.

ಹಿರಿಯ ವಕೀಲ ಮತ್ತು ಮಾಜಿ ಸಾಲಿಸಿಟರ್‌ ಜನರಲ್‌ ಗೋಪಾಲ್‌ ಸುಬ್ರಮಣ್ಯಂ ಮತ್ತು ಇತರ ಕೆಲವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇಮಿಸುವಂತೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ, ಗೋಪಾಲ್‌ ಸುಬ್ರಮಣ್ಯಂ ಹೆಸರನ್ನು ಕೈಬಿಟ್ಟು ಉಳಿದವರ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಈ ಸಂದರ್ಭದಲ್ಲಿ ಲೋಧಾ ಅವರು ಪತ್ರ ಬರೆದಿದ್ದರು.

ಅದಾದ ಬಳಿಕ, ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡುವುದಕ್ಕೆ ನೀಡಿದ್ದ ಅನುಮತಿಯನ್ನು ಸುಬ್ರಮಣ್ಯಂ ಹಿಂದಕ್ಕೆ ಪಡೆದರು. ಹಾಗಾಗಿ ವಿವಾದ ತಣ್ಣಗಾಗಿತ್ತು.

ಕೃಪೆ:ಪ್ರಜಾವಾಣಿ

error: Content is protected !! Not allowed copy content from janadhvani.com