janadhvani

Kannada Online News Paper

ಅಲ್ಪಸಂಖ್ಯಾತರನ್ನು ದೂರ ಮಾಡಿದ ಎಲ್ಲಾ ದೇಶಗಳು ಕೂಡಾ ನಾಶವಾಗಿದೆ- ಡಾ|ಕೆ.ಟಿ.ಜಲೀಲ್

ಇತಿಹಾಸದಲ್ಲಿ ಯಾವುದೇ ಜನಾಂಗ, ಯಾವುದೇ ಧರ್ಮವನ್ನು ನಿರಾಕರಿಸಿ ಅಭಿವೃದ್ದಿಹೊಂದಿದ ದೇಶಗಳು ಕಾಣುವುದಿಲ್ಲ

ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿರುವ ಮುಸ್ಲಿಂ ಸಮಾವೇಶವು ಮಂಗಳೂರಿನಲ್ಲಿ ನಿನ್ನೆ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ಶಾಸಕ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ|ಕೆ.ಟಿ.ಜಲೀಲ್ ರವರು, ಇತಿಹಾಸದಲ್ಲಿ ಯಾವುದೇ ಜನಾಂಗ, ಯಾವುದೇ ಧರ್ಮವನ್ನು ನಿರಾಕರಿಸಿ ಅಭಿವೃದ್ದಿಹೊಂದಿದ ದೇಶಗಳು ಕಾಣುವುದಿಲ್ಲ. ಅದೇ ರೀತಿ ಭಾರತವು ಸಹ ಯಾವುದೇ ಧರ್ಮ ನಿರಾಕರಿಸಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

“ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಯಾವುದನ್ನೂ ಭಾರತ ನಿರಾಕರಿಸುವುದಿಲ್ಲ ಎಂಬ ನಿಟ್ಟಿನಲ್ಲಿ ವಿಶ್ವದಾದ್ಯಂತ ಹೆಸರು ಹೊಂದಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ನಮ್ಮ ದೇಶವು ಯಾವುದೇ ಧರ್ಮವನ್ನು ಯಾವುದೇ ಕಾಲದಲ್ಲಿ ನಿರಾಕರಿಸಿಲ್ಲ” ಎಂದರು.

“ಹಿಂದೂ ಧರ್ಮದ ಅಶೋಕ ಚಕ್ರವರ್ತಿ ಕಳಿಂಗ ಯುದ್ದದ ನಂತರ ಬೌಧ್ಧ ಧರ್ಮ ಪಾಲಿಸಿದರು. ಅವರು ಬೌದ್ಧ ಧರ್ಮ ಸ್ವೀಕರಿಸಿದ ನಂತರ ಅವರನ್ನು ಯಾರೂ ಪ್ರಶ್ನಿಸಿಲ್ಲ. ಅದೇ ರೀತಿ ಮುಸ್ಲಿಂ ರಾಜರು 900 ವರ್ಷಗಳ ಕಾಲ ಆಡಳಿತ ನಡೆಸಿದರು. ಒಂದು ವೇಳೆ ಅವರು ಧರ್ಮವನ್ನು ಆಡಳಿತದಲ್ಲಿ ಜೊತೆಯಾಗಿಸಿದ್ದರೆ ಇಷ್ಟೊಂದು ಧೀರ್ಘ ಕಾಲ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭಯಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಬಹದ್ದೂರೂ ಶಾ ಜಫಾರ್‌ರನ್ನು ದೇಶದ ಬಹಸಂಖ್ಯಾತ ಹಿಂದೂಗಳು ತಮ್ಮ ನಾಯಕರಾಗಿ ಆಯ್ಕೆ ಮಾಡಿದ್ದರು” ಎಂಬದನ್ನು ಅವರು ಸ್ಮರಿಸಿದರು.

ಮೊಘಲರ ಆಡಳಿತ ಕೊನೆಗೊಂಡಿದ್ದು ಧರ್ಮದ ಕಾರಣಕ್ಕೆ ಅಲ್ಲ. ಬದಲಾಗಿ ಬ್ರಿಟೀಷರ ಕಾರಣದಿಂದಾಗಿದೆ. ಯಾವುದೇ ಧರ್ಮ ಆಚರಿಸದ ಜವಾಹರಲಾಲ್ ನೆಹರೂ ದೇಶವನ್ನು 16 ವರ್ಷ ಆಡಳಿತ ನಡೆಸಿದ್ದಾರೆ. ಅವರನ್ನು ಯಾರೂ ಪ್ರಶ್ನಿಸಲಿಲ್ಲ. ವಿಶ್ವದಾದ್ಯಂತ ಭಾರತವು ತನ್ನ ಬಹುತ್ವ ಗುಣದಿಂದ ಗುರುತಿಸಲ್ಪಟ್ಟಿದೆ. ಆದರೆ ಈ ಬಹುತ್ವದ ಬಗ್ಗೆ ಏನೂ ತಿಳಿದಿಲ್ಲದ ಜನರು ಆಡಳಿತ ನಡೆಸುತ್ತಿರುವುದು ವಿಷಾದನೀಯ ಎಂದರು.

ಅಟಲ್ ಬಿಹಾರಿ ವಾಜಪೇಯಿಯವರು ಆಡಳಿತ ಮಾಡಬೇಕಾದರೆ ಭಾರತ ಇಷ್ಟು ಕೋಮು ದ್ರುವೀಕರಣಗೊಂಡಿರಲಿಲ್ಲ. ವಾಜಪೇಯಿ ನಂತರ ಬಂದ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ಒಂದು ಸಮುದಾಯವನ್ನು ತಿರಸ್ಕಾರ ಮಾಡುತ್ತಾ ಬಂದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

“ಅಲ್ಪಸಂಖ್ಯಾತರನ್ನು ತಮ್ಮ ದೇಶದಿಂದ ದೂರ ಮಾಡಿದ ಎಲ್ಲಾ ದೇಶಗಳು ಕೂಡಾ ನಾಶವಾಗಿದೆ. ಇದಕ್ಕೆ ಜರ್ಮನ್ ಒಂದು ಉದಾಹರಣೆ. ಜರ್ಮನ್‌ನಲ್ಲಿ ಯಹೂದಿಗಳನ್ನು ಓಡಿಸದಿದ್ದರೆ ಜರ್ಮನ್ ಇಂದು ವಿಶ್ವದ ಶಕ್ತಿಶಾಲಿ ದೇಶವಾಗಿರುತ್ತಿತ್ತು. ಪ್ರಾನ್ಸ್, ಸ್ಪೇನ್‌ನಲ್ಲಿ ಕೂಡಾ ಇದೆ ನಡೆದಿದೆ. ಈ ದೇಶ ತೊರೆದುಹೋದ ಜನರು ತಾವು ನೆಲೆ ನಿಂತ ದೇಶಗಳನ್ನು ಅಭಿವೃದ್ಧಿ ಮಾಡಿದರು. ಹಾಗೆಯೇ ಭಾರತವು ಯಾವುದೇ ಜನಾಂಗ, ಧರ್ಮವನ್ನು ನಿರಾಕರಿಸಿ ದೇಶ ಮುನ್ನಡೆಸಲು ಸಾಧ್ಯವಿಲ್ಲ. ದೇಶದ ಅಭಿವೃದ್ದಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿದೆ. ಉದ್ಯಾನದಲ್ಲಿ ಹಲವು ಬಗೆಯ ಹೂವುಗಳಿದ್ದರೆ ಅದು ನೋಡಲು ಸುಂದರ. ಹಾಗೆಯೇ ಭಾರತದಲ್ಲಿ ಹಲವಾರು ಸಂಸ್ಕೃತಿ ಇದ್ದರೆ ಅದು ನೋಡಲು ಸುಂದರ” ಎಂದು ಜಲೀಲ್ ಅಭಿಪ್ರಾಯಪಟ್ಟರು.

ವಿಭಜನೆ ನಂತರ ಧರ್ಮದ ಆಧಾರದಲ್ಲಿ ನಿರ್ಮಾಣವಾದ ಪಾಕಿಸ್ತಾನ ರಾಷ್ಟ್ರವು ಎಂದಿಗೂ ನೆಮ್ಮದಿಯಿಂದ ಇರುವ ದೇಶವಾಗಿಲ್ಲ. ಅಲ್ಲಿ ಹಿಂಸೆ, ದಾಳಿ ತೀವ್ರ ಮಟ್ಟಕ್ಕೆ ಏರಿದೆ. ಇದನ್ನು ಭಾರತ ಪಾಠವನ್ನಾಗಿ ತೆಗೆದುಕೊಳ್ಳಬೇಕು. ನಮ್ಮ ದೇಶದಲ್ಲಿ ಜಾತ್ಯಾತೀತಯೇ ನಮ್ಮ ಜೀವವಾಯು. ಜಾತ್ಯಾತೀತತೆ ಇಲ್ಲವಾದರೆ ಭಾರತ ಇಲ್ಲವಾಗುತ್ತದೆ. ಆದರೆ ಜಾತ್ಯಾತೀತತೆ ಮೇಲೆ ದಾಳಿ ನಡೆಯುತ್ತಿದೆ. ಆ ದಾಳಿಯನ್ನು ಹಿಮ್ಮೆಟ್ಟಿಸುವ ಮೂಲಕ ಭಾರತವನ್ನು ಪಾಕಿಸ್ತಾನದಂತಹ ರಾಷ್ಟ್ರವನ್ನಾಗಿಸಲು ನಾವು ಅವಕಾಶ ನೀಡಬಾರದು ಎಂದರು.

ತಮ್ಮ ದೊಡ್ಡಪ್ಪನವರಾದ ಅಬೂ ತ್ವಾಲಿಬ್ ರವರು ಇಸ್ಲಾಂ ಧರ್ಮವನ್ನು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ “ತಾವು ಧರ್ಮ ಬೋಧನೆಯನ್ನು ನಡೆಸಿ, ಧರ್ಮಕ್ಕೆ ಬಲವಂತಪಡಿಸುವ ಹಕ್ಕನ್ನು ತಮಗೆ ನೀಡಿಲ್ಲ” ಎಂಬುದಾಗಿತ್ತು ಪ್ರವಾದಿ ಮುಹಮ್ಮದ್ ಸ.ಅ ರವರಿಗೆ ಅಲ್ಲಾಹನು ಖುರ್ಆನಿನಲ್ಲಿ ನೀಡಿದ ಸಂದೇಶ. ಇಸ್ಲಾಂ ಎಂದೂ ಕೂಡಾ ಬಲವಂತದ ಧರ್ಮ ಹೇರಿಕೆಯನ್ನು ಉತ್ತೇಜಿಸುವುದೂ ಇಲ್ಲ. ಅವರವರಿಗೆ ಅವರವರ ಧರ್ಮ ಎಂದು ಇಸ್ಲಾಮ್ ಪ್ರತಿಪಾದಿಸುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಸಿ. ಪಿ.ಐ.ಎಂ ಕರ್ನಾಟಕ,ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಭಾರತದಲ್ಲಿ ಮುಸ್ಲಿಮರು ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಜ್ವಲಂತ ಸಮಸ್ಯೆ ಮತ್ತು ಮುಸ್ಲಿಮ್ ಸಮುದಾಯ ಕೋಮು ದ್ವೇಷದ ಗುರಿಯಾಗಿರುವ ಕಾರಣ ಅವರ ಏಕಾಂಗಿತನ, ಭಯ ಸೃಷ್ಟಿ, ದೌರ್ಜನ್ಯ, ಪ್ರಜಾ ವ್ಯವಸ್ಥೆಯ ಸಂಸ್ಥೆಗಳು ವಿಫಲವಾಗುತ್ತಿವೆ. ಈ ಸಂಧರ್ಬದಲ್ಲಿ ಜಾತ್ಯಾತೀತ ಸಿದ್ದಾಂತ ಹೊಂದಿರುವ ರಾಜಕೀಯ ಪಕ್ಷಗಳು ಮುಸ್ಲಿಮ್ ಸಮುದಾಯದ ಸಮಸ್ಯೆಗಳ ನಿವಾರಣೆಗೆ ಒಟ್ಟಿಗೆ ನಿಲ್ಲಬೇಕು ಎಂಬ ಕಾರಣಕ್ಕಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಯವರ “ನೇತ್ರಾವತಿಯಲ್ಲಿ ನೆತ್ತರು” ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳು ಪುಸ್ತಕವನ್ನು ದಲಿತ ಮುಖಂಡರಾದ ಮಾವಳ್ಳಿ ಶಂಕರ್ ಬಿಡುಗಡೆ ಮಾಡಿದರು. ಬಿ.ಎಂ.ಹನೀಫ್ ರವರ ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್ ಪುಸ್ತಕವನ್ನು ಸಾಹಿತಿಗಳಾದ ಕೆ.ಶರೀಫಾರವರು ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕರ್ನಾಟಕ ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್, ಖ್ಯಾತ ಸಾಹಿತಿಗಳಾದ, ಸಿ. ಪೀ. ಐ.ಎಂ ಕಾರ್ಯದರ್ಶಿ ಆದ ಯು.ಬಸವರಾಜು, ಕೆ.ಯಾದವ ಶೆಟ್ಟಿ, ಸಮಾವೇಶದ ಅಧ್ಯಕ್ಷರಾಗಿ ,ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸೈಯದ್ ಮುಜೀಬ್,ಬೆಂಗಳೂರು ರಾಜಕೀಯ ವಿಶ್ಲೇಷಕರು ಆದ, ಡಾ.ಕೆ. ಪ್ರಕಾಶ್,ಶ್ರೀಮತಿ ವರಲಕ್ಷ್ಮಿ, ಗುಲ್ಬರ್ಗಾ ಬರಹಗಾರರು ಮತ್ತು ಹೋರಾಟಗಾರರಾದ ಕೆ. ನೀಲಾ, ಎಂ. ಪಿ.ಮುನಿ ವೆಂಕಟಪ್ಪ, ಅಕ್ರಮ್ ಪಾಷಾ ಬಾಗೇಪಲ್ಲಿ, ಶೇಖ್ ಶಾ ಕಾದ್ರಿ ಸಿಂಧನೂರು, ಜೈನುಳ್ ಆಯ್ಯುಬ್ ಖಾನ್, ಕಾಸಿಮ್ ಸರ್ದಾರ್ ರಾಮದುರ್ಗ ಮುಂತಾದವರ ಭಾಗವಹಿಸುವಿಕೆಯೊಂದಿಂಗೆ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

ಸಿಪಿಐಎಂ ಪಕ್ಷವು `ಜಾತ್ಯಾತೀತತೆ, ಸಬಲೀಕರಣ ಮತ್ತು ಮುನ್ನಡೆ’ ಎಂಬ ಘೋಷಣೆಯಡಿ ಕರ್ನಾಟಕದ ಮುಸ್ಲಿಮರ ನೋವು ನಲಿವುಗಳ ಅನಾವರಣ ಕುರಿತ ಅಪರಾಹ್ನದ ಗೋಷ್ಠಿಯಲ್ಲಿ ಹಂಪಿ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ರಾದ ಚಂದ್ರಪ್ಪ ಪೂಜಾರಿ ಮತ್ತು ಡಾ. ಕೆ. ಪ್ರಕಾಶ್ ರವರು ಕರ್ಣಾಟಕ ಕೋಮುವಾದದ ಪ್ರಯೋಗ ಶಾಲೆ ಎಂಬ ವಿಷಯ ಬಗ್ಗೆ ಮತ್ತು ಎರಡನೇ ಗೋಷ್ಠಿಯಲ್ಲಿ ಬೀ.ಎಂ.ಹನೀಫ್ ರವರು ಭಾರತದಲ್ಲಿ ಮುಸ್ಲೀಮರ ಸ್ಥಿತಿ ಬಗ್ಗೆ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ್ತಿ ಕೆ. ನೀಲಾ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫ್ಯಾಸಿಸ್ಟ್ ಷಡ್ಯಂತ್ರದ ವ್ಯಾಪಾರ ನಿಷೇಧ ಘಟನೆಯ ಧಾರವಾಡದ ಕಲ್ಲಂಗಡಿ ಹಣ್ಣು ದ್ವಂಸ ಸಂತ್ರಸ್ತ ನಬೀ ಸಾಬ್ ಗೋಷ್ಠಿಯಲ್ಲಿ ಅತಿಥಿಯಾಗಿ ಉಪಸ್ತಿತರಿದ್ದರು.

error: Content is protected !! Not allowed copy content from janadhvani.com