janadhvani

Kannada Online News Paper

ವಿವಿ ಯಲ್ಲಿ ಹಿಜಾಬ್ ವಿವಾದ: ಕಾನೂನು ವಿರುದ್ಧವಾಗಿ ನೆರವು ನೀಡಲಾಗದು- ಯು.ಟಿ ಖಾದರ್

ವಿದ್ಯಾರ್ಥಿನಿಯರು ಸುಳ್ಳು ಹೇಳಬಾರದು. ಸುಳ್ಳು ಹೇಳಿ ಅವರ ಗೌರವ, ಧರ್ಮದ ಗೌರವ ತೆಗೆಯಬಾರದು.

ಮಂಗಳೂರು, ಮೇ 31 : ಹಿಜಾಬ್ ಪರ ಹೋರಾಟ ನಡೆಸುತ್ತಿರುವ ಹಂಪನಕಟ್ಟೆ ವಿವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ನನ್ನಿಂದಾದ ನೆರವು ನೀಡಿದ್ದೇನೆ. ಆದರೂ, ತಮ್ಮ ಸಹಾಯಕ್ಕೆ ಬಂದಿಲ್ಲ. ನಾನು ಕ್ರಿಕೆಟ್ ಆಟದಲ್ಲಿ ನಿರತನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರ ಹಿಂದೆ ದುರುದ್ದೇಶ ಅಥವಾ ರಾಜಕೀಯ ಪ್ರೇರಣೆ ಇದೆಯೋ ಗೊತ್ತಿಲ್ಲ. ಹೆತ್ತವರೇ ಇವರ ಬಗ್ಗೆ ಕಾಳಜಿ ವಹಿಸಬೇಕೆಂದು ವಿಧಾನಸಭೆ ವಿಪಕ್ಷ ಉಪ ನಾಯಕ, ಶಾಸಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಸಮಸ್ಯೆ ಹೇಳಿದಾಗ ಖಾದರ್ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದರು ಎಂಬ ಹಿಜಾಬ್ ವಿದ್ಯಾರ್ಥಿನಿಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವಿಸಿ, ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತ ಹೇಳಿದ್ದೇನೆ. ಕಾನೂನು ಪ್ರಕಾರ ಹೋರಾಟ ಮಾಡಲು ಸೂಚಿಸಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕ ಮಾಡಿಲ್ಲ. ಆ ಮೇಲೆ ನಾನೇ ವಿಸಿ ಜೊತೆ ಕರೆ ಮಾಡಿ ಮಾತನಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಕರೆ ಮಾಡಿಸಿದ್ದೇನೆ. ನಾನೇ ಖುದ್ದು ಫೋನ್ ಮಾಡಿದ್ದೇನೆ. ಆದರೆ, ವಿದ್ಯಾರ್ಥಿನಿಯರು ಕರೆ ಸ್ವೀಕಾರ ಮಾಡಿಲ್ಲ.

ರಾಂಗ್ ನಂಬರ್ ಅಂತ ಹೇಳಿ ಕರೆ ಕಟ್ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸರ್ಕಾರ ಚೀಫ್ ಸೆಕ್ರೆಟರಿ ಜೊತೆ ಮಾತನಾಡಿದ್ದೇನೆ. ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ಹೇಳಿಕೆ‌ ನೀಡಿದ್ದಾ? ಹೇಳಿಸಿದ್ದಾ ಗೊತ್ತಿಲ್ಲ. ವಿದ್ಯಾರ್ಥಿನಿಯರು ಸುಳ್ಳು ಹೇಳಬಾರದು. ಸುಳ್ಳು ಹೇಳಿ ಅವರ ಗೌರವ, ಧರ್ಮದ ಗೌರವ ತೆಗೆಯಬಾರದು. ಒಬ್ಬರು ಸುಳ್ಳು ಹೇಳಿದರೆ ಎಲ್ಲರ ಗೌರವ ಹಾಳಾಗುತ್ತದೆ. ವಿದ್ಯಾರ್ಥಿನಿಯರ ವ್ಯಕ್ತಿತ್ವ ಹಾಳಾಗುತ್ತದೆ ಎಂದರು.

ಮಕ್ಕಳನ್ನು ಶಾಲೆಗೆ ಕಳುಹಿಸೋದು ಹೆತ್ತವರು, ಅವರ ಶಾಲೆಯ ಫೀಸ್ ಕಟ್ಟೋದು ಹೆತ್ತವರು, ಅವರಿಗೆ ಡ್ರೆಸ್ ಕೊಡೋದು ಹೆತ್ತವರು, ಅವರಿಗೆ ಪುಸ್ತಕ ನೀಡೋದು ಕೂಡ ಹೆತ್ತವರು. ಈ ಸಮಸ್ಯೆಗೂ ಹೆತ್ತವರು ಮುಂದೆ ಬಂದು ಸಮಸ್ಯೆ ಬಗೆಹರಿಸಲಿ, ಕಾನೂನು ವಿರುದ್ಧವಾಗಿ ನಾನು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ ಎಂದರು.

error: Content is protected !! Not allowed copy content from janadhvani.com