janadhvani

Kannada Online News Paper

ಕತ್ತರಿನ ಕಡಲತೀರದಲ್ಲಿ ಕೆಸಿಎಫ್ ಕಲರವ – ಈದ್ ಟೂರ್

ಈದ್ ಉಲ್ ಫಿತರ್ ಪ್ರಯುಕ್ತ, ಪ್ರವಾಸಿ ಕನ್ನಡಿಗರಿಗೆ ಅವಿಸ್ಮರಣೀಯ ನೆನಪುಗಳ ಕೊಡುಗೆಯನ್ನು ನೀಡುತ್ತಾ ಕರ್ನಾಟಕದ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ರಾಷ್ಟ್ರೀಯ ಸಮಿತಿಯು, ತನ್ನ ಕಾರ್ಯಕರ್ತರಿಗೆ ಉಲ್ಲಾಸ ಯಾತ್ರೆಯನ್ನು ಆಯೋಜಿಸಿದ್ದು.

ಅಲ್ – ಘಾರಿಯಾ ಕಡಲತೀರದಲ್ಲಿ ನಡೆದ ಈ ಯಾತ್ರೆಯಲ್ಲಿ ವಿವಿಧ ಸ್ಪರ್ಧೆಗಳು, ಆಟೋಟಗಳು, ಆತ್ಮೀಯ ಮಜ್ಲಿಸ್ ಗಳು ಇತ್ಯಾದಿ ಚಟುವಟಿಕೆಗಳ ಮೂಲಕ ಕಾರ್ಯಕರ್ತರನ್ನು ದಿನವಿಡೀ ಕುತೂಹಲ ಮತ್ತು ಆವೇಶ ಭರಿತರನ್ನಾಗಿಸಿತು

ಫ್ಯಾಮಿಲಿ ಗಳಿಗೆ ಪ್ರತ್ಯೇಕ ಬಸ್ ಸಹಿತ 2 ಬಸ್ಸುಗಳಲ್ಲಿ ದೋಹಾದಿಂದ 11 ಗಂಟೆಗೆ ಹೊರಟ ಯಾತ್ರೆಯು ದಾರಿ ಮಧ್ಯೆ ಉಮರ್ ಬಿನ್ ಖತ್ತಾಬ್ ಮಸೀದಿಯಲ್ಲಿ ಲುಹ್ರ್ ನಮಾಜ್ ಮುಗಿಸಿ ಟೂರ್ ಅಮೀರ್ ಆಗಿರುವ ಅಬ್ದುಲ್ ಸತ್ತಾರ್ ಅಶ್ರಫಿಯವರು ಯಾತ್ರೆಯಲ್ಲಿ ಪಾಲ್ಗೊಂಡವರನ್ನು ಪರಸ್ಪರ ಪರಿಚಯಿಸಿ, ನಂತರ ಪ್ರವಾಸದ ಬಗ್ಗೆ ವಿವರಿಸಿ, ಅಗತ್ಯ ಮಾರ್ಗದರ್ಶನಗಳನ್ನೂ ನೀಡಿದರು. ಯಾತ್ರೆ ಮದ್ಯೆ ವಿವಿಧ ಪ್ರತಿಭಾಶಾಲಿಗಳು ಇಸ್ಲಾಮಿಕ್ ಹಾಡುಗಳನ್ನು, ಮದ್ಹ್ ಗೀತೆಗಳನ್ನು ಆಲಾಪಿಸಿದರು.

ಅಲ್ – ಘಾರಿಯಾ ಕಡಲತೀರವನ್ನು ತಲುಪುತ್ತಲೇ ಅಸರ್ ನಮಾಝ ನಿರ್ವಹಿಸಿ, ಮಧ್ಯಾಹ್ನದ ಊಟ ಉಪಹಾರ ನಡೆಯಿತು. ಒಟ್ಟು ಯಾತ್ರಿಕರನ್ನು 4 ತಂಡಗಳಾಗಿ ವಿಂಗಡಿಸಿ, ಆಶಿಕ್ ಬೈರಿಕಟ್ಟೆ, ಸಾದಿಕ್ ಮೂಳೂರು, ಕಾದರ್ ಪಾತೂರು ಮತ್ತು ಅಶ್ರಫ್ ವಳಚಿಲ್ ರವರುಗಳನ್ನು ಪ್ರತಿ ತಂಡಕ್ಕೆ ನಾಯಕರುಗಳನ್ನಾಗಿ ಸೂಚಿಸಿ, ತಲ್ಹತ್ ಪೆರ್ನೆ ಮತ್ತು ನಜೀರ್ ಮೂರ್ನಾಡ್ ಅವರು ವಿವಿಧ ಕ್ರೀಡೆ ಗಳು ಮತ್ತು ಸ್ಪರ್ಧೆಗಳಿಗೆ ಮುಂದಾಳುತ್ವ ನೀಡಿದರು. ಕಬಡ್ಡಿ, ಹಗ್ಗಜಗ್ಗಾಟ ಮತ್ತು ಬೀಚ್ ವಾಲಿಬಾಲ್ ಮುಂತಾದ ಸ್ಪರ್ಧೆಗಳು ಬಹಳ ಆಕರ್ಷಣೀಯ ಮತ್ತು ಕುತೂಹಲಕರವಾಗಿದ್ದು ಕಬಡ್ಡಿಯಲ್ಲಿ ಸಾದಿಕ್ ತಂಡವು ವಿಜಯಗೊಂಡರೆ, ಹಗ್ಗಜಗ್ಗಾಟದಲ್ಲಿ ಅಶ್ರಫ್ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

ಸಾದಿಕ್ ಮತ್ತು ಆಶಿಕ್ ತಂಡಗಳ ಮಧ್ಯೆ ನಡೆದ ಜಿದ್ದಾಜಿದ್ದಿನ ವಾಲಿಬಾಲ್ ಫೈನಲ್ ನಲ್ಲಿ ಟ್ರೋಫಿಯನ್ನು ಆಶಿಕ್ ತಂಡವು ತನ್ನದಾಗಿಸಿತು. ಮಧ್ಯರಾತ್ರಿಯವರೆಗೆ ನಡೆದ ಲೆಮನ್ ಸ್ಪೂನ್ ನಡೆತ, ವಾಕ್ ವಿತ್ ಬಲೂನ್‌, ಮೂರು ಕಾಲಿನ ನಡೆತ ಇತ್ಯಾದಿಯಾಗಿ ವಿವಿಧ ವಿನೋದ ಭರಿತ ಸ್ಪರ್ಧೆಗಳು ನೋಡುಗರಿಗೆ ಮನರಂಜನೆಯಾಗಿತ್ತು.

ಇಶಾ ನಮಾಝಿನ ನಂತರ, ಹಾಫಿಲ್ ಉಮರುಲ್ ಫಾರೂಕ್ ಸಖಾಫಿಯವರು, ಆಧ್ಯಾತ್ಮಿಕ ಉಪನ್ಯಾಸ ನೀಡಿ, ಆತ್ಮೀಯ ಚೈತನ್ಯವನ್ನು ತುಂಬಿದರೆ, ಆಸಿಫ್ ಅಹ್ಸನಿ ಅಲ್-ಅನ್ವಾರಿಯವರ ಸುಮಧುರ ಕಂಠದ ಬುರ್ದಾ ಮಜ್ಲಿಸ್ ಮತ್ತು ಭಕ್ತಿಗೀತೆಗಳು ಕಾರ್ಯಕರ್ತರನ್ನು ಪುಳಕಿತರನ್ನಾಗಿಸಿತು. ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಏರ್ಪಡಿಸಿದ ಪ್ರತ್ಯೇಕ ವ್ಯವಸ್ಥೆಗಳು ಮತ್ತು ವಿನೋದಾವಳಿಗಳು, ಕುಟುಂಬ ಸಮೇತ ಬಂದಿರುವ ಕಾರ್ಯಕರ್ತರಿಗೆ ಈ ಬಾರಿಯ ಈದ್ ರಜಾದಿನವನ್ನು ಸಂತೋಷಕರವಾಗಿ ವ್ಯಯಿಸುವಂತೆ ಮಾಡಿತು.

ಪ್ರವಾಸದುದ್ದಕ್ಕೂ ಅಶ್ರಫ್ ಕಾವಳಕಟ್ಟೆ ಮತ್ತು ಹಸನ್ ಪುಂಜಾಲಕಟ್ಟೆಯವರು ಊಟ ಉಪಹಾರದ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದರೆ, ಇಸ್ಮಾಯಿಲ್ ಉಪ್ಪಳ್ಳಿ, ಬಶೀರ್ ಉಪ್ಪಳ್ಳಿಯವರು ವಿದ್ಯುತ್, ಲೈಟಿಂಗ್, ಮತ್ತು ಶಿಬಿರಗಳಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಮಾಡಿದರು. ಮುನೀರ್ ಮಾಗುಂಡಿ ಮತ್ತು ಇಕ್ಬಾಲ್ ಪುಂಜಾಲಕಟ್ಟೆಯವರುಗಳು ವಾಹನಗಳ ಸೌಕರ್ಯಗಳನ್ನು ವಹಿಸಿಕೊಂಡಿದ್ದು ಫಾರೂಕ್ ಕೃಷ್ಣಾಪುರರವರು ವಿವಿಧ ಪ್ರದೇಶಗಳಿಂದ ಬರುವ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಬೇಕಾದ ಸಾರಿಗೆ ವ್ಯವಸ್ಥೆಗಳನ್ನು ಏರ್ಪಾಡು ಮಾಡಿ ಕೊಟ್ಟರು. ಪ್ರಧಾನ ಕಾರ್ಯದರ್ಶಿಯವರಾದ ಸಿದ್ದೀಕ್ ಹಂಡುಗುಳಿಯವರು ಈದ್ ಪ್ರವಾಸದ ಭವ್ಯ ಯಶಸ್ಸಿನ ಹಿಂದೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರು, ನೇತಾರರು ಮತ್ತು ಪಾಲ್ಗೊಂಡ ಎಲ್ಲಾ ಆಗಂತುಕರಿಗೆ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com