janadhvani

Kannada Online News Paper

ನಾಳೆ ದೇಶದ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಎಸ್ಸೆಸ್ಸೆಫ್ ಸುವರ್ಣ ಮಹೋತ್ಸವ ಘೋಷಣಾ ಸಮಾವೇಶ

ಉತ್ತರ ಭಾರತದ ಎಂಟು ರಾಜ್ಯಗಳ ಪ್ರತಿನಿಧಿಗಳು ದೆಹಲಿಯಲ್ಲೂ ಇತರ 16 ರಾಜ್ಯಗಳ ಕಾರ್ಯಕರ್ತರು ಆಯಾ ರಾಜ್ಯಗಳಲ್ಲಿಯೂ ಸಮಾವೇಶಗೊಳ್ಳಲಿದ್ದಾರೆ.

ಮಂಗಳೂರು,ಮೇ.7: ವಿದ್ಯಾರ್ಥಿ ಯುವಜನ ಸಂಘಟನೆಯಾಗಿರುವ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ರೂಪುಗೊಂಡು ಮುಂದಿನ ವರ್ಷಕ್ಕೆ 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮೇ 8 ರಂದು ಏಕಕಾಲಕ್ಕೆ ದೇಶದ 17 ಕೇಂದ್ರಗಳಲ್ಲಿ ಸುವರ್ಣ ಮಹೋತ್ಸವ ಘೋಷಣಾ ಸಮಾವೇಶಗಳು ನಡೆಯಲಿವೆ ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಸಲಹಾ ಸಮಿತಿ ತಿಳಿಸಿದೆ.

‘ಎನ್ಹಾನ್ಸ್ ಇಂಡಿಯಾ ಕಾನ್ಫರೆನ್ಸ್’ ಎಂಬ ಹೆಸರಿನಲ್ಲಿ ನಡೆಯುವ ಪ್ರಸ್ತುತ ಸಮಾವೇಶಗಳಲ್ಲಿ 24 ರಾಜ್ಯಗಳ ಕಾರ್ಯಕರ್ತರು ಭಾಗವಹಿಸಲಿದ್ದು, ಉತ್ತರ ಭಾರತದ ಎಂಟು ರಾಜ್ಯಗಳ ಪ್ರತಿನಿಧಿಗಳು ದೆಹಲಿಯಲ್ಲೂ ಇತರ 16 ರಾಜ್ಯಗಳ ಕಾರ್ಯಕರ್ತರು ಆಯಾ ರಾಜ್ಯಗಳಲ್ಲಿಯೂ ಸಮಾವೇಶಗೊಳ್ಳಲಿದ್ದಾರೆ.

ದೆಹಲಿಯಲ್ಲಿ ನಡೆಯುವ ಸಮಾವೇಶದಲ್ಲಿ ಸಂಘಟನೆಯ ಸ್ಥಾಪಕ ಮಾರ್ಗದರ್ಶಕರೂ ಆಗಿರುವ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕರ್ ಮುಸ್ಲಿಯಾರ್ ಸುವರ್ಣ ಮಹೋತ್ಸವವನ್ನು ಘೋಷಿಸಲಿದ್ದು, ಎಲ್ಲ ಕೇಂದ್ರಗಳಲ್ಲೂ ಅವರ ಭಾಷಣ ಬಿತ್ತರಗೊಳ್ಳಲಿದೆ.

1973 ಏಪ್ರಿಲ್ 29ರಂದು ಕೇರಳದಲ್ಲಿ ರೂಪುಗೊಂಡ ಎಸ್ಸೆಸ್ಸೆಫ್ ಸಂಘಟನೆಯು ಶೈಕ್ಷಣಿಕ ಮತ್ತು ನೈತಿಕ ಜಾಗೃತಿಯ ಚಳವಳಿಯಾಗಿ ಬೆಳೆದು ದೇಶಾದ್ಯಂತ ಹರಡಿದ್ದು 2023ರಲ್ಲಿ ಸುವರ್ಣ ಮಹೋತ್ಸವ ಆಚರಿಸಲಿದೆ.

24 ರಾಜ್ಯಗಳಲ್ಲಿ ಸುಮಾರು ಹತ್ತು ಸಾವಿರ ಶಾಖೆಗಳ ಮೂಲಕ ಹತ್ತು ಲಕ್ಷದಷ್ಟು ಕಾರ್ಯಕರ್ತರನ್ನು ಹೊಂದಿದ್ದು, ಶಿಕ್ಷಣ, ಜನಸೇವೆ, ನೈತಿಕ ಜಾಗೃತಿ, ಸೌಹಾರ್ದ ಪರಂಪರೆಯ ಸಂರಕ್ಷಣೆ ಮೊದಲಾದ ಧೈಯಗಳೊಂದಿಗೆ ಕಾರ್ಯನಿರತವಾಗಿದೆ.

2018ರಲ್ಲಿ ಸಂಘಟನೆಯು ‘ಸುಶಿಕ್ಷಿತ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ’ ಎಂಬ ಧೈಯವಾಕ್ಯದೊಂದಿಗೆ ಕಾಶ್ಮೀರದಿಂದ ಕಲ್ಲಿಕೋಟೆ ತನಕ ನಡೆಸಿದ್ದ ‘ಹಿಂದ್ ಸಫರ್’ ಭಾರತ ಯಾತ್ರೆಯು ದೇಶಾದ್ಯಂತ ಗಮನ ಸೆಳೆದಿತ್ತು ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯರಾದ ಕೆಎಂ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಎಸ್ಸೆಸ್ಸೆಫ್ ನ ‘ಎನ್ಹಾನ್ಸ್ ಇಂಡಿಯಾ ಕಾನ್ಫರೆನ್ಸ್’ ಸಮಾವೇಶವು ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿದೆ.

error: Content is protected !! Not allowed copy content from janadhvani.com