ಲಾಹೋರ್,ಮೇ.06: ವಿರೋಧವಿದ್ರೂ ನೃತ್ಯ ಮತ್ತು ಮಾಡೆಲಿಂಗ್ ವೃತ್ತಿಜೀವನವನ್ನು ಮುಂದುವರಿಸಿದ್ದಕ್ಕಾಗಿ 21 ವರ್ಷದ ಯುವತಿಯನ್ನು ಆಕೆಯ ಸಹೋದರ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಪ್ರಾಂತೀಯ ರಾಜಧಾನಿ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ರೆನಾಲಾ ಖುರ್ದ್ ಒಕಾರಾ ಮೂಲದ ಸಿದ್ರಾ, ಸ್ಥಳೀಯ ಬಟ್ಟೆ ಬ್ರಾಂಡ್‌ಗಾಗಿ ಮಾಡೆಲಿಂಗ್ ಮಾಡುತ್ತಿದ್ದಳು ಮತ್ತು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಫೈಸಲಾಬಾದ್ ನಗರದ ರಂಗಮಂದಿರಗಳಲ್ಲಿ ನೃತ್ಯ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ರಾಳ ಪೋಷಕರು ಅವಳನ್ನು ಕುಟುಂಬ ಸಂಪ್ರದಾಯದ ವಿರುದ್ಧ ಹೋಗದೇ, ವೃತ್ತಿಯನ್ನು ತೊರೆಯುವಂತೆ ಒತ್ತಾಯಿಸಿದ್ದರು, ಆದರೆ ಯುವತಿಯು ಪೋಷಕರನ್ನು ಧಿಕ್ಕರಿಸಿ ನೃತ್ಯವನ್ನು ಸಿದ್ರಾ ಮುಂದುವರೆಸಿದ್ದಳು.
ಕಳೆದ ವಾರ ಸಿದ್ರಾ ತನ್ನ ಕುಟುಂಬದೊಂದಿಗೆ ಈದ್ ಆಚರಿಸಲು ಫೈಸಲಾಬಾದ್‌ನಿಂದ ಮನೆಗೆ ಬಂದಿದ್ದಳು. ಗುರುವಾರ ಆಕೆಯ ಪೋಷಕರು ಮತ್ತು ಸಹೋದರ ಇದೇ ವಿಚಾರವಾಗಿ ಆಕೆಯೊಂದಿಗೆ ಜಗಳವಾಡಿದ್ದಾರೆ. ಮಾಡೆಲಿಂಗ್, ನೃತ್ಯಕ್ಕೆ ಅಂಟಿಕೊಳ್ಳದಂತೆ ಎಚ್ಚರಿಸುತ್ತಾ ಗಲಾಟೆ ವೇಳೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಸೋದರ ಹಂಝಾ ಸಿದ್ರಾ ಮೇಲೆ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಅಪರಾಧವನ್ನು ಒಪ್ಪಿಕೊಂಡ ಹಂಝಾನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಹಂಝ ತಮ್ಮ ಮೊಬೈಲ್ ಫೋನ್‌ನಲ್ಲಿ ಸಿದ್ರಾ ಅವರ ನೃತ್ಯ ಪ್ರದರ್ಶನವನ್ನು ಸಂಬಂಧಿಯೊಬ್ಬರು ಫಾರ್ವರ್ಡ್ ಮಾಡಿದ್ದನ್ನ ನೋಡಿದ ಮೇಲೆ ತಂಗಿಯ ಮೇಲೆ ಸಿಟ್ಟಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಫೈಸಲಾಬಾದ್‌ನಲ್ಲಿ 19 ವರ್ಷದ ಮಹಿಳಾ ನರ್ತಕಿ ಆಯೇಷಾ ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದರು.
ಪಾಕಿಸ್ತಾನದಲ್ಲಿ ವಿಶೇಷವಾಗಿ ಉತ್ತರ ಮತ್ತು ಪಶ್ಚಿಮದಲ್ಲಿರುವ ಬುಡಕಟ್ಟು ಪ್ರದೇಶಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ ಮರ್ಯಾದೆಗೇಡು ಹತ್ಯೆಯ ಪ್ರಕರಣಗಳು ಭಯ ಹುಟ್ಟಿಸುವ ರೀತಿಯಲ್ಲಿ ವರದಿಯಾಗುತ್ತಲೇ ಇರುತ್ತವೆ.