ಜಿದ್ದಾ,ಎಪ್ರಿಲ್.30: ಇಂದು (ಶನಿವಾರ) ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಮೇ.2 ಸೋಮವಾರದಂದು ಆಚರಿಸಲಾಗುತ್ತದೆ ಎಂದು ವರದಿಯಾಗಿದೆ.
ತುಮೈರ್, ಹೋತಾ ಸುದೈರ್ ಮತ್ತು ತಾಯಿಫ್ ಮುಂತಾದ ವಿವಿಧ ಸ್ಥಳಗಳಲ್ಲಿ ಚಂದ್ರ ವೀಕ್ಷಕರು ಹಾಜರಾಗಿದ್ದರು, ಆದರೆ ಎಲ್ಲಿಯೂ ಚಂದ್ರ ದರ್ಶನವಾಗಲಿಲ್ಲ.ಹಿಜರಿ ಕ್ಯಾಲೆಂಡರ್ ನ ಶವ್ವಾಲ್ 1ನೇ ದಿನದಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತದೆ.ರಮಳಾನ್ 29 ಪೂರ್ಣಗೊಂಡ ರಾತ್ರಿ ಶವ್ವಾಲ್ ಚಂದ್ರ ವನ್ನು ವೀಕ್ಷಿಸಲಾಗುತ್ತದೆ. ಚಂದ್ರ ದರ್ಶನವಾದಲ್ಲಿ ಮರುದಿನ ಈದುಲ್ ಫಿತರ್ ಆಚರಿಸಲಾಗುತ್ತದೆ. ಇಲ್ಲವಾದಲ್ಲಿ ರಮಳಾನ್ 30 ಪೂರ್ತೀಕರಿಸಿ ಈದ್ ಆಚರಿಸಲಾಗುತ್ತದೆ.
ಈ ಬಾರಿ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ 30 ದಿನಗಳ ರಮಳಾನ್ ವೃತ ಲಭಿಸಲಿದೆ.
ಏತನ್ಮಧ್ಯೆ, ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಕಾರಣ ಯುಎಇಯಲ್ಲಿ ಸೋಮವಾರ ಈದುಲ್ ಫಿತರ್ ಹಬ್ಬ ನಡೆಯಲಿದೆ ಎಂದು ಯುಎಇ ಚಂದ್ರ ವೀಕ್ಷಣಾ ಸಮಿತಿ ಪ್ರಕಟಿಸಿದೆ.
ಒಮಾನ್ ಹೊರತುಪಡಿಸಿ, ಕುವೈತ್, ಬಹ್ರೇನ್, ಖತಾರ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರದಂದು ಈದುಲ್ ಫಿತರ್ ಆಚರಿಸಲಾಗುತ್ತದೆ.