janadhvani

Kannada Online News Paper

ಪಿಎಸ್‌ಐ ಹಗರಣ: ನಿಷ್ಪಕ್ಷಪಾತ ತನಿಖೆಗಾಗಿ ಗೃಹ ಸಚಿವರನ್ನು ಸಂಪುಟದಿಂದ ಕಿತ್ತುಹಾಕಬೇಕು

ಇಂತಹ ವಿಫಲ, ನಿಷ್ಕ್ರಿಯ 'ಚೌಕಿದಾರ'ನಿಂದ ಪೊಲೀಸ್ ಇಲಾಖೆಯೇ ಸುರಕ್ಷಿತವಾಗಿ ಇರಲಾರದು ಎಂದು ಹೇಳಿದರು.

ಬೆಂಗಳೂರು,ಏ.30: ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ನಡೆದಿರುವ ಅಕ್ರಮವನ್ನು ಒಪ್ಪಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವ ನೈತಿಕತೆ ಆಧಾರದಲ್ಲಿ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ? ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಆರೋಪಿ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವ, ಸಾಲು ಸಾಲು ವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿಗಳು ತಕ್ಷಣ ಸಂಪುಟದಿಂದ ಕಿತ್ತುಹಾಕಬೇಕು. ಭ್ರಷ್ಟರು, ಕೊಲೆಗಡುಕರು, ರೇಪಿಸ್ಟ್ ಗಳನ್ನು ಸಮರ್ಥಿಸುವುದೇ ತನ್ನ ಕರ್ತವ್ಯ ಎಂದು ಗೃಹ ಸಚಿವರು ತಿಳಿದುಕೊಂಡಂತಿದೆ. ಇಂತಹ ವಿಫಲ, ನಿಷ್ಕ್ರಿಯ ‘ಚೌಕಿದಾರ’ನಿಂದ ಪೊಲೀಸ್ ಇಲಾಖೆಯೇ ಸುರಕ್ಷಿತವಾಗಿ ಇರಲಾರದು ಎಂದು ಹೇಳಿದರು.

ಆರಗ ಜ್ಞಾನೇಂದ್ರ ಅವರೇ ಗೃಹಸಚಿವರಾಗಿದ್ದು ಪಿಎಸ್ ಐ ನೇಮಕಾತಿ ಮರುಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥ, ಅಪ್ರಾಮಾಣಿಕ, ನಿಷ್ಕ್ರಿಯರೇ ಪಿಎಸ್‌ಐ ಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ. ಪಿಎಸ್‌ಐ ನೇಮಕಾತಿಗೆ ಸರ್ಕಾರ ಯಾವ ಆಧಾರದಲ್ಲಿ ಮರುಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆಯೇ? ಹಾಗಿದ್ದರೆ ಆ ವರದಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಮರುಪರೀಕ್ಷೆಯ ನಿರ್ಧಾರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲಿಕ್ಕಾಗಿಯೇ? ಇಲ್ಲವೇ ಹಗರಣವನ್ನು ಮುಚ್ಚಿಹಾಕಿ ದೊಡ್ಡ ತಲೆಗಳನ್ನು ಉಳಿಸಲಿಕ್ಕಾಗಿಯೇ? ಪಿಎಸ್‌ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಬಂಧನವಾದ ತಕ್ಷಣ ಮರುಪರೀಕ್ಷೆಯ ನಿರ್ಧಾರದ ಹಿಂದಿನ ರಹಸ್ಯ ಏನು? ಆಕೆ ನೀಡಿರುವ ಹೇಳಿಕೆಯಲ್ಲಿ ಅಂತಹ ಸ್ಫೋಟಕ ಸಂಗತಿಗಳೇನಿದೆ? ಈ ಹಗರಣವನ್ನು ನಮ್ಮ ಪಕ್ಷ ಬಯಲಿಗೆಳೆದಾಗ ಬಾಯಿಗೆ ಬಂದಂತೆ ತಲೆಗೊಬ್ಬರಂತೆ ಮಾತನಾಡಿದ್ದ ಬಿಜೆಪಿ ನಾಯಕರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರವೇ ಅಡಿಯಿಂದ ಮುಡಿವರೆಗೆ ಭ್ರಷ್ಟಗೊಂಡಿರುವಾಗ ಪಿಎಸ್ ಐ ನೇಮಕಾತಿ ಹಗರಣದ ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಾರದು. ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯ ತನಿಖೆಯೊಂದೇ ಪರಿಹಾರ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ನಿಷ್ಕ್ರಿಯತೆಯನ್ನು ಪ್ರಶ್ನಿಸದೆ ಇದ್ದರೆ ಕೊನೆಗೆ ಈ ಪಿಡುಗಿಗೆ ಬಹುಸಂಖ್ಯೆಯಲ್ಲಿರುವ ಪ್ರಾಮಾಣಿಕರೇ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಪಿಎಸ್ ಐ ನೇಮಕಾತಿ ಅಕ್ರಮ ಸಾಕ್ಷಿ ಎಂದರು.

error: Content is protected !! Not allowed copy content from janadhvani.com