janadhvani

Kannada Online News Paper

ರಾಜ್ಯದಲ್ಲಿ ಮೇ.2ಕ್ಕೆ ಈದ್ ರಜೆ- ಸರ್ಕಾರದ ಅಧಿಸೂಚನೆಯ ಬಗ್ಗೆ ವಖ್ಫ್ ಅಧ್ಯಕ್ಷರಿಗೆ ಅಚ್ಚರಿ

ಚಂದ್ರ ದರ್ಶನ ಸಮಿತಿಯ ಸಭೆಯು ಮೇ. 1ರಂದು ರಾತ್ರಿ ನಡೆಯಬೇಕಿದೆ.

ಬೆಂಗಳೂರು,ಏಪ್ರಿಲ್ 30: ಮುಸ್ಲಿಮ್ ಬಾಂಧವರು ರಮಳಾನ್, ಈದ್ ಎಲ್ಲವನ್ನೂ ಚಂದ್ರ ದರ್ಶನವನ್ನು ಅವಲಂಬಿಸಿ ಆಚರಿಸುತ್ತಿದ್ದಾರೆ. ಇದೀಗ ರಂಜಾನ್ ಕೊನೆಯ ಹಂತಕ್ಕೆ ತಲುಪಿದ್ದು, ರಂಜಾನ್ 29 ನೇ ಉಪವಾಸ ಬಳಿಕ ಶವ್ವಾಲ್ ತಿಂಗಳ ಚಂದ್ರ ದರ್ಶನವಾದಲ್ಲಿ ಮರುದಿನ ಅಥವಾ ಮೇ.2 ರಂದು ಈದ್ ಆಚರಿಸಲಾಗುತ್ತದೆ.ಇದು ಆಯಾ ಮೊಹಲ್ಲಾಗಳ ಖಾಝಿಗಳ ತೀರ್ಮಾನದಂತೆ ನಡೆಯುತ್ತದೆ.

ಆದರೆ, ಇದೀಗ ರಾಜ್ಯ ಸರ್ಕಾರವು ಮೇ.3 ರಂದು ಘೋಷಿಸಿದ್ದ ಈದ್ ಹಬ್ಬ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಚಂದ್ರ ದರ್ಶನ ಸಮಿತಿಯ ತೀರ್ಮಾನದಂತೆ ಮೇ.2 ಕ್ಕೆ ಬದಲಾಯಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರವು ನೆಗೋಷಿಯೆಬಲ್ ಇನ್ ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ, ಮೇ 2, 2022ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಮಝಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಚಂದ್ರ ದರ್ಶನ ಸಮಿತಿಯ ಸಭೆಯು ಮೇ 1ರಂದು ಸಂಜೆ 7 ಗಂಟೆಗೆ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಸ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.

ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಶನಿವಾರ ಅಧಿಸೂಚನೆಯನ್ನು ಹೊರಡಿಸಿ, ರಂಜಾನ್ ಹಬ್ಬದ ಅಂಗವಾಗಿ ಮೇ 3ರಂದು ಮಂಜೂರು ಮಾಡಲಾಗಿದ್ದ ರಜೆಯನ್ನು, ಚಂದ್ರ ದರ್ಶನ ಸಮಿತಿಯ ತೀರ್ಮಾನದಂತೆ ಮೇ 2ರಂದು ಮಂಜೂರು ಮಾಡಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ವಕ್ಸ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ರಂಜಾನ್ ಮಾಸದ 29ನೆ ಉಪವಾಸ ಮುಗಿದ ಬಳಿಕ ಚಂದ್ರ ದರ್ಶನ ಸಮಿತಿ ಸಭೆ ನಡೆಸುವುದು ಸಂಪ್ರದಾಯ. ಅದರಂತೆ, ನಾಳೆ ಸಂಜೆ ಸಭೆ ನಡೆಯಲಿದೆ. ಸರಕಾರದ ಅಧಿಸೂಚನೆಯಲ್ಲಿ ಚಂದ್ರ ದರ್ಶನ ಸಮಿತಿಯ ತೀರ್ಮಾನ ಎಂದು ನಮೂದಿಸಿರುವುದು ಅಚ್ಚರಿ ಉಂಟು ಮಾಡಿದೆ ಎಂದರು.

ಅಧಿಸೂಚನೆ ತಿದ್ದುಪಡಿ

ವಖ್ಫ್ ಅಧ್ಯಕ್ಷರ ಪ್ರತಿಕ್ರಿಯೆಗೆ ಸ್ಪಂದಿಸಿದ ಸರ್ಕಾರ, ಅಧಿಸೂಚನೆಯನ್ನು ತಿದ್ದುಪಡಿಸಿದೆ.

ಮುಸ್ಲಿಂ ಬಾಂಧವರ ಪವಿತ್ರ ಖುತುಬ್-ಎ-ರಂಜಾನ್ ಹಬ್ಬವನ್ನು ಮೇ 2ರಂದು ಆಚರಿಸುವುದಕ್ಕೆ ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ. ಎಂಬುದನ್ನು ಮುಸ್ಲಿಂ ಬಾಂಧವರ ಪವಿತ್ರ ಖುತುಬ್-ಎ-ರಂಜಾನ್ ಹಬ್ಬವನ್ನು ಮೇ 2ರಂದು ಆಚರಿಸುತ್ತಿರುವುದರಿಂದ ರಾಜ್ಯದಲ್ಲಿ ಮೇ.2ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ತಿದ್ದುಪಡಿಸಿ ಅಧಿಸೂಚನೆ ಹೊರಡಿಸಿದೆ.