janadhvani

Kannada Online News Paper

ಬೆಲೆಯೇರಿಕೆ ಎಫೆಕ್ಟ್ : ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು

ಈ ವರದಿಯ ಧ್ವನಿಯನ್ನು ಆಲಿಸಿ

ದೇಶದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ವರ್ಚಸ್ಸನ್ನು ಕಳಕೊಳ್ಳುತ್ತಿದೆ. ನಿತ್ಯೋಪಯೋಗಿ ವಸ್ತುಗಳ ಬೆಲೇಯೇರಿಕೆಯು ದೇಶದ ಬಡ ಜನರ ಜೀವನವನ್ನೇ ಬುಡಮೇಲು ಮಾಡಿದೆ. ಬಿಜೆಪಿಯಿಂದ ಯಾವುದೇ ಉಪಕಾರವಿಲ್ಲ ಎಂದು ಮನಗಂಡಿರುವ ಜನ ಸಾಮಾನ್ಯರು ಚುನಾವಣೆಯಲ್ಲಿ ಪಾಠ ಕಲಿಸಲು ಮುಂದಾಗಿದ್ದಾರೆ.

ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಮತ್ತು ಚತ್ತೀಸ್‌ಘಡ ರಾಜ್ಯಗಳಲ್ಲಿನ ನಾಲ್ಕು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಐದು ಕಡೆಗಳಲ್ಲಿಯೂ ಬಿಜೆಪಿ ಹೀನಾಯ ಸೋಲು ಕಂಡಿದೆ.

ಪಶ್ಚಿಮ ಬಂಗಾಳದ ಅಸಾನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಬಲ್ಲಿಗುಂಗೆ ವಿಧಾನಸಭಾ ಕ್ಷೇತ್ರ ಎರಡೂ ಕಡೆ ಟಿಎಂಸಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಉತ್ತರ ಮತ್ತು ಚತ್ತೀಸ್‌ಘಡದ ಖೈರಾಘರ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಬಿಹಾರದ ಬೋಛಾಹ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿ ಜಯಗಳಿಸಿದ್ದಾರೆ.

ಅಸಾನ್ಸೋಲ್ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ

ಪಶ್ಚಿಮ ಬಂಗಾಳದ ಅಸಾನ್ಸೋಲ್ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಬಬುಲ್ ಸುಪ್ರಿಯೋ ಗೆಲುವು ಸಾಧಿಸಿದ್ದರು. ಆದರೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದು ಅವರು ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಹಾಗಾಗಿ ತೆರವಾದ ಸ್ಥಾನಕ್ಕೆ ಟಿಎಂಸಿಯು ಹಿರಿಯ ನಾಯಕ ಶತ್ರುಘ್ನ ಸಿನ್ಹರನ್ನು ಕಣಕ್ಕಿಳಿಸಿತ್ತು. ಅವರು ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪೌಲ್ ವಿರುದ್ದ 1.5 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಟಿಎಂಸಿ ಜಯಗಳಿಸಿದೆ.

ಬಲ್ಲಿಗುಂಗೆ ವಿಧಾನಸಭಾ ಕ್ಷೇತ್ರ

ಪಶ್ಚಿಮ ಬಂಗಾಳದ ಬಲ್ಲಿಗುಂಗೆ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯ ಬಬುಲ್ ಸುಪ್ರಿಯೋ ಜಯಗಳಿಸಿದ್ದಾರೆ. ಸಚಿವರಾಗಿದ್ದ ಸುಬ್ರತ ಮುಖರ್ಜಿಯವರ ನಿಧನದಿಂದ ಕ್ಷೇತ್ರ ತೆರವಾಗಿತ್ತು. ಇಲ್ಲಿ ಬಿಜಪಿಯು ಖೆಯಾ ಘೋಷ್ ಎಂಬುವವರನ್ನು ಕಣಕ್ಕಿಳಿಸಿತ್ತು. ಆದರೆ ಅವರು ಸೋಲನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಖೈರಾಘರ್‌ ವಿಧಾನಸಭಾ ಕ್ಷೇತ್ರ

ಚತ್ತೀಸ್‌ಘಡದ ಖೈರಾಘರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಜನತ ಕಾಂಗ್ರೆಸ್‌ನ ದೇವ್ರತ್ ಸಿಂಗ್ ಎಂಬುವವರು ನಿಧನರಾಗಿದ್ದರು. ಹಾಗಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶೋದ ನಿಲಂಬರ್ ವರ್ಮಾರವರು 20,000 ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ.

ಕೊಲ್ಲಾಪುರ ಉತ್ತರ

ಮಹಾರಾಷ್ಟ್ರದ ಕೊಲ್ಲಾಪುರ ಉತ್ತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಜಾಧವ್‌ರವರು ಬಿಜೆಪಿಯ ಸತ್ಯಜಿತ್ ಕದಮ್ ವಿರುದ್ಧ 18,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬೋಛಾಹ ವಿಧಾನಸಭಾ ಕ್ಷೇತ್ರ

ಬಿಹಾರದ ಬೋಛಾಹ ವಿಧಾನಸಭಾ ಕ್ಷೇತ್ರವು ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿ ವಿಕಾಸಶೀಲ ಇನ್ಸಾನ್ ಪಾರ್ಟಿಯಿಂದ ಶಾಸಕರಾಗಿದ್ದ ಮುಖೇಶ್ ಸಹಾನಿಯವರು ಸಾವನಪ್ಪಿದ್ದರು. ಹಾಗಾಗಿ ನಡೆದ ಉಪಚುನಾವಣೆಯಲ್ಲಿ ಆರ್‌ಜೆಡಿಯ ಅಮರ್ ಕುಮಾರ್ ಪಾಸ್ವಾನ್‌ರವರು ಜಯಗಳಿಸಿದ್ದಾರೆ.

error: Content is protected !! Not allowed copy content from janadhvani.com