janadhvani

Kannada Online News Paper

ಕೇರಳ: ರಾಜಕೀಯ ವೈಷಮ್ಯಕ್ಕೆ ಇಬ್ಬರು ಬಲಿ- SDPI ಮತ್ತು RSS ಮುಖಂಡರ ಹತ್ಯೆ

ಪಿಎಫ್‌ಐ ಮುಖಂಡನ ಹತ್ಯೆಯಾಗಿ 24 ಗಂಟೆಯೊಳಗೆ ಆರ್ ಎಸ್ ಎಸ್ ಮುಖಂಡನ ಕೊಲೆ
ಈ ವರದಿಯ ಧ್ವನಿಯನ್ನು ಆಲಿಸಿ

ಪಾಲಕ್ಕಾಡ್‌,ಏ.16: ವಿಷು ದಿನವಾದ ನಿನ್ನೆ ಕೇರಳವನ್ನು ಬೆಚ್ಚಿಬೀಳಿಸಿದ ರಾಜಕೀಯ ಕೊಲೆ ಪಾಲಕ್ಕಾಡ್‌ನ ಎಳಪ್ಪುಳ್ಳಿ ಎಂಬಲ್ಲಿ ನಡೆದಿದೆ.ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸಂಘಟನೆಯ ಸ್ಥಳೀಯ ನೇತಾರನನ್ನು ತನ್ನ ತಂದೆಯ ಎದುರೇ ಕೊಲೆ ಮಾಡಲಾಗಿದೆ. ಕೊಲೆಯ ಹಿಂದೆ ಆರ್‌ಎಸ್‌ಎಸ್‌ ಇದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಎಳಪುಳ್ಳಿ ಎಂಬಲ್ಲಿ ಸುಬೈರ್‌ (43) ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲಾಗಲಿಲ್ಲ.

ಪಿಎಫ್‌ಐನ ಪ್ಯಾರಾ ಏರಿಯಾ ಸಮಿತಿಯ ಅಧ್ಯಕ್ಷ ಸುಬೈರ್‌ ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ಗೆ ಕಾರು ಢಿಕ್ಕಿ ಹೊಡೆಸಿ ಬಿಳಿಸಿ ಇರಿದು ಕೊಲೆ ಮಾಡಲಾಗಿದೆ. ಸಮೀಪದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಜಿಲ್ಲೆಯ ಉನ್ನತ ಪೊಲೀಸ್‌ ಅಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪಾಲಕ್ಕಾಡ್‌ ಎಸ್ಪಿ ಆರ್‌ ವಿಶ್ವನಾಥ್‌ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ. ದುಷ್ಕರ್ಮಿಗಳು ಸುಬೈರ್‌ ಅವರ ಬೈಕನ್ನು ಡಿಕ್ಕಿ ಹೊಡೆಯಲು ಬಳಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಆರೋಪಿಗಳು ಮತ್ತೊಂದು ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪಿಎಫ್‌ಐ ಮುಖಂಡನ ಹತ್ಯೆಯಾಗಿ 24 ಗಂಟೆಯೊಳಗೆ ಆರ್ ಎಸ್ ಎಸ್ ಮುಖಂಡನ ಕೊಲೆ

ಏ.16: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ (ಎಸ್‌ಡಿಪಿಐ) ಕಾರ್ಯಕರ್ತನೊಬ್ಬ ಹತ್ಯೆಗೀಡಾದ ಮರು ದಿನವೇ ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬನನ್ನು ಕೊಲೆ ಮಾಡಲಾಗಿದೆ. ಕೇರಳದ ಪಾಲಕ್ಕಾಡ್‌ನಲ್ಲಿ ಏಪ್ರಿಲ್ 16 ಶನಿವಾರ ಹಾಡಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತನನ್ನ ಕೊಚ್ಚಿ ಕೊಲೆ ಮಾಡಲಾಗಿದೆ. ಶುಕ್ರವಾರ ನಡೆದ ಎಸ್‌ಡಿಪಿಐ ಕಾರ್ಯಕರ್ತನ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ.

ಮೃತನನ್ನು ಶ್ರೀನಿವಾಸನ್ ಎಂದು ಗುರ್ತಿಸಲಾಗಿದ್ದು, ಆತ ಆರ್‌ಎಸ್‌ಎಸ್‌ನ ದೈಹಿಕ ಶಿಕ್ಷಣ ತರಬೇತುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸದ್ಯ ಆತ ವೃತ್ತಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಧಾವಿಸಿ ಶ್ರೀನಿವಾಸನ್‌ನನ್ನು ಹತ್ಯೆಗೈದಿದ್ದಾರೆ. ಆತ ಇದ್ದ ಅಂಗಡಿಯ ಒಳಗೆ ನುಗ್ಗಿ, ಆತನನ್ನು ಹೊರಗೆ ಎಳೆದು ಹತ್ಯೆಗೈದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆಯೇ ಶ್ರೀನಿವಾಸನ್ ಕೊನೆಯುಸಿರು ಎಳೆದರು ಎಂದು ತಿಳಿದುಬಂದಿದೆ.

ಈ ಹತ್ಯೆಯ ಹಿಂದೆ ಎಸ್‌ಡಿಪಿಐ ಇದೆ ಎಂದು ಕೇರಳ ಬಿಜೆಪಿ ನಾಯಕ ಕೃಷ್ಣ ಕುಮಾರ್ ಅವರು ಆರೋಪಿಸಿದ್ದಾರೆ. ಶುಕ್ರವಾರ ನಡೆದ ಎಸ್‌ಡಿಪಿಐ ಕಾರ್ಯಕರ್ತ ಸುಭೈರ್‌ನ ಕೊಲೆ ರಾಜಕೀಯ ಕಾರಣಕ್ಕಾಗಿ ನಡೆದ ಹತ್ಯೆ ಎಂದು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಇಷ್ಟಾದ್ರೂ ಎಸ್‌ಡಿಪಿಐ ಅದಾಗಲೇ ಹಿಂಸಾತ್ಮಕ ಕೃತ್ಯಕ್ಕೆ ಇಳಿದಿದೆ ಎಂದು ಅವರು ಆರೋಪಿಸಿದ್ದಾರೆ. ಶುಕ್ರವಾರ ಸಂಭವಿಸಿದ ಎಸ್‌ಡಿಪಿಐ ಕಾರ್ಯಕರ್ತನ ಕೊಲೆಯೇ ಶನಿವಾರ ನಡೆದಿರುವ ಆರ್‌ಎಸ್ಎಸ್‌ ಕಾರ್ಯಕರ್ತನ ಕೊಲೆಗೆ ಕಾರಣ ಎಂದು ಕೃಷ್ಣ ಕುಮಾರ್ ಹೇಳಿದ್ದಾರೆ.

ಪಾಲಕ್ಕಾಡ್‌ನಲ್ಲಿ ಅಶಾಂತಿ ಉಂಟಾಗಲು ಕೇವಲ ಈ ಎರಡು ಗುಂಪುಗಳಷ್ಟೇ ಕಾರಣ ಅಲ್ಲ ಎಂದು ಇಲ್ಲಿನ ಶಾಸಕ ಶಾಫಿ ಪರಂಬಳಿ ಅವರು ಹೇಳಿದ್ದಾರೆ. ಈ ಭಾಗದಲ್ಲಿ ಹಿಂಸಾಚಾರ, ಉದ್ವಿಗ್ನತೆ ಹೆಚ್ಚಿಸಲು ನಿರಂತರ ಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಶುಕ್ರವಾರವಷ್ಟೇ ಹತ್ಯೆಗೀಡಾದ ಎಸ್‌ಡಿಪಿಐ ಕಾರ್ಯಕರ್ತ ಸುಬೈರ್, ಪಿಎಫ್‌ಐನ ಕಾರ್ಯದರ್ಶಿ ಕೂಡಾ ಆಗಿದ್ದ. ಪಾಲಕ್ಕಾಡ್‌ನಲ್ಲಿ ಏಪ್ರಿಲ್ 15 ಶುಕ್ರವಾರದಂದು ಐವರು ದುಷ್ಕರ್ಮಿಗಳು ಆತನನ್ನು ಕೊಚ್ಚಿ ಕೊಂದಿದ್ದರು.

error: Content is protected !! Not allowed copy content from janadhvani.com