janadhvani

Kannada Online News Paper

ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್‌ಗೆ ಚಿನ್ನದ ಪದಕ

ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆ; ಥ್ರೋಬಾಲ್‌ನಲ್ಲೂ ಗಮನಾರ್ಹ ಸಾಧನೆ

ಕಾಟಿಪಳ್ಳ: ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಅಬ್ದುಲ್ ರಶೀದ್ ಹಾಗೂ ನಸೀಮ ಬಾನು ದಂಪತಿಗಳ ಏಕೈಕ ಪುತ್ರಿ, ಹೀರಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಿಫಾತ್ ಅವರು ಸ್ಕಾಯ್ ಕರಾಟೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

2026ರ ಆಗಸ್ಟ್ 30ರಂದು ಮೂಡಬಿದಿರೆಯಲ್ಲಿ ನಡೆದ 19ನೇ ಕರ್ನಾಟಕ ರಾಜ್ಯಮಟ್ಟದ ಸ್ಕಾಯ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ, 18 ವರ್ಷ ವಯೋಮಿತಿಯ -50 ಕೆ.ಜಿ. ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ ಫಾತಿಮತ್ ರಿಫಾತ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಒಡಿಶಾದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಕಾಯ್ ಕರಾಟೆ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಫಾತಿಮತ್ ರಿಫಾತ್ ಅವರು ಈ ಹಿಂದೆ ಹಲವು ಬಾರಿ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ಗಳಲ್ಲಿ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಇದೀಗ ಸ್ಕಾಯ್ ಕರಾಟೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಅವರ ಕ್ರೀಡಾ ಬದುಕಿನ ಮತ್ತೊಂದು ಮಹತ್ವದ ಸಾಧನೆಯಾಗಿದೆ.

ಅವರು ಕೃಷ್ಣಾಪುರದ ಶೋರಿನ್ ರಿಯೊ ಕರಾಟೆ ಅಸೋಸಿಯೇಷನ್ ಡೋಜೋದಲ್ಲಿ ತರಬೇತುದಾರ ಸರ್ಫರಾಜ್ ಅಬ್ದುಲ್ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ಕರಾಟೆಯ ಜೊತೆಗೆ ಫಾತಿಮತ್ ರಿಫಾತ್ ಅವರು ಥ್ರೋಬಾಲ್‌ನಲ್ಲೂ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಡಿವಿಷನ್ ಮಟ್ಟದ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಬಹುಮುಖ ಕ್ರೀಡಾ ಪ್ರತಿಭೆಯಾಗಿರುವ ಫಾತಿಮತ್ ರಿಫಾತ್ ಅವರ ಸಾಧನೆಗೆ ಪೋಷಕರು, ಶಿಕ್ಷಕರು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡಿ, ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಭಾರತದ ಕೀರ್ತಿಯನ್ನು ಎತ್ತಿಹಿಡಿಯಲಿ ಎಂಬುದು ಎಲ್ಲರ ಆಶಯವಾಗಿದೆ.

ಇದನ್ನೂ ಓದಿರಿ...