janadhvani

Kannada Online News Paper

ಆರೋಪಿಗಳನ್ನು ಬಂಧಿಸದೆ ಲಾಡ್ಜ್‌ನಿಂದ ಮೃತದೇಹವನ್ನು ತೆಗೆಯುವುದಿಲ್ಲ- ಸಂತೋಷ್ ಸಹೋದರ

ಪೊಲೀಸ್ ತನಿಖೆಗೆ ಕುಟುಂಬಸ್ಥರು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಈಗ ಪೊಲೀಸ್ ಇಲಾಖೆ ಕೂಡ ನಮಗೆ ಸಹಕಾರ ಕೊಡಬೇಕು. ಎಫ್‌ಐಆರ್‌ನಲ್ಲಿ ಹೆಸರು ಇರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ತಾಕೀತು ಮಾಡಿದರು.

ಉಡುಪಿ: ನಮ್ಮ ಸಹೋದರ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಲ್ಲಿಯ ತನಕ ಲಾಡ್ಜ್‌ನಿಂದ ಮೃತದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಮೃತರ ಸಹೋದರ ಸಂಬಂಧಿ ಪ್ರಶಾಂತ್ ಪಾಟೀಲ್ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆಯಿಂದ ಪಂಚನಾಮೆ ನಡೆಯುತ್ತಿದ್ದು, ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.ಪೊಲೀಸ್ ತನಿಖೆಗೆ ಕುಟುಂಬಸ್ಥರು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಈಗ ಪೊಲೀಸ್ ಇಲಾಖೆ ಕೂಡ ನಮಗೆ ಸಹಕಾರ ಕೊಡಬೇಕು. ಎಫ್‌ಐಆರ್‌ನಲ್ಲಿ ಹೆಸರು ಇರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ತಾಕೀತು ಮಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ. ಈಗಾಗಲೇ ಲಾಡ್ಜ್‌ನಲ್ಲಿ ಸಿಕ್ಕಿರುವ ವಸ್ತುಗಳು, ನಮ್ಮ ಸಹೋದರ ಸಂತೋಷ್‌ ಪಾಟೀಲ್‌ ಅವರು ಕಳುಹಿಸಿರುವ ವಾಟ್ಸಾಪ್ ಸಂದೇಶಗಳು ಹಾಗೂ ಇತರೆ ಸಾಕ್ಷ್ಯಗಳ ಬಗ್ಗೆ ನಾವೂ ಕೂಡ ಮೊಬೈಲ್‌ನಲ್ಲಿ ಚಿತ್ರ ಇಟ್ಟುಕೊಂಡಿದ್ದೇವೆ. ಈಗಿರುವ ಪ್ರಾಥಮಿಕ ಮಾಹಿತಿಯಂತೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ನಾವು ಯಾರ ಮೇಲೆ ದೂರು ಕೊಟ್ಟಿದ್ದೇವೆಯೋ ಅವರನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಪೊಲೀಸರು ಹೇಳಿದಂತೆ ನಾವು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇವೆ. ಈಗ ನಾವು ಪೊಲೀಸರನ್ನು ಕೇಳುತ್ತಿರುವುದು ಇಷ್ಟೇ. ಯಾರು ಯಾರು ಆರೋಪಿಗಳಿದ್ದಾರೋ ಅವರನ್ನು ಬಂಧಿಸದ ಹೊರತು ಲಾಡ್ಜ್‌ನಿಂದ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಸಹೋದರ ತಿಳಿಸಿದರು.

ಸಂತೋಷ್ ಬೆಳಗಾವಿಯ ಹಿಂಡಲಗಾ ಗ್ರಾಮದಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿದ್ದರು. ಕಾಮಗಾರಿ ಪೂರ್ಣಗೊಂಡರೂ ವರ್ಕ್ ಆರ್ಡರ್, ಹಾಗೂ ಬಿಲ್ ಪಾವತಿ ಆಗಿರಲಿಲ್ಲ. ವರ್ಕ್ ಆರ್ಡರ್ ಹಾಗೂ ಬಿಲ್ ಪಾಸ್ ಮಾಡಲು 40% ಕಮಿಷನ್ ಬೇಡಿಕೆಯನ್ನು ಸಚಿವ ಕೆ.ಎಸ್ ಈಶ್ವರಪ್ಪ, ಅವರ ಪಿಎಗಳು ಇಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು.

ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರವನ್ನು ಬರೆದಿದ್ದರು. ಆದರೆ ಈ ಆರೋಪವನ್ನು ಸಚಿವ ಈಶ್ವರಪ್ಪ ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

error: Content is protected !! Not allowed copy content from janadhvani.com