janadhvani

Kannada Online News Paper

ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ- ಸಚಿವ ಈಶ್ವರಪ್ಪ

ಸಂತೋಷ್ ಪಾಟೀಲ್ ಸಾವಿನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಶಿವಮೊಗ್ಗ: ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಮೃತಪಟ್ಟಿರುವ ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ, ವಾಟ್ಸಾಪ್ ನಲ್ಲಿ ಸಂದೇಶ ಬರೆದಿದ್ದಾರಷ್ಟೆ, ಅವರು ಆರೋಪ ಮಾಡಿದ್ದಾರೆ ಎಂಬಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಸಂತೋಷ್ ಪಾಟೀಲ್ ಮುಖ ಕೂಡ ನೋಡಿಲ್ಲ, ಅಂಥದ್ದರಲ್ಲಿ 80 ಬಾರಿ ನೋಡಿದ್ದೇನೆ, ಭೇಟಿಯಾಗಿದ್ದೇನೆ ಎಂದು ಹೇಗೆ ಹೇಳಿದ್ದಾರೋ ಗೊತ್ತಿಲ್ಲ, ಅವರು ದೆಹಲಿಯಲ್ಲಿ ಹೋಗಿ ಸುದ್ದಿಗೋಷ್ಠಿ ನಡೆಸಲು ವಿಮಾನ ಟಿಕೆಟ್ ಬುಕ್ ಮಾಡಿ ಕೊಟ್ಟವರ್ಯಾರು ಎಂದು ಕೇಳಿದರು.

ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿ ಡಿವೈಎಸ್ಪಿ ಗಣಪತಿ ವಿಡಿಯೊ ಮಾಡಿದ್ದರು, ಸಂತೋಷ್ ಪಾಟೀಲ್ ಪ್ರಕರಣದಲ್ಲಿ ವಿಡಿಯೊ ಮಾಡಿಲ್ಲ, ಡೆತ್ ನೋಟ್ ಬರೆದಿಲ್ಲ, ಕೇವಲ ಅವರು ಬರೆದಿದ್ದರು ಎನ್ನುವ ಸಂದೇಶ ಹರಿದಾಡುತ್ತಿದೆ, ಈ ಪ್ರಕರಣ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಷಡ್ಯಂತ್ರ ಬಗ್ಗೆ ತನಿಖೆಯಾಗಬೇಕು: ಸಂತೋಷ್ ಪಾಟೀಲ್ ಸಾವಿನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಅಧಿಕಾರದಲ್ಲಿ ಮುಂದುವರಿಯುವುದು ನಿಶ್ಚಿತ: ಸಂತೋಷ್ ಪಾಟೀಲ್ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡಿದ ನಂತರ ಕೋರ್ಟ್ ನೊಟೀಸ್ ನೀಡಿದ ಮೇಲೆ ಈ ಸಾವು ಸಂಭವಿಸಿದೆ. ಇದಕ್ಕೂ ಮುನ್ನ ಸಂತೋಷ್ ಪಾಟೀಲ್ ನನ್ನ ವಿರುದ್ಧ ಕಮಿಷನ್ ಕೇಳಿದ ಆರೋಪ ಮಾಡಿ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ದೂರು ನೀಡಿದ್ದರು. ಕಾಮಗಾರಿ ಟೆಂಡರ್ ನೀಡಬೇಕಾದರೆ ಕೆಲವು ನಿಯಮಗಳಿರುತ್ತವೆ. ಟೆಂಡರ್ ನೀಡದೆಯೇ ಕಾಮಗಾರಿ ನಡೆಸಲು ಸಾಧ್ಯವಾಗುತ್ತದಯೇ ಇದು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಈಶ್ವರಪ್ಪ ಆರೋಪಿಸಿದರು.

ಸಂತೋಷ್ ಸಾವಿನ ಪ್ರಕರಣ ನಂತರ ಕೇಂದ್ರ ನಾಯಕರು ನನ್ನ ಬಳಿ ವಿವರಣೆ ಕೇಳಿಲ್ಲ, ಕೇಂದ್ರ ನಾಯಕರವರೆಗೆ ಈ ವಿಷಯ ಹೋಗೇ ಇಲ್ಲ, ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಹೋಗಿ ಸಿಎಂ ಬೊಮ್ಮಾಯಿಯವರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಈಗಾಗಲೇ ಸಮಗ್ರ ತನಿಖೆ ನಡೆಸಲು ಸಿಎಂ ಬಳಿ ಮನವಿ ಮಾಡಿದ್ದೇನೆ, ಸಂತೋಷ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಾನು ರಾಜಕಾರಣ ರೀತಿಯಲ್ಲಿಯೂ ಮಾತನಾಡಬಲ್ಲೆ, ಈ ಪ್ರಕರಣದಲ್ಲಿ ದಾಖಲೆ ಸಮೇತ ಮಾತನಾಡಿದ್ದೇನೆ, ವಿಧಾನಸೌಧದಲ್ಲಿ ಕಲಾಪ ವೇಳೆ ಕೂಡ ಉತ್ತರಿಸಿದ್ದೇನೆ. ಇದು ನನಗೇನು ಹೊಸದಲ್ಲ, ಇಂತಹ ನೂರಾರು ಕೇಸುಗಳನ್ನು ನೋಡಿದ್ದೇನೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com