janadhvani

Kannada Online News Paper

ಮಕ್ಕಾ ಹರಮ್ ಮಸೀದಿಯಲ್ಲಿ ವ್ಯಾಪಕ ವ್ಯವಸ್ಥೆ- ಇಅ್’ತಿಕಾಫ್‌ಗೂ ಅನುಮತಿ

ಉಮ್ರಾ ಯಾತ್ರಿಕರು ಮತ್ತು ಪ್ರಾರ್ಥನೆಗೆ ಆಗಮಿಸುವ ಇತರರಿಗೆ ವಿಶೇಷ ಸ್ಥಾನಗಳನ್ನು ನಿರ್ಧರಿಸಲಾಗಿದೆ.

ಮಕ್ಕಾ: ಪವಿತ್ರ ರಂಜಾನ್ ತಿಂಗಳಲ್ಲಿ ಹರಮ್ ಮಸೀದಿಯ ಗರಿಷ್ಠ ಸಾಮರ್ಥ್ಯವನ್ನು ವಿಶ್ವಾಸಿಗಳಿಗೆ ಅನುಮತಿಸಲು ಮಕ್ಕಾದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಉಮ್ರಾ ಯಾತ್ರಿಕರು ಮತ್ತು ಪ್ರಾರ್ಥನೆಗೆ ಆಗಮಿಸುವ ಇತರರಿಗೆ ವಿಶೇಷ ಸ್ಥಾನಗಳನ್ನು ನಿರ್ಧರಿಸಲಾಗಿದೆ. ಮತಾಫ್ ಮತ್ತು ನೆಲಮಹಡಿಯನ್ನು ತವಾಫ್‌ಗಾಗಿ ನಿಗದಿಪಡಿಸಲಾಗಿದೆ.

ಮತಾಫ್‌ನ ನೆಲಮಾಳಿಗೆ, ನೆಲ ಮಹಡಿ ಮತ್ತು ಮೊದಲ ಮಹಡಿಯನ್ನು ತವಾಫ್‌ನ ನಂತರ ಸುನ್ನತ್ ನಮಾಝಿನ ಎರಡು ರಕ್ಅತ್‌ಗಳಿಗೂ ಬಳಸಬಹುದು. ಮೂರನೇ ಸೌದಿ ವಿಸ್ತರಣೆ ಯೋಜನೆ ಮತ್ತು ಕಿಂಗ್ ಫಹದ್ ಅಭಿವೃದ್ಧಿ ಯೋಜನೆ ಸಹಿತ, ಹರಮ್ ಮಸೀದಿಯ ಪ್ರಾಂಗಣಗಳನ್ನೂ ಪ್ರಾರ್ಥನೆಗಳಿಗಾಗಿ ತೆರೆಯಲಾಗುವುದು.

ಎರಡು ವರ್ಷಗಳ ನಂತರ ಈ ಬಾರಿ ಹರಂ ಶರೀಫಿನಲ್ಲಿ ಇಅ್ತಿಕಾಫ್‌ಗೆ ಅವಕಾಶ ನೀಡಲಾಗುವುದು ಎಂದು ಎರಡು ಹರಂಗಳ ಕಚೇರಿಯ ಮುಖ್ಯಸ್ಥ ಶೈಖ್ ಅಬ್ದುಲ್ ರಹ್ಮಾನ್ ಅಲ್-ಸುದೈಸ್ ಹೇಳಿದ್ದಾರೆ. ಇಅ್ತಿಕಾಫ್‌ಗೆ ಅನುಮತಿಗಳನ್ನು ಷರತ್ತುಗಳಿಗೆ ಒಳಪಟ್ಟು ನೀಡಲಾಗುತ್ತದೆ. ಹರಮ್ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್ ಮೂಲಕ ಪರವಾನಗಿಯನ್ನು ಪಡೆಯಬಹುದು.

ಕಿಂಗ್ ಅಬ್ದುಲ್ ಅಝೀಝ್ ಗೇಟ್, ಕಿಂಗ್ ಫಹದ್ ಗೇಟ್ ಮತ್ತು ಬಾಬ್ ಅಲ್ ಸಲಾಮ್ ಗೇಟ್‌ಗಳನ್ನು ಉಮ್ರಾ ಯಾತ್ರಿಕರು ಹರಮ್‌ಗೆ ಪ್ರವೇಶಿಸಲು ಮತ್ತು ಹಿಂತಿರುಗಲು ಗೊತ್ತುಪಡಿಸಲಾಗಿದೆ. ಇತರರು ಇತರ 144 ಗೇಟ್‌ಗಳಾದ ಅಜ್ಯಾದ್ ಸೇತುವೆ, ಶಬೆಕಾ ಸೇತುವೆ ಮತ್ತು ಮರ್ವಾ ಸೇತುವೆಯನ್ನು ಬಳಸಬಹುದು ಎಂದು ಹರಮ್ ಕಚೇರಿ ತಿಳಿಸಿದೆ.

error: Content is protected !! Not allowed copy content from janadhvani.com