janadhvani

Kannada Online News Paper

ಮುಸ್ಲಿಂ ವ್ಯಾಪಾರಿ ನಿರ್ಮಿಸಿದ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ

ಮಾರ್ಚ್ 23: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗ ಧಾರ್ಮಿಕ ಜಾತ್ರೆಗಳ ಸಂಭ್ರಮ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬ್ರಹ್ಮಕಲಶ, ವಾರ್ಷಿಕ ಜಾತ್ರೆ, ಕೋಲ, ನೇಮ, ನಾಗಮಂಡಲ ಮುಂತಾದವು ಸೀಮಿತ ಭಕ್ತರ ಮಧ್ಯೆ ನಡೆಯುತ್ತಿತ್ತು.

ಈಗ ಕೊರೊನಾ ನಿರ್ಬಂಧ ಸಡಿಲಗೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಅದರಂತೇ ಸುಗ್ಗಿ (ಶಿಶಿರ ಖುತು) ಮಾಸದಲ್ಲಿ ಹಲವು ಪುರಾಣ ಪ್ರಸಿದ್ದ ದೇವಾಲಯಗಳ ವಾರ್ಷಿಕ ಜಾತ್ರೆ/ರಥವೂ ನಡೆಯುತ್ತದೆ.

ಮಂಗಳೂರು – ಉಡುಪಿ ಹೆದ್ದಾರಿಯಲ್ಲಿರುವ ಮೂಲ್ಕಿಯಲ್ಲಿರುವ ಐತಿಹಾಸಿಕ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲೂ ವಾರ್ಷಿಕ ಜಾತ್ರೆ ಕಳೆಗಟ್ಟಲು ಆರಂಭವಾಗಿದೆ. ಮಾರ್ಚ್ 24ರಂದು ಇಲ್ಲಿ ಉತ್ಸವ ನಡೆಯಲಿದ್ದು, ಅದರ ಪೂರ್ವಭಾವಿ ಕಾರ್ಯಕ್ರಮಗಳು ಮಾರ್ಚ್ 23ರಿಂದ ಆರಂಭವಾಗಲಿದೆ.

ಈ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ವ್ಯಾಪಾರ ನಡೆಸುವ ವಿಚಾರದಲ್ಲಿ ಹಿಂದೂ ಸಂಘಟನೆಗಳು ನಿರ್ಬಂಧವನ್ನು ವಿಧಿಸಿದೆ. ಕರಾವಳಿ ಭಾಗದಲ್ಲಿ ತೀರಾ ಅಪರೂಪ ಎನ್ನುವಂತೆ ಈ ಬಾರಿ ಅನ್ಯ ಧರ್ಮೀಯ ವ್ಯಾಪಾರಸ್ಥರಿಗೆ ದೇವಾಲಯದ ಉತ್ಸವದಲ್ಲಿ ವ್ಯಾಪಾರ ನಡೆಸುವುದಕ್ಕೆ ನಿರ್ಬಂಧ ಹೇರುತ್ತಿರುವುದು ಈ ದೇವಾಲಯದಲ್ಲಿ ಮಾತ್ರವಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.

ಧಾರ್ಮಿಕ ಸದ್ಭಾವನೆಯ ಕೇಂದ್ರದಂತಿದ್ದ ಈ ದೇವಾಲಯದಲ್ಲಿ ಈ ಬಾರಿಯ ಉತ್ಸವಕ್ಕೆ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ನಿರ್ಬಂಧ ವಿಧಿಸಲಾಗಿದೆ. ಕ್ಷೇತ್ರದ ಇತಿಹಾಸದ ಪ್ರಕಾರ ಈ ದೇವಾಲಯವನ್ನು ನಿರ್ಮಿಸಿದ್ದು ಕೇರಳದ ಮುಸ್ಲಿಂ ವ್ಯಾಪಾರಿ.

ಬಪ್ಪಬ್ಯಾರಿಯ ದೋಣಿ ಮೂಲ್ಕಿಯಲ್ಲಿ ನದಿ ಮಧ್ಯೆ ನಿಲ್ಲುತ್ತದೆ
ಶಾಂಭವಿ ನದಿಯ ದಡದಲ್ಲಿರುವ ಈ ದೇವಾಲಯವನ್ನು ಕೇರಳದ ಬಪ್ಪಬ್ಯಾರಿ ಎನ್ನುವ ವ್ಯಾಪಾರಿ ನಿರ್ಮಿಸಿದ್ದಾರೆ ಎನ್ನುವುದು ದೇವಾಲಯದಲ್ಲೇ ಹೇಳಲಾಗುವ ಇತಿಹಾಸ. ವ್ಯಾಪಾರದ ಕಾರಣಕ್ಕಾಗಿ ಶಾಂಭವಿ ನದಿಯ ಮೂಲಕ ನೌಕಾಯಾನ ಮಾಡುತ್ತಿದ್ದ ಬಪ್ಪಬ್ಯಾರಿಯ ದೋಣಿ ಮೂಲ್ಕಿಯಲ್ಲಿ ನದಿ ಮಧ್ಯೆ ನಿಲ್ಲುತ್ತದೆ. ನದಿಯ ಪ್ರವಾಹದಿಂದ ಕುಸಿದಿದ್ದ ದೇವಾಲಯದ ಐದು ಲಿಂಗಗಳಿಂದ ದೋಣಿ ಮುಂದಕ್ಕೆ ಹೋಗುತ್ತಿರಲಿಲ್ಲ. ಆ ವೇಳೆ, ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದಾಗ, ಗಾಭರಿಗೊಳ್ಳುವ ಬಪ್ಪಬ್ಯಾರಿ ನಮಾಜ್ ಮಾಡಿ ದೋಣಿಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.

ಬಪ್ಪಬ್ಯಾರಿ ದೋಣಿಯಲ್ಲಿ ಮಲಗಿರುವಾಗ ಕನಸಿನಲ್ಲಿ ಬರುವ ದೇವತೆ ತನಗೆ ಗುಡಿ ಕಟ್ಟಿಸಿಕೊಡುವಂತೆ ಆದೇಶಿಸುತ್ತಾಳೆ. ಸ್ಥಳೀಯ ಜೈನ ಆಡಳಿತಗಾರರ ಸಹಕಾರದೊಂದಿಗೆ ಬಪ್ಪಬ್ಯಾರಿ ತನ್ನ ಆಸ್ತಿಯನ್ನೆಲ್ಲ ದೇವಾಲಯದ ನಿರ್ಮಾಣಕ್ಕೆ ನೀಡುತ್ತಾರೆ. ಬಪ್ಪಬ್ಯಾರಿಯ ಈ ಕೆಲಸದ ಗೌರವಾರ್ಥ ಈ ಕ್ಷೇತ್ರವನ್ನು ಬಪ್ಪನಾಡು ಎಂದು ಕರೆಯಲಾಗುತ್ತದೆ ಎನ್ನುವುದು ದೇವಾಲಯದ ಇತಿಹಾಸ. ವಾರ್ಷಿಕ ಉತ್ಸವದ ಮೊದಲ ಪ್ರಸಾದವನ್ನು ಬಪ್ಪಬ್ಯಾರಿಯ ಕುಟುಂಬಕ್ಕೆ ನೀಡುವುದೂ ಕ್ಷೇತ್ರದ ಪದ್ದತಿ. ಶಾಂತಿ ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದ್ದ ಈ ದೇವಾಲಯದ ಈ ಬಾರಿಯ ಜಾತ್ರೆಯಲ್ಲಿ ಕೋಮುವಾದಿಗಳಿಂದ ಅಪಸ್ವರ ಬಂದಿದೆ.

ಉಡುಪಿ ಜಿಲ್ಲೆಯ ಕಾಪು ಮಾರಿಗುಡಿಯಲ್ಲಿ ಆರಂಭವಾದ ನಿರ್ಬಂಧದ ಪರ್ವ ಕರಾವಳಿಯ ಹಲವು ದೇವಾಲಗಳಿಗೂ ಹರಡಿದೆ. ‘ಹಲವು ವರ್ಷಗಳಿಂದ ಜಾತ್ರೆಯಲ್ಲಿ ನಾವು ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದೆವು, ಈ ಬಾರಿ ಹಲವು ದೇವಾಲಯದಲ್ಲಿ ನಿರ್ಬಂಧ ವಿಧಿಸಲಾಗಿದೆ. ನಾವು ಬೀದಿ ವ್ಯಾಪಾರಿಗಳು, ನಿರ್ಬಂಧವನ್ನು ತೆಗೆದು ಹಾಕಬೇಕು’ಎಂದು ಉಡುಪಿ ಜಿಲ್ಲಾ ಬೀದಿ ವ್ಯಾಪಾರಿಗಳ ಮುಸ್ಲಿಂ ಸಂಘಟನೆ ಮನವಿ ಮಾಡಿಕೊಂಡಿದೆ.

ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರು ಅಂಗಡಿಗಳನ್ನು ಹಾಕುವಂತಿಲ್ಲ ಎಂಬ ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೇವಸ್ಥಾನದ ಅನುವಂಶಿಕ ಮುಕ್ತಸರರು ಹಾಗೂ ಆಡಳಿತ ಮೊಕೇಸರರು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲದಿನಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಬಳಿ ಮತ್ತು ಮುಲ್ಕಿ ಬಸ್ ನಿಲ್ದಾಣದ ಬಳಿ ಹಾಕಲಾಗಿರುವ “ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ’ ಎಂಬ ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊತ್ತೇಸರರಾದ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹಾಗೂ ಆಡಳಿತ ಮುಕ್ತರಾಗಿರುವ ಎನ್.ಎಸ್. ಮನೋಹರ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ದೇವಸ್ಥಾನದ ಅನುವಂಶಿಕ ಮೊಕೇಸರರಾದ ದುಗ್ಗಣ್ಣ ಸಾವಂತರು, ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನದ ವತಿಯಿಂದ ಈ ಬ್ಯಾನರನ್ನು ಹಾಕಲಾಗಿಲ್ಲ. ಮುಸ್ಲಿಮರು ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಕುರಿತು ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಕೆಲವು ಮುಸ್ಲಿಮರು ಹಾಕಿದ್ದ ಅಂಗಡಿಗಳನ್ನು ಅವರೇ ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಆಡಳಿತ ಮೊತ್ತೇಸರರಾದ ಎಂ.ಎಸ್. ಮನೋಹರ ಶೆಟ್ಟಿ ಅವರು, ಯಾವುದೇ ಧರ್ಮದವರು ಅಮ್ಮನವರ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ದೇವಸ್ಥಾನದ ಕಡೆಯಿಂದ ಯಾವುದೇ ನಿರ್ಬಂಧವಿಲ್ಲ. ಆದರೆ, ಅಹಿತಕರ ಘಟನೆಗಳು ನಡೆದರೆ ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ಬರುವ ಎಲ್ಲರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಬಳಿಕ ಅವರು ಒಪ್ಪಿಗೆ ನೀಡಿದರೆ ವ್ಯಾಪಾರಕ್ಕೆ ಪರವಾನಿಗೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ದೇವಸ್ಥಾನದ ಆಡಳಿತ ಸಮಿತಿಯ ಹೆಸರಿನಲ್ಲಿ ಬರೆಯಲಾಗಿದ್ದ ಬ್ಯಾನರ್ ತೆರವು

ಇತ್ತೀಚೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮತ್ತು ಬಸ್ಸು ನಿಲ್ದಾಣದಲ್ಲಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂಬ ಅರ್ಥದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಹೆಸರಿನಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಬೆಳಗ್ಗೆ ತುರ್ತು ಸಭೆ ನಡೆಸಿದ ಆಡಳಿತ ಮಂಡಳಿ, ಆ ಬ್ಯಾನರ್ ಗಳನ್ನು ತೆರವು ಮಾಡಿತ್ತು. ಆ ಬಳಿಕ ದುಷ್ಕರ್ಮಿಗಳು ‘ಸಮಸ್ತ ಹಿಂದೂ ಬಾಂಧವರು ಎಂಬ ಹೆಸರಿನಲ್ಲಿ ಮತ್ತೊಂದು ಬ್ಯಾನರನ್ನು ಅಳವಡಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !! Not allowed copy content from janadhvani.com