janadhvani

Kannada Online News Paper

ಶಿಕ್ಷಣವಿಲ್ಲದ ಕರಾಳ ವರ್ಷಗಳು, ಆನ್‌ಲೈನ್ ಶಿಕ್ಷಣ ಮತ್ತು ಇತರ ಪರಿಹಾರ ಮಾರ್ಗಗಳು

2020 & 2021 ಎರಡು ವರ್ಷಗಳನ್ನು ಮುಂದಿನ ಜನಾಂಗ ಕರಾಳ ವರ್ಷಗಳಾಗಿ ಎಣಿಸುವುದರಲ್ಲಿ ಎರಡು ಮಾತಿಲ್ಲ.

ಕೊರೋನಾ ಸಾಂಕ್ರಾಮಿಕದ ಕಾರಣ ಹೇಳಿ ಸ್ಥಗಿತಗೊಂಡ ಶೈಕ್ಷಣಿಕ ಚಟುವಟಿಕೆಗಳು ಒಂದು ವರ್ಷವನ್ನು ನುಂಗಿ ಹಾಕಿತು. ಇಂದಿನ ಮಕ್ಕಳು, ದೊಡ್ಡವರಾದಾಗ ಈ ವರ್ಷಗಳನ್ನು ಕರಾಳವಾದ ವರ್ಷಗಳೆಂದು ಹಿಯಾಳಿಸುವ, ತಮ್ಮನ್ನು ಮತ್ತು ಪೋಷಕರನ್ನು ಹಲುಬುವ ದಿನಗಳು ದೂರವಿಲ್ಲ.

ಪಿಯುಸಿ ಪರೀಕ್ಷೆ ರದ್ದುಪಡಿಸಿದ ಸಂತಸದಲ್ಲಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಅದರ ಪರಿಣಾಮವನ್ನು ಎದುರಿಸುವ ಸಾಮರ್ಥ್ಯವನ್ನು ಕಂಡುಕೊಳ್ಳಬೇಕಿದೆ. ತಮ್ಮ ಸರ್ಟಿಫಿಕೇಟ್‌ಗಳು ತಮ್ಮನ್ನು ಕೊರೋನಾ ಬ್ಯಾಚ್ ಎಂದು ಗುರುತಿಸುವಂತೆ ಮಾಡುತ್ತದೆ ಮಾತ್ರವಲ್ಲ ತಮ್ಮ ಉದ್ಯೋಗದ ಮೇಲೂ ವ್ಯತಿರಿಕ್ತವಾದ ಪರಿಣಾಮವನ್ನು ಬೀರಬಹುದು. ಎಸ್ಸೆಸ್ಸಲ್ಸಿ ವಿದ್ಯಾರ್ಥಿಗಳಿಗೂ ಕೂಡಾ ಪರೀಕ್ಷೆ ಬೇಡ ಎಂದು ವಾದಿಸುವವರೇ ಅಧಿಕ! ಆದರೆ, ಅವರ‌್ಯಾರೂ ಈ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿತರಾಗಿಲ್ಲ ಅನ್ನುವುದು ಅಷ್ಟೇ ಸತ್ಯ.

ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಸರಕಾರ ಆನ್‌ಲೈನ್ ಮೂಲಕ ಹಲವಾರು ತರಗತಿಗಳನ್ನು ನಡೆಸುವ ಮೂಲಕ ಶಿಕ್ಷಣ ನಿರಂತರವಾಗಿ ನಡೆಯಬೇಕಾದ ಚಟುವಟಿಕೆ ಎಂದು ಮನಗಂಡಿದೆ.

ಶಿಕ್ಷಣ ಯಾವತ್ತೂ ನಿಂತುಹೋಗಬಾರದು, ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ. ಆರ್ಥಿಕವಾಗಿ ಸಬಲರಾದ ಶ್ರೀಮಂತರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮನೆಪಾಠದ ಮೂಲಕ ಮುಂದುವರೆಸುತ್ತಿದ್ದರೆ, ಒಂದಷ್ಟು ಮಂದಿ, ಆನ್‌ಲೈನ್ ಮೂಲಕ ಲಭ್ಯವಾಗುವ ಶಿಕ್ಷಣದ ಮೊರೆ ಹೋಗಿ, ತಮ್ಮ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಆದರೆ, ಬಹಳಷ್ಟು ಮಕ್ಕಳು, ಪೋಷಕರ ಉದಾಸೀನತೆ, ನೆಟ್ವರ್ಕ್ ಸಮಸ್ಯೆ, ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಊರಿನ‌‌ ಶಾಲೆಗಳೆಲ್ಲಾ ಈ ವರ್ಷವೂ ತೆರೆಯುವುದು, ಸ್ವಲ್ಪ ತಡವಾಗಬಹುದು ಅಥವಾ ಕೆಲವೊಮ್ಮೆ ಈ ವರ್ಷವೂ ಶಿಕ್ಷಣ ಮರೀಚಿಕೆಯಾಗಿಯೇ ಉಳಿಯಬಹುದೇನೋ?

ಆದರೆ, ಪೋಷಕರು ಸ್ವಲ್ಪ ಉದಾಸೀನತೆಯನ್ನು ಬಿಟ್ಟು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ.

ಪರಿಹಾರ ಬೋಧನೆ ನಡೆಯಬೇಕಿದೆ. ಈ ಮೊದಲು ಸಾಂಕ್ರಾಮಿಕ ರೋಗಗಳು ಬಂದಾಗಲೆಲ್ಲಾ ಮುಂದುವರೆದ ರಾಷ್ಟಗಳಲ್ಲಿ ಶಾಲೆಗಳನ್ನು ಬಂದ್ ಮಾಡಿರಲಿಲ್ಲ. ಶಿಕ್ಷಣಕ್ಕೆ ಅತಿಯಾದ ಮಹತ್ವವನ್ನು ನೀಡಿದ ಕಾರಣಕ್ಕೆ ಅವರ ಮುಂದಿನ ತಲೆಮಾರು ಉತ್ತಮವಾದ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಯಿತು. ನಮ್ಮ ಮುಂದಿನ ತಲೆಮಾರಿನ ಭವಿಷ್ಯ ಏನಾಗಬಹುದೋ? ದೇವನೇ ಬಲ್ಲ!

ಶಾಲೆಗಳು ತೆರೆಯುವುದಿಲ್ಲ, ಪೋಷಕರೋ, ಊರಿನ ಸಂಘಟನೆಗಳೋ ಪರಿಹಾರ ಭೋದನೆಗಾಗಿ ಬೇರೆ ವ್ಯವಸ್ಥೆಗಳನ್ನು ಕಂಡುಕೊಳ್ಳಲು ಪ್ರಯತ್ನ ನಡೆಸಿಲ್ಲ ಎಂದಾದರೆ, ಮುಂದಿನ ತಲೆಮಾರು ನಮ್ಮನ್ನು ಹಲುಬಿದರೆ ಉತ್ಪ್ರೇಕ್ಷೆಯಿಲ್ಲ.

ಆನ್‌ಲೈನ್ ಶಿಕ್ಷಣ ಪಡೆಯಲು ಹಿಂದೇಟು ಹಾಕಲು ಹಲವಾರು ಪೋಷಕರಿಗೆ, ಆನ್‌ಲೈನ್ ತರಗತಿಗಳಿಂದ ಉಂಟಾಗುವ ಹಾನಿಗಿಂತ, ಮಕ್ಕಳನ್ನು ತಾವೇ ನೋಡಿಕೊಳ್ಳಬೇಕಾದ (MONITOR) ಉದಾಸೀನತೆ ಹೆಚ್ಚಾಗಿ ಕಾಡುವುದರಿಂದ ಬಹುತೇಕ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಆನ್‌ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ನಮಗೆ ಬಹಳಷ್ಟಿದೆ. ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಸಹಕಾರಿಯಾಗುವ ಹಲವಾರು ಸೆಟ್ಟಿಂಗ್‌ಗಳು ಇಂದಿನ ಹೊಸ ತಂತ್ರಜ್ಞಾನ ಹೊಂದಿರುವ ಮೊಬೈಲ್‌ಗಳಲ್ಲಿ ಇವೆ. Digital Wellbeing & Parental Controls ಎಂಬ ಸೆಟ್ಟಿಂಗ್ ಮೂಲಕ ನಮ್ಮ ಮೊಬೈಲ್ ಬಳಕೆ ಯನ್ನು ನಾವೇ ನಿಯಂತ್ರಿಸಲು ಸಾಧ್ಯವಾಗುವ ರೀತಿಯ ತಂತ್ರಜ್ಞಾನಗಳು ಇಂದು ಲಭ್ಯವಿದೆ. ಅದರ ಬಳಕೆಯನ್ನು ನಾವು ಕಲಿಯುವ ಹಂತಕ್ಕೆ ಯೋಚಿಸಲು ನಾವು ತಯಾರಿಲ್ಲ ಅಥವಾ ಆ ಗೋಜಿಗೆ ನಾವು ಹೋಗುವುದಿಲ್ಲ ಎಂದು ಮಾತ್ರವೇ ಹೇಳಬೇಕು ಇಲ್ಲವೇ ನಾವು ಅನಕ್ಷರಸ್ಥರಾಗಿರಬೇಕು. ಮೊಬೈಲ್ ಬಳಕೆಯನ್ನು ಮಾಡಲು ಅನಕ್ಷರಸ್ಥರು ಯಾರೂ ಇಲ್ಲ ಅನ್ನುವುದೇ ಬಹುತೇಕ ಸಂದರ್ಭಗಳಲ್ಲಿ ಸತ್ಯದ ಮಾತು. ಅನಗತ್ಯವಾಗಿ ಗಂಟೆಗಟ್ಟಲೆ ಯೂಟ್ಯೂಬ್‌ನಲ್ಲಿ ಕಳೆಯುವ ಅದೆಷ್ಟೋ ಮಂದಿ ನಮ್ಮ ಮುಂದೆ ಇರುತ್ತಾರೆ. ಆವಾಗೆಲ್ಲ ಅವರಿಗೆ ಯಾರೋ ಒಬ್ಬ ಪುಣ್ಯಾತ್ಮ ಒಂದು ಸಾರಿ ಹೇಳಿ ಕೊಟ್ಟದ್ದು, ಮರೆಯದೇ ಮತ್ತೆ ಉಪಯೋಗಿಸುವ ಜ್ಞಾನವನ್ನು ಹೊಂದಿರುತ್ತಾರೆ.

ಒಟ್ಟಿನಲ್ಲಿ ಆನ್‌ಲೈನ್ ಶಿಕ್ಷಣ, ಇಲ್ಲವೇ ಹಳ್ಳಿಗಳಲ್ಲಿ ಪ್ರಯಾಯ ಬೋಧನೆಗಿರುವ ಮನೆಪಾಠ ಶಾಲೆಗಳನ್ನು ತೆರೆದು ಈ ತಲೆಮಾರನ್ನು ಶಿಕ್ಷಣ ವಂಚಿತರಾಗದಂತೆ ಕಾಪಾಡಬೇಕಾದ ಅಗತ್ಯತೆ ಹೆಚ್ಚಿದೆ. ಮಕ್ಕಳ ಭವಿಷ್ಯದ ಹಿತ ಚಿಂತಕರು ಮತ್ತು ಊರಿನ ಸಾಮಾಜಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಯೋಚಿಸಿ, ಚಿಂತಿಸಿ, ಕಾರ್ಯಯೋಜನೆಗಳನ್ನು ಹಾಕಿಕೊಂಡರೆ, ಭವಿಷ್ಯದ ಜನಾಂಗ ನಿಮ್ಮನ್ನು ಕೊಂಡಾಡದೇ ಇರದು. ನೆನಪಿಟ್ಟುಕೊಳ್ಳಿ!

error: Content is protected !! Not allowed copy content from janadhvani.com