janadhvani

Kannada Online News Paper

ಸಂವಿಧಾನದ ಆಶಯವನ್ನು ಉಳಿಸುವುದು ನಮ್ಮ ಪ್ರತಿಜ್ಞೆಯಾಗಬೇಕು – ಕತ್ತರ್ ಕೆಸಿಎಫ್ ಗಣರಾಜ್ಯೋತ್ಸವದಲ್ಲಿ ಡಾ| ಝೈನಿ ಕಾಮಿಲ್

ಭಾರತವು 72ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಾತಿ, ಮತ, ಪಥ, ವರ್ಗ, ವರ್ಣಗಳಿಗತೀತವಾಗಿ ಭಾರತೀಯರೆಲ್ಲಾ ಒಂದು ಎಂಬ ಆಶಯದೊಂದಿಗೆ 1950 ರ ಜನವರಿ 26 ರಂದು ಜಾರಿಗೆ ಬಂದ ನಮ್ಮ ಸಂವಿಧಾನದ ನೈಜ ಆಶಯವನ್ನು ಉಳಿಸುವ ಬಗ್ಗೆ ಭಾರತೀಯರು ಪ್ರತಿಜ್ಙಾಭದ್ಧರಾಗಬೇಕು. ಸಂವಿಧಾನವು ಘೋಷಿಸುವಂತಹ ಸಾರ್ವಭೌಮತೆ, ಸಹೋದರತ್ವ ಮತ್ತು ಸಮಾನತೆಯನ್ನು ಎತ್ತಿಹಿಡಿದು ಬಲಿಷ್ಠ ಭಾರತದ ನಿರ್ಮಾಣ ನಮ್ಮ ಧ್ಯೇಯವಾಗಬೇಕು ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರರಾಷ್ಟ್ರೀಯ ಸಮಿತಿ ನಾಯಕರಾದ ಡಾ| ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿಯವರು ಹೇಳಿದರು.

ಕತ್ತರ್ ಕೆಸಿಎಫ್ ಝೂಮ್ ಅಪ್ಲಿಕೇಶನ್ ಮೂಲಕ ಆಯೋಜಿಸಿದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಾ, ಮಹಾಕವಿ ಕುವೆಂಪು ರವರ ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಎಂಬ ಸುಂದರ ಆಶಯವು ನಮ್ಮ ಕನಸಾಗಿದೆ ಎಂದರು.

ಗಣ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕತ್ತರ್ ಇಂಡಿಯನ್ ಕಲ್ಚರಲ್ ಸೆಂಟರ್ ನ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ರವರು ಮಾತನಾಡಿ, ಅನಿವಾಸಿ ಕನ್ನಡಿಗರೆಡೆಯಲ್ಲಿ ಕೆಸಿಎಫ್ ನಡೆಸುತ್ತಿರುವ ಸಮಾಜಮುಖೀ ಚಟುವಟಿಕೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಸಂಘಟನೆಯ ಕಾರ್ಯಕರ್ತರನ್ನು ಅಭಿನಂದಿಸಿದರು.

ಹಾಫಿಲ್ ಉಮರುಲ್ ಫಾರೂಕ್ ಸಖಾಫಿಯವರ ದುಆದೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಕಮರುದ್ದೀನ್ ಗೂಡಿನಬಳಿಯವರು ಉದ್ಘಾಟಿಸಿ ಮಾತನಾಡುತ್ತಾ ಅನೇಕಾರು ಜಾತಿ ಮತ ವರ್ಣ ವರ್ಗಗಳಾಗಿದ್ದರೂ ನಾವೆಲ್ಲರೂ ಭಾರತೀಯರು ಮತ್ತು ಸಹೋದರರಾಗಿದ್ದು ಈ ಆಶಯವನ್ನು ಮುಂದಿನ ಎಲ್ಲಾ ತಲೆಮಾರುಗಳು ಅನುಭವಿಸುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ, ಕತ್ತರ್ ರಾಯಭಾರಿ ಕಚೇರಿ ಅಧೀನದಲ್ಲಿರುವ ವಿವಿಧ ಸಂಸ್ಥೆಗಳ MC (ಮ್ಯಾನೇಜ್ಮೆಂಟ್ ಕಮಿಟಿ) ಸದಸ್ಯರುಗಳಾಗಿ ಆಯ್ಗೆಯಾದ ಕನ್ನಡಿಗರನ್ನು ಆಹ್ವಾನಿಸಿ ಕೆಸಿಎಫ್ ವತಿಯಿಂದ ಅಭಿನಂದಿಸಲಾಯಿತು. ICC ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ICBF ನಿರ್ವಹಣಾ ಸಮಿತಿ ಸದಸ್ಯರಾದ ದಿನೇಶ್ ಗೌಡ ಹಾಗೂ ISC ನಿರ್ವಹಣಾ ಸದಸ್ಯರಾದ ಟಿ ಶ್ರೀನಿವಾಸ ರವರನ್ನು ಕೆಸಿಎಫ್ ಕತ್ತರ್ ಸಂಘಟನಾಧ್ಯಕ್ಷರಾದ ಹನೀಫ್ ಪಾತೂರುರವರು ಅಭಿನಂದಿಸಿದರು.

ಕೆಸಿಎಫ್ ಕತ್ತರ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಯೂಸುಫ್ ಸಖಾಫಿ ಅಯ್ಯಂಗೇರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ನಿರೂಪಣೆಯನ್ನು ಝಾಕಿರ್ ಚಿಕ್ಕಮಗಳೂರುರವರು ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಹಂಡುಗುಳಿಯವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ರಿಶಾದ್ ಮಧುವನರವರು ಧನ್ಯವಾದ ಹೇಳಿದರು

error: Content is protected !! Not allowed copy content from janadhvani.com