janadhvani

Kannada Online News Paper

ಕೆಂಪು ಕೋಟೆ: ಸಿಖ್ ಧ್ವಜ ಹಾರಿಸಿದ ಪ್ರಮುಖ ವ್ಯಕ್ತಿಗೆ ಬಿಜೆಪಿ ನಂಟು

ನವದೆಹಲಿ,ಜ. 26: ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಇಂದಿನ ಗಣರಾಜ್ಯೋತ್ಸವದ ಭಾಗವಾಗಿ ಹೋರಾಟ ನಿರತ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಿದ್ದಾರೆ. ಈ ವೇಳೆ, ಕೆಂಪುಕೋಟೆಗೆ ಧಾವಿಸಿದ ರೈತರ ಗುಂಪಿನಲ್ಲಿದ್ದ ಕೆಲವರು ನಿಶಾನ್ ಸಾಹಿಬ್ (ಸಿಖ್ ಧರ್ಮದ ಬಾವುಟ)ವನ್ನೂ ಮತ್ತು ರೈತ ಧ್ವಜವನ್ನು ಹಾರಿಸಿದ್ದಾರೆ. ಇದು ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಇದೀಗ ಹೊರಬಂದಿರುವ ವಿಚಾರವೆಂದರೆ, ಆ ಗುಂಪಿನ ಪ್ರಮುಖ ವ್ಯಕ್ತಿ ದೀಪ್ ಸಿಧು ಆಗಿದ್ದಾನೆ. ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವಾಗಲೇ ಆತ ಅಲ್ಲಿದ್ದುದರ ವಿಡಿಯೋ ಈಗ ಬಹಿರಂಗವಾಗಿದೆ.

ಪಂಜಾಬ್ ಚಿತ್ರ ನಟ ದೀಪ್ ಸಿಧು ಬಿಜೆಪಿಯೊಂದಿಗಿನ ಈತನ ಸಂಬಂಧದ ಕುರಿತು ಒಂದಾದ ಮೇಲೆ ಒಂದು ಪುರಾವೆಗಳು ಹೊರಬರುತ್ತಿದೆ.ಈ ಕುರಿತು ಈಗಾಗಲೇ ಚಂಢೀಗಡದ ಪ್ರಮುಖ ಪತ್ರಿಕೆ ದಿ ಟ್ರಿಬ್ಯೂನ್ ಹಾಗೂ ಪಂಜಾಬ್ ನ್ಯೂಸ್ ಎಕ್ಸ್‍ಪ್ರೆಸ್‍ಗಳ ಜಾಲತಾಣಗಳು ಸುದ್ದಿ ಪ್ರಕಟಿಸಿವೆ. ಜೊತೆಗೆ ಈ ಬಗ್ಗೆ ಟ್ವೀಟ್ ಮಾಡಿರುವ ವಕೀಲ, ಸಾಮಾಜಿಕ ಚಿಂತಕ ಪ್ರಶಾಂತ್ ಭೂಷಣ್ ಅವರು, ಮೋದಿ ಮತ್ತು ಅಮಿತ್‍ಶಾ ಅವರೊಂದಿಗೆ ದೀಪು ಸಿಧು ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೋದಿ-ಶಾ ಜೊತೆಗೆ ಇರುವ ದೀಪು ಸಿಧು ಇಂದು ಕೆಂಪು ಕೋಟೆಗೆ ರೈತರ ಗುಂಪನ್ನು ಕರೆದೊಯ್ದು ಅಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನವೇ, ಪಂಜಾಬ್‍ನ ಶಂಭು ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿಯೇ ದೀಪ್ ಸಿಧು ಅವರ ನಡವಳಿಕೆಯನ್ನು ಗಮನಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಆತನನ್ನು ಪ್ರತಿಭಟನೆಯಿಂದ ಹೊರಗಿಟ್ಟಿತ್ತು. ಒಬ್ಬ ರೈತ ನಾಯಕರು ಈತನನ್ನು ‘ಈತ ರೈತ ಹೋರಾಟದ ಶತ್ರು’ ಎಂದೂ ಕರೆದಿದ್ದರು.

ಈತ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‍ನ ಗುರುದಾಸ್‍ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಪರವಾರಿ ಚುನಾವಣಾ ಪ್ರಚಾರ ನಡೆಸಿದ್ದರು. ಪ್ರಚಾರದ ಉಸ್ತುವಾರಿಯನ್ನೂ ವಹಿಸಿದ್ದರು ಎಂದು ವರದಿಯಾಗಿದೆ. ಅಂದರೆ 2019ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಲ್ಲದೇ ಮೋದಿ ಮತ್ತು ಅಮಿತ್‍ಶಾರ ಜೊತೆಗೆ ಫೋಟೋ ತೆಗೆಸಿಕೊಳ್ಳುವಷ್ಟು ಹತ್ತಿರದಲ್ಲಿದ್ದ ಎಂಬುದು ಆಘಾತಕಾರಿಯಾಗಿದೆ.

ಮೂರು ಕೃಷಿ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸುವ ಮತ್ತು ಹಿಂಸಾಚಾರವನ್ನು ಬಿತ್ತುವ ಉದ್ದೇಶದಿಂದ ಈ ರೀತಿಯ ಘಟನೆಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆಯೆಂದು ಹಲವರು ಆರೋಪಿಸಿದ್ದಾರೆ.

error: Content is protected !! Not allowed copy content from janadhvani.com