janadhvani

Kannada Online News Paper

ಫೈನಲ್ ಸೆಮಿಸ್ಟರ್ ಪರೀಕ್ಷೆ ಅಗತ್ಯ- ಸಚಿವ ಪೋಖ್ರಿಯಾಲ್ ಸ್ಪಷ್ಟನೆ

ನವದೆಹಲಿ: ಹಲವು ರಾಜ್ಯ ಸರ್ಕಾರಗಳು ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ನ ಪರೀಕ್ಷೆಯನ್ನು ಮುಂದೂಡಿವೆ.

ಆದರೆ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಅಧೀನದ ಶಿಕ್ಷಣ ಸಂಸ್ಥೆಗಳಿಗೆ ಇದು ಅನ್ವಯಿಸಲ್ಲ. ಅಂತಿಮ ವರ್ಷದ ಅಥವಾ ಸೆಮಿಸ್ಟರ್ನ ಪರೀಕ್ಷೆ ನಡೆಸಲೇಬೇಕು. ಇದಕ್ಕಾಗಿ ಇನ್ನೆರಡು ತಿಂಗಳ ಗಡುವು ನೀಡಿ, ಅಷ್ಟರೊಳಗಾಗಿ ಮುಗಿಸಿ ಎಂದು ಸುತ್ತೋಲೆ ಹೊರಡಿಸಿದೆ.

ಕೋವಿಡ್ ಸಂಕಷ್ಟ ಮುಂದಿನ ಸೆಪ್ಟಂಬರ್ವರೆಗೆ ದೇಶವನ್ನು ಕಾಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗಿರುವಾಗ ಪರೀಕ್ಷೆ ನಡೆಸಲೇಬೇಕು ಎಂದು ಯುಜಿಸಿ ಪಟ್ಟು ಹಿಡಿದಿರುವುದಾದರೂ ಏಕೆ ಎಂಬುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಸ್ಪಷ್ಟನೆ ನೀಡಿದ್ದಾರೆ.

ಅಂತಿಮ ವರ್ಷದ ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದು ಸರಿಯಲ್ಲ. ಇದು ಅವರ ಭವಿಷ್ಯಕ್ಕೂ ಶ್ರೇಯಸ್ಕರವಲ್ಲ. ಪರೀಕ್ಷೆ ಇಲ್ಲದೇ ಪಾಸಾಗಿದ್ದಾನೆ ಎಂದರೆ ಅವರ ವ್ಯಾಸಂಗಕ್ಕೆ ಕೋವಿಡ್ ಮುದ್ರೆ ಅಂಟಿಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಅವರು ಉದ್ಯೋಗ ಅಥವಾ ಇನ್ನಾವುದೇ ಕ್ಷೇತ್ರ ಪ್ರವೇಶಿಸುವಾಗ ಅವರನ್ನು ಪ್ರತ್ಯೇಕಿಸಿ ನೋಡುವ ಪರಿಪಾಠ ಬೆಳೆಯುತ್ತದೆ. ಇದನ್ನು ಯಾವ ವಿದ್ಯಾರ್ಥಿಯೂ ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಪರೀಕ್ಷೆ ನಡೆಸುವುದು ಕಷ್ಟವೇನೂ ಅಲ್ಲ, ಕೊಂಚ ವಿಳಂಬವಾಗಬಹುದು ಅಷ್ಟೇ. ಆದರೆ, ಇದಕ್ಕಾಗಿ ವಿದ್ಯಾರ್ಥಿಗಳ ಭಿವಿಷ್ಯವನ್ನು ಹಾಳು ಮಾಡುವುದು ಬೇಡ. ಪರೀಕ್ಷೆ ನಡೆಸುವುದನ್ನು ವಿರೋಧಿಸುತ್ತಿರುವ ರಾಜ್ಯಗಳು ಕೇಂದ್ರದ ಅಥವಾ ಯುಜಿಸಿಯ ಆಶಯವನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಪೋಖ್ರಿಯಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com