janadhvani

Kannada Online News Paper

ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ನಾಯಕರನ್ನು ಸಾರ್ವಜನಿಕ ಹುದ್ದೆಯಿಂದ ನಿಷೇಧಿಸಬೇಕು

ನವದೆಹಲಿ: ಅಧಿಕಾರ, ಹಣ ಮತ್ತು ಇನ್ನಿತರೆ ಆಸೆಗಳಿಂದ ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರವಾಗುವ ನಾಯಕರನ್ನು 5 ವರ್ಷ ಸಾರ್ವಜನಿಕ ಹುದ್ದೆಯಿಂದ ನಿಷೇಧಿಸಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಖ್ಯಾತ ವಕೀಲರಾದ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್ ಅವರು, ‘ಪಕ್ಷಾಂತರಿಗಳು ಮುಂದಿನ ಐದು ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಅನುಭವಿಸುವುದರ ಮೇಲೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೇಲೆ ನಿಷೇಧ ಹೇರಬೇಕು ಎಂದು ಹೇಳಿದ್ದಾರೆ.

ರಾಜಸ್ಥಾನದ ರಾಜಕೀಯ ಬೆಳವಣಿಗೆಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಜನರಿಂದ ಆಯ್ಕೆಯಾದ ಸರ್ಕಾರವನ್ನು ‘ಭ್ರಷ್ಟ ಮಾರ್ಗ’ದಿಂದ ಕೆಡವುವಂಥ ವೈರಸ್‌ ದೆಹಲಿಯಲ್ಲಿದೆ. ಇದು ವುಹಾನ್‌ ವೈರಸ್‌ನಷ್ಟೇ ಅಪಾಯಕಾರಿ. ಇದಕ್ಕಿರುವ ಪ್ರತಿಕಾಯಗಳೆಂದರೆ ಸಂವಿಧಾನದ ಹತ್ತನೇ ವಿಧಿಗೆ ತಿದ್ದುಪಡಿ ಮಾಡುವುದಾಗಿದೆ. ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತಂದು, ಪಕ್ಷಾಂತರಿಗಳು ಐದು ವರ್ಷಗಳ ಕಾಲ ಯಾವುದೇ ಹುದ್ದೆ ಹೊಂದುವುದು ಹಾಗೂ ಮುಂದಿನ ಚುನಾವಣೆ ಎದುರಿಸುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.

ತಾನು ಬಿಜೆಪಿ ಸೇರುವುದಿಲ್ಲ ಎಂದು ಸಚಿನ್‌ ಪೈಲಟ್‌ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ‘ಅವರ ಘರ್‌ ವಾಪಸಿ ವಿಚಾರ ಏನಾಯಿತು? ಹರಿಯಾಣದಲ್ಲಿ ಕೇಸರಿ ಪಕ್ಷದ ಕಣ್ಗಾವಲಿನಲ್ಲಿ ಸಚಿನ್‌ ಬೆಂಬಲಿಗ ಶಾಸಕರು ರಜಾಕಾಲವನ್ನು ಅನುಭವಿಸುತ್ತಿದ್ದಾರೆಯೇ’ ಎಂದು ಸಿಬಲ್‌ ಪ್ರಶ್ನಿಸಿದ್ದಾರೆ.

error: Content is protected !! Not allowed copy content from janadhvani.com