janadhvani

Kannada Online News Paper

ಭಾರತೀಯರೇಕೆ ಮತ್ತೆ ಮತ್ತೆ ಮೂರ್ಖರಾಗುತ್ತಿದ್ದಾರೆ?

ಅಧಃಪತನದತ್ತ ಸಾಗಿರುವ ದೇಶದಲ್ಲಿ, ಅಂಧಕಾರಗಳ ಹಾದಿಯಲ್ಲಿರುವರೇ ಭಾರತೀಯರು?

✍️ ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ.(ಮಾರ್ದನಿ-ಸೆಸ್ಮಾ-ಎಮ್ಮೆಸ್ಸೆಸ್)

“ಯಥಾ ರಾಜ, ತಥಾ ಪ್ರಜೆ”. ಅರ್ಥಾತ್, ಮೋದಿ ಸರ್ಕಾರದ ಯಾವುದೇ ಸಂದೇಹಾಸ್ಪದ ನೀತಿ-ನಿಲುವು-ಘೋಷಣೆಗಳನ್ನು ವಿಚಾರಣೆಗೊಳಪಡಿಸದೆ, ಪ್ರಶ್ನಿಸದೆ, ಪಾಲಿಸುವಂಥ ಅಂಧ ಭಕ್ತರಾದ, ಮೌಢ್ಯತೆಯತ್ತ ಸಾಗುತ್ತಿರುವ, ಇಮೋಷನಲ್ ವಿಚಾರಗಳಿಗೆ ಸುಲಭವಾಗಿ ಬೇಸ್ತು ಬೀಳುವ ಪ್ರಜೆಗಳು. ಮೇಲಿನ ಜನಪ್ರಿಯ ನಾಣ್ಣುಡಿಗೆ ಅನ್ವರ್ಥಕವಾಗಿದೆ ಇಂಡಿಯಾ ದೇಶದ ಇಂದಿನ ದುಸ್ಥಿತಿ.

ಪ್ರಧಾನಿ ಮೋದಿಯವರ “ಚಪ್ಪಾಳೆ ತಟ್ಟುವುದು, ಗಂಟೆ-ತಮಟೆ ಬಾರಿಸುವುದು, ರಾತ್ರಿ ಹೊತ್ತು ಮೊಂಬತ್ತಿ-ದೀಪ ಹಚ್ಚುವುದು ಅಥವಾ ಮೊಬೈಲ್ ಟಾರ್ಚ್ ಬೆಳಗಿಸುವುದು” ಎಂಬಂಥ ಅವೈಚಾರಿಕ-ಅವೈಜ್ಞಾನಿಕ ಕರೆಗೆ ಬಹುತೇಕ ಭಾರತೀಯರು ಅತೀವ ಉತ್ಸಾಹದಿಂದ ಸ್ಪಂದಿಸಿರುವುದರಿಂದ ಮೇಲ್ಕಂಡ ನಾಣ್ಣುಡಿಯನ್ನು ಇಲ್ಲಿ ಪ್ರಸ್ತಾಪಿಸಬೇಕಾಯಿತು.ಬಹುಷಃ ಮನುಷ್ಯರಿಂದ ಈ ದೇಶವನ್ನು ಕಾಪಾಡಲು ಸಾಧ್ಯವಿಲ್ಲವೇನೋ? ಎಂಬಷ್ಟರ ಮಟ್ಟಿಗೆ ಭಾರತವು ಅವೈಚಾರಿಕ-ಅವೈಜ್ಞಾನಿಕ ರೀತಿಯಲ್ಲಿ ಅವನತಿಯತ್ತ ಸಾಗುತ್ತಿದೆಯೇನೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನಾಡಿನ ನಾನಾ ಕಡೆಗಳಲ್ಲಿ ದಡ್ಡತನದ ಆಡಳಿತಗಾರರು & ಮೂಢನಂಬಿಕೆಯ ಜನರು ವಕ್ಕರಿಸಿರುವುದರಿಂದಲೇ ಅಂಥವರ ಅಹಂಕಾರ, ಸಂಕುಚಿತತೆ, ಅಮಾನವೀಯತೆ, ಪೆದ್ದುತನಗಳಂಥ ದುರ್ಗುಣಗಳನ್ನು ಕಣ್ಣಿಗೆ ಕಾಣದ ವೈರಸ್..ನಿಂದ ಹೊಡೆದೋಡಿಸಲೆಂಬಂತೆ ಸರ್ವಶಕ್ತನಾದ ದೇವನು ಕೊರೋನಾದಂಥ ವೈರಾಣುವಿನ ಮೂಲಕ ಜನರನ್ನು ದಂಡಿಸುತ್ತಿರುವನೇನೋ? ಎಂದು ಪ್ರಜ್ಞಾವಂತ ನಾಗರಿಕರಿಗೆ ಅನಿಸದಿರದು.

ಜನರನ್ನು Emo’tional [ಭಾವನಾತ್ಮಕ] ಎಂಬ ಪರಿಣಾಮಕಾರಿ ಅಸ್ತ್ರದಿಂದ ಮರುಳು ಮಾಡುವ ಮೂಲಕವೇ ಬಿಜೆಪಿಯು ತನ್ನ ವಕ್ರ ಹಾದಿಯ ನಡುವೆಯೂ ದೇಶದಲ್ಲಿ ಬಲಿಷ್ಠವಾಗಿ ಬೇರೂರಿರುವುದು. ಆ ಪಕ್ಷದ ಹಿನ್ನೆಲೆಗಳನ್ನು ಗಮನಿಸಿದರೆ ಇದು ಸಹಜವಾಗಿ ಗೋಚರಗೊಳ್ಳುತ್ತದೆ.ಅಷ್ಟಕ್ಕೂ ಪ್ರಧಾನಿಯು ಹೇಳಿದ್ದೆಲ್ಲವನ್ನೂ ವಿರೋಧ-ಭಿನ್ನ ಧ್ವನಿ, ಪ್ರತಿಭಟನೆ-ಟೀಕೆ-ಆಕ್ರೋಶಗಳಿಗೆ ಆಸ್ಪದವಿಲ್ಲದಂತೆ, ಕುರುಡು ನಿಷ್ಠೆಯಿಂದ ಚಾಚೂತಪ್ಪದೆ ಪಾಲಿಸಬೇಕೆಂಬುದಕ್ಕೆ ಭಾರತವೇನೂ ಏಕ ಚಕ್ರಾಧಿಪತ್ಯದಿಂದ ಕೂಡಿದ ರಾಷ್ಟ್ರವೇನೂ ಅಲ್ಲ ಹಾಗೂ ಮೋದಿಯವರು ದೇಶದ 100% ಜನರ ಮತ ಪಡೆದು ಪ್ರಧಾನಿ ಹುದ್ದೆಗೇರಿದವರೇನೂ ಅಲ್ಲ.

EVM ಹ್ಯಾಕ್ ಮಾಡುವ ಮೂಲಕ ಅಕ್ರಮ ಹಾದಿಯ, ಅನುಮಾನಾಸ್ಪದ ನಡೆಗಳ ಮೂಲಕ ಬಿಜೆಪಿ ಪುನಃ ಕೇಂದ್ರದಲ್ಲಿ ತನ್ನ ಅಧಿಕಾರ ಉಳಿಸಿಕೊಂಡಿದ್ದವು. ಪಾಕಿಸ್ತಾನವೆಂಬ ನೆರೆ ರಾಷ್ಟ್ರವನ್ನು ಪೆಡಂಭೂತವೆಂಬಂತೆ ದೇಶವಾಸಿಗಳಿಗೆ ಬಿಂಬಿಸುವ ಹಾಗೂ ಪುಲ್ವಾಮಾದಲ್ಲಿ ದೇಶದ ವೀರಯೋಧರ ಅನುಮಾನಾಸ್ಪದ ಜೀವತ್ಯಾಗದಂಥ ಭಾವನಾತ್ಮಕ ಅಂಶಗಳಿಂದಲೇ ದೇಶದ ಅತ್ಯುನ್ನತ ಹುದ್ದೆಯನ್ನು ಪುನಃ ಮೋದಿ ತಮ್ಮಲ್ಲೇ ಉಳಿಸಿಕೊಂಡರು.
ಬಿಜೆಪಿಗೂ, ನ್ಯಾಯ-ನೀತಿ-ಸಾತ್ವಿಕ ಹಾದಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಆ ಪಕ್ಷವು ಆಪರೇಷನ್ ಕಮಲ ಎಂಬ ನೀಚ ಹಾದಿಯ ಮುಖೇನ ಕರ್ನಾಟಕ, ಮಧ್ಯಪ್ರದೇಶ, ಗೋವಾ, ಉತ್ತರಾಖಂಡ, ಅರುಣಾಚಲ ಪ್ರದೇಶ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ಅಧಿಕಾರಕ್ಕೇರಿರುವುದೇ ಸಾಕ್ಷಿ.

ಮೋದಿಯವರು ಇಂಥ ವಿಷಯಗಳಿಗಂತೂ ಅತೀವ ಉತ್ಸಾಹದಿಂದ ಮುನ್ನುಗ್ಗುತ್ತಾರೆ. ಸರ್ಕಾರದ ಪರವಾದ ಯಾವುದೇ ನಿರ್ಧರಿತ ಘೋಷಣೆಗಳಲ್ಲೂ ತನ್ನ ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡೇ ಅವರು ಮುನ್ನಡೆಯುತ್ತಾರೆ. ಉದಾಹರಣೆಗೆ; ಜನವರಿ 22ರ ಜನತಾ ಕರ್ಫ್ಯೂ ದಿನದಂದು ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದಿಂದ ಕೂಡಿ ಹಾಕಲ್ಪಟ್ಟಿದ್ದ ಮಧ್ಯಪ್ರದೇಶದ 22 ಮಂದಿ ಕಾಂಗ್ರೆಸ್ ಶಾಸಕರನ್ನು ನವದೆಹಲಿಗೆ ಬರಮಾಡಿಕೊಂಡು ಅವರನ್ನು ಪಕ್ಷದ ಕೇಂದ್ರ ಕಚೇರಿಯಲ್ಲೇ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು. ತದನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಪುನಃ ಅಧಿಕಾರಕ್ಕೇರಲು ಅದು ಪೂರಕವಾಯಿತು. ಹಿಂದಿ ಬಾಹುಳ್ಯದ ದೇಶದ ಪ್ರಮುಖ ರಾಜ್ಯವೊಂದರಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರದ ದಿನವೇ ಪ್ರಧಾನಿಯವರು ದೇಶಕ್ಕೆ 3 ವಾರಗಳ ಲಾಕ್ ಡೌನ್ ನಿರ್ಧಾರ ಜಾರಿಗೊಳಿಸಿದರು.

ಬಿಜೆಪಿಯು ತನ್ನ 40 ಸಂವತ್ಸರಗಳನ್ನು ಪೂರ್ಣಗೊಳಿಸಿದ ದಿನವೇ ಅಂದರೆ ಏಪ್ರಿಲ್ 5ರಂದು ದೇಶವಾಸಿಗಳೆಲ್ಲರೂ ಸಂಭ್ರಮಿಸಬೇಕೆಂಬ ಚಾಣಾಕ್ಷತನದ ಘೋಷಣೆಯನ್ನು ಮೋದಿ ಹೊರಡಿಸಿದರು. ತನ್ಮೂಲಕ ಭಾರತೀಯರು ಮೊಂಬತ್ತಿ, ದೀಪ, ಟಾರ್ಚ್ ಹಿಡಿದು ಐಕ್ಯತೆ ಪ್ರದರ್ಶಿಸಬೇಕೆಂದು ಅವರು ಕರೆ ಕೊಟ್ಟರು. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಸುಲಭವಾಗಿ ಜನರು ಅದನ್ನು ಪಾಲಿಸುವಂತೆ ಅವರು ತನ್ನ ಆಕರ್ಷಕ ವಾಕ್ಚಾತುರ್ಯದಿಂದಲೇ ಜಾಣ್ಮೆ ತೋರ್ಪಡಿಸಿದರು. ಈ ರೀತಿ ಮಾಡಿದರೆ, ಕೊರೋನಾವು ದೇಶದಿಂದಲೇ ಹೆದರಿ ಪಲಾಯನಗೆಯ್ಯುತ್ತದೆ ಎಂಬಷ್ಟರ ಮಟ್ಟಿಗೆ ಮೋದಿಯ ಅಂಧ ಭಕ್ತರು ಮುಗ್ಧ ಜನರನ್ನು ಜ್ಯೋತಿಷ್ಯ ಶಾಸ್ತ್ರ-ಸಂಖ್ಯಾ ಶಾಸ್ತ್ರಗಳನ್ನು ಮುಂದು ಮಾಡಿಕೊಂಡು ನಂಬಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಟ್ವೀಟ್ ಮಾಡಿದಂತೆ, “ಬಿಜೆಪಿ ಪಕ್ಷದ 40ನೇ ವರ್ಷದ ಸಂಸ್ಥಾಪನಾ ದಿನ ಆಚರಿಸಲು ಕೊರೋನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗಪಡಿಸಿಕೊಂಡರೇ? ಜಗತ್ತು ಕೊರೋನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ?….” ಅಂದರೆ, ಬಿಜೆಪಿಗೆ 40 ವರ್ಷ ಪೂರ್ಣಗೊಂಡಂದೇ, ಮೊಂಬತ್ತಿ-ಹಚ್ಚಲು ಪ್ರಧಾನಿ ಸೂಚಿಸಿರುವುದು ಜನರ ಸಂದೇಹಕ್ಕೆ ಪುಷ್ಠಿ ನೀಡಿದೆ. ಇದಕ್ಕೆ ಏಪ್ರಿಲ್ 5ನ್ನೇ ಆಯ್ಕೆ ಮಾಡಿರುವುದರ ಔಚಿತ್ಯವನ್ನು ಹೆಚ್.ಡಿ.ಕೆ. ಪ್ರಶ್ನಿಸಿರುವುದು ಸರಿಯಷ್ಟೆ. ಸಹಜವಾಗಿಯೇ ಆ ಬಗೆಗಿನ ಜನರ ಅನುಮಾನವನ್ನು ಒಬ್ಬ ಹೊಣೆಗಾರಿಕೆಯುಳ್ಳ ರಾಜಕಾರಣಿಯಾಗಿ ಮಾಜಿ ಸಿ.ಎಂ. ವ್ಯಕ್ತಪಡಿಸಿರುವಂಥದ್ದು ಮೆಚ್ಚುಗೆಗೆ ಪಾತ್ರವಾದ ಅಂಶ.

[ಬಹುತೇಕ ರಾಜಕಾರಣಿಗಳು ಮೋದಿಯವರ ಈ ಅನುಮಾನಾಸ್ಪದ ನಡೆಯ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸದೆ ಮೌನ ವಹಿಸಿರುವಾಗ, ಕುಮಾರಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಂಥವರು ಪ್ರತಿರೋಧದ ಧ್ವನಿ ಮೊಳಗಿಸಿದ್ದು ಪ್ರಶಂಸಾರ್ಹವಾದುದು. ಸರ್ಕಾರದ ಯಾವುದೇ ಲೋಪವನ್ನು ಅಥವಾ ಅನುಮಾನಾಸ್ಪದ ನಡೆಗಳನ್ನು ಪ್ರಶ್ನೆ ಮಾಡುವಂತದ್ದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸುತ್ತದೆ ಹಾಗೂ ಅದು ಪ್ರಜಾತಂತ್ರದ ಮೆರುಗು ಹಾಗೂ ಸೊಬಗಿನ ಸಂಕೇತವೂ ಆಗಿದೆ. ಸರ್ಕಾರದ ನಡೆಯ ಬಗ್ಗೆ ಯಾರೂ ಪ್ರಶ್ನೆ ಮಾಡದ ಅಪಾಯಕಾರಿ ಪರಿಸ್ಥಿತಿಯು ಏಕ ಚಕ್ರಾಧಿಪತ್ಯದಿಂದ ಕೂಡಿದ ಆಳ್ವಿಕೆಯ ಲಕ್ಷಣವಾಗಿರುತ್ತದೆ.]

ಲಾಕ್‌ಡೌನ್ ಹೇರಲಾಗಿರುವ ಈ ಸಂದರ್ಭದಲ್ಲಿ ನೇರವಾಗಿ ಬಿಜೆಪಿಯ ಸ್ಮರಣಾರ್ಹ ದಿನಾಚರಣೆಯನ್ನು ಸಂಭ್ರಮಿಸಲು ಸೂಚಿಸಲಾಗದೆ, ಪರೋಕ್ಷವಾಗಿ ಇಂಥ ಕಾರ್ಯತಂತ್ರವನ್ನು ಸಂಘಪರಿವಾರದ ನಿರ್ದೇಶನದಂತೆ ಹೆಣೆದಿರುವುದು ಹಾಗೂ ಅದನ್ನು ಮೋದಿಯವರು ಘೋಷಿಸಿರುವುದು ಗೋಚರಗೊಳ್ಳುತಿದ್ದು, ಇದು ಪ್ರಶ್ನಾರ್ಹವಾಗಿದೆ.

ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುವಂಥ ಬಿಜೆಪಿಯೇತರ ಜಾತ್ಯತೀತ ಪಕ್ಷಗಳ ಮುಖಂಡರು, ಕಾರ್ಯಕರ್ತರೂ ಈ ದಿಸೆಯಲ್ಲಿ ತಂತಮ್ಮ ಸ್ಪಂದನಾ ಮನೋಭಾವ ತೋರ್ಪಡಿಸುವಷ್ಟರ ಮಟ್ಟಿಗೆ ಮೋದಿ ಹಾಗೂ ಪರಿವಾರವು ಭಾರತೀಯರನ್ನು ತೀವ್ರವಾದ ಭಾವವೇಶದೊಡನೆ ಮರುಳುಗೊಳಿಸುತ್ತದೆ. ಇದರಿಂದಾಗಿಯೇ ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಯೋಜಿಸಲಾಗುವ ನಿಗೂಢ ತಂತ್ರ-ಕುತಂತ್ರಗಳ ಹಿನ್ನೆಲೆಗಳನ್ನು ಕೆದಕದೆ ಅಮಾಯಕರಾಗುಳಿಯುವ ಬಹುತೇಕ ದೇಶವಾಸಿಗಳು ರಾಷ್ಟ್ರೋದ್ದಾರಕ್ಕೆ ತಮ್ಮದೂ ಒಂದು ಅಳಿಲು ಕಾಣಿಕೆಯಿರಲಿ ಎಂಬಂತೆ ಕೋಮುವಾದಿಗಳ ಗುಪ್ತ ಕಾರ್ಯಸೂಚಿಗಳನ್ನು ಮೂಢರಾಗಿ ಆಚರಣೆಗೊಳಿಸುತ್ತಿದ್ದಾರೆ.

ಪ್ರಸ್ತುತ ಆಧುನಿಕ ದಿನಗಳಲ್ಲಿ ಜಗತ್ತು ವೈಜ್ಞಾನಿಕ ರೀತಿಯಲ್ಲಿ ನಾಗಾಲೋಟದಿಂದ ಮುಂದುವರಿಯುತ್ತಿದ್ದು, ಭಾರತವೂ ಆ ದಿಸೆಯಲ್ಲಿ ತನ್ನ ಪಥ ಸವೆಸುತ್ತಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂಬ ಧ್ಯೇಯ ವಾಕ್ಯದೊಂದಿಗೆ ಮುಂದೆಯೂ ನಮ್ಮ ದೇಶ ಸಾಗಬೇಕಿದೆ.ಆದರೆ ದುರದೃಷ್ಟಕರವೆಂಬಂತೆ, ಕೊರೋನಾದಂಥ ಸಾಂಕ್ರಾಮಿಕ ವ್ಯಾಧಿಯನ್ನು ಜನರಿಂದ ಮುಕ್ತಗೊಳಿಸಲು ಔಷಧಿಗಳನ್ನು ಅನ್ವೇಷಣೆಗೆಯ್ಯುವ ದಿಸೆಯಲ್ಲಿ ವಿಜ್ಞಾನಿಗಳು-ವೈದ್ಯಕೀಯ ಸಂಶೋಧಕರುಗಳಿಗೆ ಪ್ರೋತ್ಸಾಹ-ಉತ್ತೇಜನ ನೀಡುವ ಮೂಲಕ ಅಂಥವರ ಪ್ರಮಾಣವನ್ನು ವೃದ್ಧಿಗೊಳಿಸುವತ್ತ ಕೇಂದ್ರ ಸರ್ಕಾರ ಯಾವತ್ತೂ ಚಿಂತಿಸಿರಲಿಕ್ಕಿಲ್ಲ.

ಅದರ ಬದಲು ಪ್ರತಿಮೆ-ಮಂದಿರಗಳ ನಿರ್ಮಾಣ, ಜನರನ್ನು ಕೋಮು ಆಧಾರಿತವಾಗಿ ವಿಭಜಿಸುವಂಥ ಕಾರ್ಯಕ್ರಮಗಳಲ್ಲೇ ಮೋದಿ ಸರ್ಕಾರವು ಮಗ್ನವಾದುದರ ದುಷ್ಪರಿಣಾಮವಾಗಿ ಈಗ ಕೊರೋನಾದಂಥ ಅಗ್ನಿಪರೀಕ್ಷೆಗಳನ್ನು ಅಸಹಾಯಕರಾಗಿಯೇ ನಾವು ಅನುಭವಿಸುವಂತಾಗಿದೆ. ಆ ಮೂಲಕ ಭಾರತ ಚಿಂತಾಜನಕ ಸ್ಥಿತಿಯಲ್ಲಿ ವಿಲವಿಲನೆ ಒದ್ದಾಡಿ ನರಳುವಂತಾಗಿದೆ. ಪರಿಹಾರ ಹಾದಿ ಕಾಣದಿದ್ದಾಗ ಮೋದಿಯವರು ಜನರಿಗೆ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ಮೊಂಬತ್ತಿ ಬೆಳಗಿಸಿ ಎಂಬಂತೆಲ್ಲಾ ಮೌಢ್ಯತೆಯತ್ತ ಸಾಗಲು ಕರೆ ನೀಡುತ್ತಾರೆ.

ಅವೈಜ್ಞಾನಿಕ, ಅವೈಚಾರಿಕತೆಗಳಲ್ಲಿ ತುಸು ಹೆಚ್ಚೇ ಉತ್ಸಾಹದಿಂದ ಸ್ಪಂದಿಸುವ ಜನರಂತೂ ಈ ದಿಸೆಯಲ್ಲಿ ‘ನಾ ಮುಂದು, ತಾ ಮುಂದು’ ಎಂಬಂತೆ ಕುರುಡು ಭಕ್ತಿ ತೋರ್ಪಡಿಸುತ್ತಾರೆ. ಇನ್ನು ಸಂಕುಚಿತ ಮಾಧ್ಯಮಗಳಂತೂ ತಾವುಗಳು ಮತಾಂಧ ಆಡಳಿತಗಾರರ ಎಂಜಲಿಗೆ ಆಸೆಪಡುವ ಬೀದಿ ನಾಯಿಗಳು ಹಾಗೂ ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಂಗಡಿಸಲೆತ್ನಿಸುವ ಹಿಂದೂ ಭಯೋತ್ಪಾದಕರ ವಕ್ತಾರರು ಎಂಬುದನ್ನಂತೂ ನಾಚಿಕೆಯ ಲವಲೇಶವೂ ಇಲ್ಲದವರಂತೆ ಸದಾ ನಿರೂಪಿಸುತ್ತಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಂತೂ ಮೆದುಳಿಲ್ಲದ ಶರೀರದಂತೆ ದುರ್ಬಲಗೊಂಡಿದೆ ಹಾಗೂ ಕೋಮುವಾದಿಗಳಿಂದ ಅಧಿಕಾರದ ಆಮಿಷಕ್ಕೊಳಗಾಗಿ ಅಥವಾ ಬೆದರಿಕೆಗಳಿಗೆ ಅಂಜಿ ತೀರ್ಪು ನೀಡುತ್ತಿದೆ.

ಹೀಗೆ ದೇಶದ ಪರಿಸ್ಥಿತಿಯು ಹಿಂದಿಗಿಂತ ಹೆಚ್ಚು ಶೋಚನೀಯ ಪರಿಸ್ಥಿತಿಗೆ ಒಳಪಡಲು ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರ ಕಾರಣವಾಗಿದೆ. ಜನರು ಹಾಗೂ ಆಡಳಿತಗಾರರು ಹೀಗೆಯೇ ಪ್ರಾಚೀನ-ಮಧ್ಯಕಾಲೀನ ನಾಗರಿಕರಂತೆ ಅನೀತಿ-ಮೌಢ್ಯತನಗಳಲ್ಲೇ ಮಿಂದೇಳುವುದು ವೈದ್ಯಕೀಯ-ವೈಜ್ಞಾನಿಕವಾಗಿ ಮುಂದುವರೆದಿರುವ ರಾಷ್ಟ್ರಕ್ಕೆ ಗೌರವ ತರುವಂಥ ಸಂಗತಿಯಲ್ಲ. ಯಾವುದೇ ಸಂಕಷ್ಟ-ವಿಪತ್ತುಗಳ ಸವಾಲು ಎದುರಾದಾಗ ಅದನ್ನು ದಿಟ್ಟವಾಗಿ ನಿಭಾಯಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ, ದೇಶ ಲಾಕ್‌ಡೌನ್ ನಂಥ ಅಸಹಾಯಕ ಪರಿಸ್ಥಿತಿ ಎದುರಿಸಬೇಕಿರಲಿಲ್ಲ.

ನೋಟ್ ಬ್ಯಾನ್, ಜಿಎಸ್ಟಿ, ಪೌರತ್ವ ಕಾಯ್ದೆಗಳ ವಿಚಾರದಲ್ಲಿ ದುಡುಕಿದಂತೆ ಕೇಂದ್ರ ಸರ್ಕಾರವು ಕೊರೋನಾ ದಂಥ ಸಾಂಕ್ರಾಮಿಕ ವ್ಯಾಧಿಯನ್ನು ಹೇಗೆ ಎದುರಿಸಬೇಕು ಎಂದರಿಯದೆ, ಅವೈಚಾರಿಕ-ಅವೈಜ್ಞಾನಿಕಗಳಂಥ ಅಧಃಪತನದ ಹಾದಿಯ ಮೂಲಕ ಮರುಳುಗೊಳಿಸಿ ಜನರನ್ನು ಅಂಧಕಾರದತ್ತ ಸಾಗಲು ಪ್ರೇರೇಪಿಸುತ್ತಿದೆ. ಅದರ ಹೊರತಾಗಿ ಇಂಥ ಸಂದರ್ಭದಲ್ಲಿ ಜನರು ಅದೆಷ್ಟು ಬಳಲಿದ್ದಾರೆ ಎಂಬ ಬಗ್ಗೆ ಚಿಂತಿಸಿ, ಅಗತ್ಯ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದೆ ಹಾಗೂ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂಬಂತೆ ದಿವಾಳಿತನ ಪ್ರದರ್ಶಿಸುತ್ತಿದೆ. ತನ್ಮೂಲಕ ಮೋದಿ ಹಾಗೂ ಬಿಜೆಪಿಯು ಮಾಡಿದ್ದುಣ್ಣೋ ಮಹಾರಾಯ ಎಂಬಂತೆ, ತಾನೂ ಸಮಸ್ಯೆಗೆ ಸಿಲುಕಿ, ಭಾರತೀಯರೆಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.

ಪ್ರತಿಮೆ ನಿರ್ಮಾಣ, ಆಪರೇಷನ್ ಕಮಲದಂಥ ಅನವಶ್ಯಕ ಕಾರ್ಯಚಟುವಟಿಕೆಗಳಿಗೆ ದೇಶದ ಖಜಾನೆಯನ್ನು ಬಿಜೆಪಿ ವ್ಯರ್ಥಗೊಳಿಸಿದ ಕಾರಣದಿಂದಾಗಿ ಭಾರತದಲ್ಲಿ ಪ್ರಧಾನಿ-ಮುಖ್ಯಮಂತ್ರಿಗಳು ಕೂಡ ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಬಡಜನರಿಗೆ ಆರ್ಥಿಕ ಸಹಕಾರ ನೀಡುವ ಬದಲಾಗಿ, ತಾವೇ ಭಿಕ್ಷೆ ಯಾಚಿಸುವಂಥ ವಿಷಮ ಪರಿಸ್ಥಿತಿ ತಲೆದೋರಿರುವುದು.

ಮಾಜಿ ಲೋಕಾಯುಕ್ತರಾದ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಅವರು ಹೇಳುವ ಹಾಗೆ, “ಪ್ರಜೆಗಳು ಪ್ರಜ್ಞಾವಂತರಾಗದಿದ್ದರೆ, ಆಳುವವನು ಪ್ರಜೆಗಳನ್ನು ಮತ್ತೆ ಮತ್ತೆ ಮೂರ್ಖರನ್ನಾಗಿ ಮಾಡುತ್ತಲೇ ಇರುತ್ತಾನೆ”. ಅವರು ಊಹಿಸಿದ ಹಾಗೆ ಯಥಾ ರಾಜ, ತಥಾ ಪ್ರಜೆ ಎಂಬಂತಾಗಿದೆ ಭಾರತದ ಈಗಿನ ಸ್ಥಿತಿ. ಇಂಥ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣದಿದ್ದರೆ, ಭಾರತೀಯರು ಮೌಢ್ಯತೆ-ಅಜ್ಞಾನಗಳ ಮೂಲಕ ಅಂಧಕಾರದತ್ತ ಹಾಗೂ ಭಾರತವು ಅಧಃಪತನದ ವಕ್ರ ಹೆಜ್ಜೆಯಲ್ಲಿ ಸಾಗುವ ಅಪಾಯವನ್ನು ತಮ್ಮ ಮೈಮೇಲೆ ಎಳೆದುಕೊಳ್ಳಬೇಕಾದ ದುರವಸ್ಥೆ ತಲೆದೋರಬಹುದು ಹುಷಾರ್. ಹಾಗಾಗದಿರಲಿ ಎಂದು ನಾವೆಲ್ಲರೂ ಆಶಿಸೋಣ.

✍️ ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ

(ಪ್ರಧಾನ ಸಂಪಾದಕರು, ಮಾರ್ದನಿ ಸಾಮಾಜಿಕ ಧ್ವನಿ ಮ್ಯಾಗಝಿನ್, ಸೆಸ್ಮಾ ರಾಜ್ಯ ಮುಖ್ಯ ಕಾರ್ಯದರ್ಶಿ & ಎಮ್ಮೆಸ್ಸೆಸ್ ಸೌತ್ ಇಂಡಿಯಾ ಮಂಡಳಿ ಮಹಾ ಪ್ರಧಾನ ಕಾರ್ಯದರ್ಶಿ)

error: Content is protected !! Not allowed copy content from janadhvani.com