janadhvani

Kannada Online News Paper

ಕೊರೋನಾ: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಪೋಸ್ಟ್- ಕ್ರಮ ಕೈಗೊಳ್ಳುವಂತೆ ಪಿಎಫ್ಐ ಆಗ್ರಹ

ಪುತ್ತೂರು:- ಕೊರೋನಾ ವೈರಸ್ ಗೆ ಇಡೀ ಜಗತ್ತೇ ನಡುಗಿ ಹೋಗಿ ಸಾವಿರಾರು ಜೀವಹಾನಿಯಾಗಿ ಲಕ್ಷಾಂತರ ಮಂದಿ ಸೋಂಕು ಪೀಡಿತರಾಗಿ ಜೀವನ್ಮರಣ ಹೋರಾಟದಲ್ಲಿ ಇದ್ದಾರೆ,ಇದಕ್ಕೆ ನಮ್ಮ ದೇಶವು ಹೊರತಾಗಿಲ್ಲ,ಕೇಂದ್ರ ಸರ್ಕಾರ ವಿಧಿಸಿದ ಲಾಕ್ ಡೌನ್ ಗೆ ಮುಸ್ಲಿಂ ಸಮುದಾಯವು ಸೇರಿದಂತೆ ಎಲ್ಲರೂ ದೇಶದ ಹಿತಾಸಕ್ತಿಗೋಸ್ಕರ ಒಪ್ಪಿಕೊಂಡು ಮನೆಯಲ್ಲಿ ಇದ್ದಾರೆ ಹಾಗೂ ಮುಸ್ಲಿಂ ನಾಯಕರು,ಸಂಘ ಸಂಸ್ಥೆಗಳು ಕೂಡ ಇದಕ್ಕೆ ಪೂರಕವಾಗಿ ಸಂದೇಶಗಳನ್ನು ನೀಡ್ತಾ ಇದ್ದಾರೆ.

ಈ ಮಹಾಮಾರಿ ವೈರಸ್ ನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿಗಳನ್ನು ಬಂದ್ ಮಾಡಿದ್ದು ಮಾತ್ರವಲ್ಲದೇ ಶುಕ್ರವಾರದ ಜುಮಾಃ ನಮಾಝ್ ನ್ನು ಕೂಡ ರದ್ದು ಗೊಳಿಸುವಂತೆ ಉಲಮಾಗಳು ಫತ್ವಾ ಜಾರಿಮಾಡಿದ್ದಾರೆ.ಇಷ್ಟೆಲ್ಲಾ ರೀತಿಯಲ್ಲಿ ಮುಸ್ಲಿಂ ಸಮುದಾಯವು ಸಹಕರಿಸುತ್ತಿರುವಾಗ ಹಲವು ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಂ ಸಮುದಾಯದ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂಬಂತಹ ರೀತಿಯಲ್ಲಿ ಕೋಮು ಪ್ರಚೋದನಕಾರಿಯಾದ ಸಂದೇಶಗಳನ್ನು ಹಾಕುತ್ತಿರುವಂತಹ ಹಲವಾರು ಪ್ರಕರಣಗಳು ನಡೆಯುತ್ತಲೇ ಇದೆ.ಆ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕೆಡವಲು ಉದ್ದೇಶಪೂರ್ವಕವಾಗಿ ಪ್ರಯತ್ನ ನಡೆಸುತ್ತಾ ಇದ್ದಾರೆ.

ಪುತ್ತೂರು ತಾಲೂಕಿನಲ್ಲಿ ಕೂಡ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.
ಕೆಲವು ಪ್ರಕರಣಗಳಲ್ಲಿ ಪೋಲಿಸರು ಕೇಸ್ ದಾಖಲು ಮಾಡಿದರು ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಇಂತಹ ಅಶಾಂತಿ ಸ್ರಷ್ಟಿಸುವ ಕ್ರತ್ಯಗಳು ಪುನರಾವರ್ತನೆ ಆಗುತ್ತಲೇ ಇದೆ.ಆದ್ದರಿಂದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಇಂತಹ ಸಮಾಜಘಾತುಕರ ವಿರುದ್ಧ ಸ್ವಯಂ ಪ್ರೇರಿತರಾಗಿ ಸೈಬರ್ ಕ್ರೈಮ್ ಕಾಯ್ದೆಯಡಿ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿಸಬೇಕು.

ಹಾಗೂ ಪ್ರಸ್ತುತ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಆನ್ಲೈನ್ ಮುಖಾಂತರ ಕೇಸ್ ಮಾಡಿ ಸ್ವೀಕರಿಸುವಂತಹ ಅವಕಾಶ ಮಾಡುವ ವ್ಯವಸ್ಥೆಯನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವವರಿಗೆ ಮುನ್ನೆಚ್ಚರಿಕೆ ನೀಡಬೇಕೆಂದು ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷ ಜಾಬಿರ್ ಅರಿಯಡ್ಕ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com