janadhvani

Kannada Online News Paper

ವಿಶ್ವಾದ್ಯಂತ 3 ಸಾವಿರ ಮಂದಿ ಕೊರೋನಾ ವೈರಸ್ ನಲ್ಲಿ ಮೃತ್ಯು

ನವದೆಹಲಿ: ವಿಶ್ವಾದ್ಯಂತ 3,123 ಮಂದಿಯನ್ನು ಮಾರಕ ಕೊರೊನಾ ವೈರಸ್​ ತನ್ನ ಮೃತ್ಯುಕೂಪಕ್ಕೆ ಸೆಳೆದುಕೊಂಡಿದ್ದು, ಸೋಂಕು ತಗುಲಿದವರ ಸಂಖ್ಯೆ 90 ಸಾವಿರ ಗಡಿಯನ್ನು ದಾತ್ತಿದೆ.

ಚೀನಾದಲ್ಲಿ ಸ್ಫೋಟಗೊಂಡ ದಿನದಿಂದ ಮರಣ ಮೃದಂಗ ಮುಂದುವರಿಸಿರುವ ಕೊರೊನಾ ವೈರಸ್​ ಚೀನಾದಲ್ಲೇ 2,981 ಮಂದಿಯನ್ನು ಬಲಿ ಪಡೆದುಕೊಂಡಿದೆ. ಹೊಸದಾಗಿ 38 ಸಾವಿನ ಪ್ರಕರಣಗಳು ಬುಧವಾರ ವರದಿಯಾಗಿದೆ. ಒಟ್ಟು 80,270 ಮಂದಿಗೆ ಸೋಂಕು ಇರುವುದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಮಾಹಿತಿ ನೀಡಿದೆ. ಇನ್ನು ವಿಶ್ವಾದ್ಯಂತ 3123 ಸಾವಾಗಿದ್ದು, 91,783 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

ಮಂಗಳವಾರ ಹೊಸದಾಗಿ ಚೀನಾದಲ್ಲಿ 119 ಮಂದಿಗೆ ಸೋಂಕು ತಗುಲಿದೆ. ವೈರಸ್​ ಮೊದಲಿಗೆ ಸ್ಫೋಟಗೊಂಡ ಹುಬೇ ಪ್ರಾಂತ್ಯದ ವುಹಾನ್​ನಲ್ಲೇ 115 ಪ್ರಕರಣಗಳು ಕಂಡುಬಂದಿದ್ದು, ಹುಬೇ ಹೊರತುಪಡಿಸಿ ಹೊರಭಾಗದಲ್ಲಿ ಕೇವಲ 4 ಪ್ರಕರಣಗಳು ಪತ್ತೆಯಾಗಿದೆ. ಉಳಿದ ಭಾಗಗಳಲ್ಲಿ ವೈರಸ್​ ತಗುಲಿದವರ ಸಂಖ್ಯೆ ಕ್ಷೀಣಿಸಿದೆ ಎಂದು ಎನ್​ಎಚ್​ಸಿ ಹೇಳಿದೆ.

ಹೊಸದಾಗಿ ಪತ್ತೆಯಾಗಿರುವ 38 ಸಾವಿನ ಪ್ರಕರಣಗಳಲ್ಲಿ 37 ಪ್ರಕರಣಗಳು ಹುಬೇ ಒಂದರಲ್ಲಿ ವರದಿಯಾಗಿದೆ. ಮತ್ತೊಂದು ಸಾವಿನ ಪ್ರಕರಣ ಚೀನಾದ ಸ್ವಾಯತ್ತ ವಲಯ ಮಂಗೊಲಿಯಾ ವರದಿಯಾಗಿದೆ ಎಂದು ಎನ್​ಎಚ್​ಸಿ ತಿಳಿಸಿದೆ. ಇದಲ್ಲದೆ, ಮಂಗಳವಾರ 143 ನೂತನ ಶಂಕಿತ ಪ್ರಕರಣ ವರದಿಯಾಗಿದೆ. ಒಟ್ಟಾರೆ ದೇಶದಲ್ಲಿ 520 ಶಂಕಿತ ಪ್ರಕರಣಗಳಿವೆ ಎಂದು ಎನ್​ಎಚ್​ಸಿ ಮಾಹಿತಿ ನೀಡಿದೆ.

ಮಂಗಳವಾರ ತುಂಬಾ ಗಂಭೀರವಾದ ಕೊರೊನಾ ವೈರಸ್​ ಪ್ರಕರಣ 6,416 ರಿಂದ 390ಕ್ಕೆ ಕುಸಿದೆ. ಅದರಲ್ಲಿ 2,652 ಮಂದಿ ಗುಣಮುಖವಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಒಟ್ಟು 27,433 ಮಂದಿ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 49,856 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಚೀನಾ ಹೊರತು ಪಡಿಸಿ ಮಂಗಳವಾರ ಅಂತ್ಯದ ವೇಳೆಗೆ ಎರಡು ಸಾವಿನ ಪ್ರಕರಣ ಸೇರಿ 100 ಕೊರೊನಾ ಸೋಂಕು ಪ್ರಕರಣ ಹಾಂಕಾಂಗ್​ನಲ್ಲಿ ವರದಿಯಾಗಿದೆ. ಮಕಾವೋ ಸಾರ್​​ದಲ್ಲಿ 10 ಹಾಗೂ ತೈವಾನ್​ನಲ್ಲಿ ಒಂದು ಸಾವು ಸೇರಿ 42 ಪ್ರಕರಣ ಪತ್ತೆಯಾಗಿದೆ.

ದಕ್ಷಿಣ ಕೊರಿಯಾದಲ್ಲಿ 142 ಹೊಸ ಪ್ರಕರಣಗಳು ಸೇರಿ ಒಟ್ಟು 5,328 ಸೋಂಕು ಪ್ರಕರಣ ವರದಿಯಾಗಿದೆ. ವೈರಸ್​ನಿಂದ 32 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ರಾಜಸ್ಥಾನದಲ್ಲಿರುವ ಇಟಲಿ ದಂಪತಿ ಸೇರಿ 6 ಮಂದಿಗೆ ವೈರಸ್​ ತಗುಲಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆ 79ಕ್ಕೇರಿದ್ದು, 2502 ಮಂದಿಗೆ ಸೋಂಕು ತಗುಲಿದೆ. ಇರಾನ್​ನಲ್ಲಿ 77 ಮಂದಿ ಮೃತರಾಗಿದ್ದು, 2,336 ಮಂದಿಗೆ ಸೋಂಕಿದೆ. ಜಪಾನ್​ನಲ್ಲಿ 12 ಸಾವಿನೊಂದಿಗೆ 1000 ಮಂದಿಗೆ ವೈರಸ್​ ತಗುಲಿದೆ.

ಅಮೆರಿಕದಲ್ಲಿ ಏಳು ಮಂದಿ ಮೃತಪಟ್ಟಿದ್ದು, 100 ಮಂದಿಗೆ ವೈರಸ್​ ತಗುಲಿದೆ. ಯುಕೆಯಲ್ಲಿ 39 ಮಂದಿಗೆ ಸೋಂಕಿದೆ. ಫ್ರಾನ್ಸ್​ನಲ್ಲಿ 21 ಹೊಸ ಪ್ರಕರಣ ಸೇರಿ 212 ಮಂದಿಗೆ ಕೊರೊನಾ ವೈರಸ್​ ಸೋಂಕಿದ್ದು, 4 ಮಂದಿ ಸಾವಿಗೀಡಾಗಿದ್ದಾರೆ.

error: Content is protected !! Not allowed copy content from janadhvani.com