janadhvani

Kannada Online News Paper

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಗಗನಕ್ಕೇರಿದ ಚಿನ್ನದ ಬೆಲೆ

ಬೆಂಗಳೂರು: ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆಯು ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವಂತೆ ಮಾಡಿದೆ. ಡಾಲರ್‌ ಎದುರು ರೂಪಾಯಿ 73.50ರಲ್ಲಿ ವಹಿವಾಟು ನಡೆದಿದೆ. ಬುಧವಾರ ಎಂಸಿಎಕ್ಸ್‌ನಲ್ಲಿ ಗೋಲ್ಡ್‌ ಫ್ಯೂಚರ್ಸ್‌ 10 ಗ್ರಾಂ ದರ ಶೇ 0.5ರಷ್ಟು (ರೂ.213) ಏರಿಕೆಯೊಂದಿಗೆ 43,687 ರೂ. ಮುಟ್ಟಿತು. ಕೊರೊನಾ ಭೀತಿಯಿಂದ ಷೇರುಪೇಟೆ ಸೂಚ್ಯಂಕ ಇಳಿಕೆಯಾಗುತ್ತಿದ್ದರೆ, ಚಿನ್ನದ ಬೆಲೆ ಗಗನಕ್ಕೇರಿದೆ.

ಕಳೆದ ವಹಿವಾಟಿನಲ್ಲಿ 10 ಗ್ರಾಂ ಗೋಲ್ಡ್‌ ಫ್ಯೂಚರ್‌ ಶೇ 3.6 (1,544) ಹೆಚ್ಚಳವಾಗಿತ್ತು. ಬೆಳ್ಳಿ (ಸಿಲ್ವರ್‌ ಫ್ಯೂಚರ್ಸ್‌) ಸಹ ಪ್ರತಿ ಕೆ.ಜಿಗೆ ಶೇ 1ರಷ್ಟು ಏರಿಕೆಯೊಂದಿಗೆ 46,798 ತಲುಪಿದೆ. ಹಿಂದಿನ ವಹಿವಾಟಿನಲ್ಲೂ ಬೆಳ್ಳಿ ಶೇ 3ರಷ್ಟು (1,295) ಏರಿಕಯಾಗಿತ್ತು. ಭಾರತ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಗ್ರಾಹಕರಿಗೆ ಚಿನ್ನ ಖರೀದಿ ಮೇಲೆ ತೆರಿಗೆಯ ಹೊರೆ ಬೀಳುತ್ತದೆ. ಶೇ 12.5ರಷ್ಟು ಆಮದು ಸುಂಕ ಮತ್ತು ಶೇ 3ರಷ್ಟು ಜಿಎಸ್‌ಟಿ ಸೇರುತ್ತದೆ. ಪ್ರಸ್ತುತ ದೇಶದಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 43,788 ಆಗಿದೆ.

ಸರ್ಕಾರದ ಈ ಬಾರಿಯ ‘ಗೋಲ್ಡ್‌ ಬಾಂಡ್‌’ ಪಡೆಯಲು ಅರ್ಜಿ ಸಲ್ಲಿಕೆಗೆ ಮಾರ್ಚ್‌ 6 ಕೊನೆಯ ದಿನವಾಗಿದೆ. ಪ್ರತಿ ಗ್ರಾಂ ಚಿನ್ನಕ್ಕೆ 4,260 ನಿಗದಿ ಪಡಿಸಲಾಗಿದ್ದು, ಆನ್‌ಲೈನ್‌ ಪಾವತಿ ಮೂಲಕ ಬಾಂಡ್‌ ಪಡೆಯುವವರಿಗೆ ಪ್ರತಿ ಗ್ರಾಂಗೆ 50ರೂ. ರಿಯಾಯಿತಿ ಸಿಗಲಿದೆ.

error: Content is protected !! Not allowed copy content from janadhvani.com