janadhvani

Kannada Online News Paper

ಕೊರೋನ ವೈರಸ್: ಸುರಕ್ಷತೆಯ ದೃಷ್ಟಿಯಿಂದ ಉಮ್ರಾ ಯಾತ್ರಾರ್ಥಿಗಳಿಗೆ ತಾತ್ಕಾಲಿಕ ನಿಷೇಧ

ರಿಯಾದ್ : ಗಲ್ಫ್ ದೇಶಗಳಲ್ಲಿ ಕೊರೋನ ವೈರಸ್ ಹರಡುತ್ತಿದ್ದು, ಸೌದಿಯಲ್ಲಿ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಉಮ್ರಾ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ತಾತ್ಕಾಲಿಕ ನಿಷೇಧ ಹೇರಿದೆ. ಮದೀನಾದ ಮಸ್ಜಿದುಲ್ ಹರಾಮ್ ಹಾಗೂ ರೌಳಾ ಸಂದರ್ಶನ ವನ್ನೂ ನಿಷೇಧಿಸಲಾಗಿದೆ. ಕೊರೋನ ವೈರಸ್ ಹರಡುವ ಸಾಧ್ಯತೆ ಅಧಿಕವಾಗಿರುವ ದೇಶಗಳ ಟೂರಿಸ್ಟ್ ವೀಸಾ ಹೊಂದಿರುವವರಿಗೂ ಪ್ರವೇಶ ನಿರಾಕರಿಸಲಾಗುವುದು.

ಸದ್ಯ ಸೌದಿ ನಾಗರಿಕರಿಗೆ ಹಾಗೂ ಗಲ್ಫ್ ಸಹಕಾರ ಮಂಡಳಿ ರಾಷ್ಟ್ರಗಳ ನಾಗರಿಕರಿಗೆ ಸೌದಿ ಅರೇಬಿಯಾಗೆ ಅಥವಾ ಅಲ್ಲಿಂದ ಹೊರಗೆ ತಮ್ಮ ರಾಷ್ಟ್ರೀಯ ಗುರುತು ಪತ್ರಗಳನ್ನು ಬಳಸಿ ಪ್ರಯಾಣಿಸುವ ಹಾಗಿಲ್ಲ. ಆದರೆ ತಮ್ಮ ಮನೆಗಳಿಗೆ ಹಿಂದಿರುಗ ಬಯಸುವ ಸೌದಿಗಳಿಗೆ ಹಾಗೂ ಸದ್ಯ ಸೌದಿಯಲ್ಲಿರುವ ಹಾಗೂ ತಮ್ಮ ತವರು ದೇಶಗಳಿಗೆ ವಾಪಸ್ ಹೋಗಲಿಚ್ಛಿಸುವ ಗಲ್ಫ್ ಸಹಕಾರ ಮಂಡಳಿ ರಾಷ್ಟ್ರಗಳ ನಾಗರಿಕರಿಗೆ, ಅವರು ತಮ್ಮ ರಾಷ್ಟ್ರೀಯ ಗುರುತು ಕಾರ್ಡ್ ಬಳಸಿ ದೇಶ ಪ್ರವೇಶಿಸಿದ್ದರೆ ಯಾ ಅಲ್ಲಿಂದ ತೆರಳಿದ್ದರೆ ಅವರಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ಸೌದಿ ಅರೇಬಿಯಾಗೆ ಭೇಟಿ ನೀಡುವ ಮುನ್ನ ಪ್ರವಾಸಿಗರು ಬೇರೆ ಯಾವ ದೇಶಗಳಿಗೆ ಭೇಟಿ ನೀಡಿದ್ದಾರೆಂದು ಆರೋಗ್ಯಾಧಿಕಾರಿಗಳು ಪ್ರವೇಶ ಸ್ಥಳಗಳಲ್ಲಿಯೇ ಪರಿಶೀಲಿಸಿ ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಆದರೆ ಈ ಎಲ್ಲಾ ನಿರ್ಬಂಧಗಳು ತಾತ್ಕಾಲಿಕ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ವರ್ಷ ಸುಮಾರು 70 ಲಕ್ಷ ಉಮ್ರಾ ಯಾತ್ರಾರ್ಥಿಗಳು ಸೌದಿ ಅರೇಬಿಯಾಗೆ ಭೇಟಿ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಜಿದ್ದಾ ಮತ್ತು ಮದೀನ ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುತ್ತಾರೆ.

ಬಹ್ರೈನ್ ಹಾಗೂ ಕುವೈತ್‍ನಲ್ಲಿ ಇತ್ತೀಚೆಗೆ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳಲ್ಲಿ ಏಳು ಮಂದಿ ಸೌದಿಗಳಾಗಿದ್ದಾರೆ.

error: Content is protected !! Not allowed copy content from janadhvani.com