janadhvani

Kannada Online News Paper

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ದಿಢೀರ್​​ ವರ್ಗಾವಣೆ- ವ್ಯಾಪಕ ಆಕ್ರೋಶ

ನವದೆಹಲಿ,ಫೆ. 27: ಹಿಂಸಾಚಾರ ಕುರಿತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈ ಕೋರ್ಟ್​ ನ್ಯಾಯಮೂರ್ತಿ ಎಸ್​ ಮುರಳೀಧರ್​ ಅವರ ದಿಢೀರ್​​ ವರ್ಗಾವಣೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಸುಪ್ರೀಂ ಕೋರ್ಟ್​ನ ಈ ಆದೇಶದ ಹಿಂದೆ ಕೇಂದ್ರ ಸರ್ಕಾರದ ಹಸ್ತಕ್ಷೇಪವಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಪ್ರಿಯಾಂಕಾ ನಡುವಿನ ವಾಕ್ಸಮರಕ್ಕೆ ಕೂಡ ಕಾರಣವಾಗಿದೆ.

ನ್ಯಾಯಮೂರ್ತಿ ಎಸ್‌. ಮುರಳೀಧರ್ ಅವರು ದೆಹಲಿಯ ಗಲಭೆಗಳಿಗೆ ಕಾರಣರಾದ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ದಾಖಲಾಗದೆ ಇರುವುದನ್ನು ಕಠಿಣವಾಗಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಎಸ್‌. ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟಿನಿಂದ ಪಂಜಾಬ್ ಹೈಕೋರ್ಟ್ ಗೆ ರಾತ್ರೋ ರಾತ್ರಿ ವರ್ಗಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.ನ್ಯಾಯಮೂರ್ತಿ ಎಸ್‌. ಮುರಳೀಧರ್ ದೆಹಲಿ ಹಿಂಸಾಚಾರದ ಪ್ರಕರಣದ ವಿಚಾರಣೆ ನಡೆಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು.

ದೆಹಲಿಯಲ್ಲಿ 1984ರಂತಹ ಮತ್ತೊಂದು ಪರಿಸ್ಥಿತಿಯನ್ನು ನಗರದಲ್ಲಿ ತನ್ನ ಕಾವಲಿನಲ್ಲಿ ನಡೆಯಲು ಅನುಮತಿಸುವುದಿಲ್ಲ. ನಾವು ಜಾಗರೂಕರಾಗಿರಬೇಕು, ಸಾಕಷ್ಟು ಸಂಖ್ಯೆಯಲ್ಲಿ ಸಹಾಯವಾಣಿ ಸ್ಥಾಪಿಸಬೇಕು, ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಬೇಕು, ದ್ವೇಷಭಾಷಣ ಮಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸುವ ವಿಚಾರದಲ್ಲಿ ಗುರುವಾರ ನಿರ್ಧಾರ ಕೈಗೊಳ್ಳು ವಂತೆ ನ್ಯಾಯಮೂರ್ತಿಗಳಾದ ಎಸ್.ಮುರಳೀಧರ್ ಹಾಗೂ ಎ.ಜೆ.ಭಂಭಾನಿ ಅವರ ಪೀಠವು ಆದೇಶ ನೀಡಿತ್ತು.

ಇದಾದ ಬೆನ್ನಲ್ಲೇ ರಾತ್ರೋರಾತ್ರಿ ರಾಷ್ಟ್ರಪತಿಯವರು ನ್ಯಾಯಮೂರ್ತಿ ಮುರಳೀಧರ್ ಅವರನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ.
ಮುರಳೀಧರ್ ಅವರ ವರ್ಗಾವಣೆಗೆ ಕಾಂಗ್ರೆಸ್ ಟೀಕಿಸಿದ್ದು, ಸಂವಿಧಾನ ರಕ್ಷಿಸಿ, ಭಾರತ ಉಳಿಸಿ, ಜಸ್ಟೀಸ್ ಮುರಳೀಧರ್ ಹ್ಯಾಸ್‌ಟ್ಯಾಗ್ ಆರಂಭಿಸಿ, ಮುರಳೀಧರ್ ಪರವಾಗಿ ಧ್ವನಿ ಎತ್ತಿದೆ.

ಇನ್ನು ಈ ಕುರಿತು ಸ್ಪಷ್ಟೀಕರಣ ನೀಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್,​ ಕಾಂಗ್ರೆಸ್​ ಈ ವಿಚಾರವನ್ನು ಅನಗತ್ಯವಾಗಿ ರಾಜಕೀಯಗೊಳಿಸುತ್ತಿದೆ. ಇದು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಎಂದಿದ್ದಾರೆ.

ಭಾರತದ ಮುಖ್ಯನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂಕೋರ್ಟ್​​ ಕೊಲಿಜಿಯಂ ಒತ್ತಡದಿಂದಾಗಿ ನ್ಯಾ| ಎಸ್. ಮುರಳೀಧರ್​ ಅವರನ್ನು ಫೆ. 12ರಂದು ವರ್ಗಾವಣೆ ಮಾಡಿತ್ತು. ಅವರ ವರ್ಗಾವಣೆ ಪ್ರಕ್ರಿಯೆಯಲ್ಲಿ ನ್ಯಾಯಮೂರ್ತಿಗಳ ಸಲಹೆ ಪಡೆಯಲಾಗಿತ್ತು. ಇದಕ್ಕಾಗಿ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ಈ ಕುರಿತು ಟ್ವೀಟ್​ ಮಾಡಿರುವ ಪ್ರಿಯಾಂಕಾ ಗಾಂಧಿ, ಮುರಳೀಧರ್​ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿರುವುದು ಆಘಾತಕಾರಿ. ಇದೊಂದು ದುಃಖ ಮತ್ತು ಅವಮಾನಕರ ಘಟನೆ. ಲಕ್ಷಾಂತರ ಜನರು ಭಾರತದ ನ್ಯಾಯಾಂಗದ ಮೇಲೆ ನಂಬಿಕೆ ಹೊಂದಿದ್ದಾರೆ. ಆದರೆ ಸರ್ಕಾರ ಇದರಲ್ಲಿ ಮೂಗು ತೂರಿಸುವ ಮೂಲಕ ಅವರ ನಂಬಿಕೆ ನುಚ್ಚುನೂರು ಮಾಡುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

ರಾಹುಲ್​ ಗಾಂಧಿ ಕೂಡ ಈ ವರ್ಗಾವಣೆಯನ್ನು ಖಂಡಿಸಿದ್ದು, ಧೈರ್ಯವಂತ ನ್ಯಾಯಾಧೀಶ ಅವರನ್ನು ನೆನೆಯೋಣ ಎಂದಿದ್ದಾರೆ. ಕಾಂಗ್ರೆಸ್​ ನಾಯಕರ ಈ ಟ್ವೀಟ್​ಗೆ ರವಿಶಂಕರ್​ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್​ ಪಕ್ಷ ಒಂದು ಕುಟುಂಬದ ಖಾಸಗಿ ಆಸ್ತಿ. ಇಂತಹ ಪಕ್ಷದ ನಾಯಕರು ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಬೋಧನೆ ಮಾಡುವ ಹಕ್ಕು ಹೊಂದಿಲ್ಲ. ಕಾಂಗ್ರೆಸ್​ ಕುಟುಂಬ ಮತ್ತು ಆಪ್ತರು ನ್ಯಾಯಾಲಯ, ಸೇನೆ, ಸಿಎಜಿ, ಪ್ರಧಾನಿ ಮತ್ತು ಭಾರತೀಯ ಜನರ ವಿರುದ್ಧ ಖಂಡನಾರ್ಹ ಹೇಳಿಕೆ ಬಳಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ನ್ಯಾ| ಮುರಳೀಧರ್ ಅವರೊಂದಿಗೆ ಇನ್ನಿಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳನ್ನೂ ವರ್ಗಾಯಿಸಲಾಗಿದೆ. ಕರ್ನಾಟಕ ಹೈಕೋರ್ಟ್​ನ ನ್ಯಾ| ರವಿ ವಿಜಯಕುಮಾರ್ ಮಳಿಮಠ ಮತ್ತು ಬಾಂಬೆ ಹೈಕೋರ್ಟ್​ನ ನ್ಯಾ| ರಂಜಿತ್ ಮೋರೆ ಅವರನ್ನು ಉತ್ತರಾಖಂಡ್ ಮತ್ತು ಮೇಘಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.

error: Content is protected !! Not allowed copy content from janadhvani.com