janadhvani

Kannada Online News Paper

ಹಿಂದೂ ಭಯೋತ್ಪಾದನೆ: ಮೋದಿ ಮಾತಿಗೆ ವಿರುದ್ಧ ಮಾತನಾಡಿರುವ ವಯನಾಡಿನ ಎನ್‌ಡಿಎ ಅಭ್ಯರ್ಥಿ

ವಯನಾಡು: ದೇಶದಲ್ಲಿ ಹಿಂದೂ ಭಯೋತ್ಪಾದನೆ ಸೃಷ್ಟಿಯಾಗಿದೆ ಎಂಬ ವಾದ ಹುಟ್ಟು ಹಾಕಿರುವ ಕಾಂಗ್ರೆಸ್‌ಗೆ ಕೇರಳದ ವಯನಾಡು ತಕ್ಕ ಪಾಠ ಕಲಿಸುತ್ತದೆ ಎನ್ನುವ ಮೂಲಕ ರಾಹುಲ್‌ ಗಾಂಧಿ ಅವರ ಎರಡನೇ ಕ್ಷೇತ್ರದ ಸ್ಪರ್ಧೆ ಬಗ್ಗೆ ನರೇಂದ್ರ ಮೋದಿ ಅವರು ಮಾಡಿದ್ದ ಟೀಕೆಗೆ ವ್ಯತಿರಿಕ್ತ ಎನಿಸುವ ಹೇಳಿಕೆಯನ್ನು ವಯನಾಡಿನ ಎನ್‌ಡಿಎ ಅಭ್ಯರ್ಥಿ ತುಷಾರ್‌ ವೆಳ್ಳಾಪಳ್ಳಿ ನೀಡಿದ್ದಾರೆ.

ಮಹಾರಾಷ್ಟ್ರದ ವಾರ್ದಾದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ನರೇಂದ್ರ ಮೋದಿ ಅವರು, ‘ಸಂಜೋತ ಎಕ್ಸ್‌ಪ್ರೆಸ್‌’ ದಾಳಿ ಪ್ರಕರಣದ ತೀರ್ಪನ್ನು  ಮುಂದಿಟ್ಟುಕೊಂಡು ದೇಶದಲ್ಲಿ ಹಿಂದೂ ಭಯೋತ್ಪಾದನೆ ಸೃಷ್ಟಿಯಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ವಯನಾಡನ್ನು ಎರಡನೇ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವ ರಾಹುಲ್‌ ಗಾಂಧಿ ಅವರಿಗೆ ಒಂದು ತಿಳಿದಿರಲಿ… ಹಿಂದೂ ಭಯೋತ್ಪಾದನೆ ಎಂಬ ವಾದ ಹುಟ್ಟುಹಾಕಿದ್ದಕ್ಕಾಗಿ ವಯನಾಡು ನಿಮಗೆ ಪಾಠ ಕಲಿಸಲಿದೆ ಎಂದು ಹೇಳಿದ್ದರು. 

ಆದರೆ, ಮೋದಿ ಮಾತಿಗೆ ವಿರುದ್ಧ ಎನಿಸುವಂತೆ ಮಾತನಾಡಿರುವ ಎನ್‌ಡಿಎ ಮೈತ್ರಿ ಕೂಟದ ಬಿಡಿಜೆಎಸ್‌ ( ಭಾರತ್‌ ಧರ್ಮ ಜನ ಸೇನಾ ) ಪಕ್ಷದ ಅಭ್ಯರ್ಥಿ ತುಷಾರ್‌ ವೆಳ್ಳಾಪಳ್ಳಿ , ‘ದೇಶದಲ್ಲಿ ಕೇರಳ ವಿಭಿನ್ನ ಚಿಂತನೆಯ ರಾಜ್ಯ. ಇಲ್ಲಿ ಧರ್ಮ ರಾಜಕೀಯ ಕೆಲಸ ಮಾಡುವುದಿಲ್ಲ. ಇಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಹಿಂದು, ಮುಸ್ಲಿಂ, ಕ್ರೈಸ್ತರ ಮತಗಳನ್ನು ಪಡೆದೇ ನಾನು ಕೂಡ ಗೆಲ್ಲಬೇಕು. ನಮ್ಮ ಪಕ್ಷ ಬಿಡಿಜೆಎಸ್‌ ಕೂಡ ಹಿಂದುಳಿದವರಿಗಾಗಿ ಹೋರಾಡುತ್ತಿದೆ. ವಯನಾಡು ಕೂಡ ಹಿಂದುಳಿದ ಜಿಲ್ಲೆ,’ ಎಂದು ಅವರು ಹೇಳಿದ್ದಾರೆ.

ವಯನಾಡು ಕ್ಷೇತ್ರದಿಂದ ಮೊದಲಿಗೆ ಬಿಡಿಜೆಎಸ್‌ ಪಕ್ಷದಿಂದ ಪೈಲಿ ವಾತ್ತ್ಯಾಟ್‌ ಎಂಬುವವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾವಾಗ ರಾಹುಲ್‌ ಅವರು ಘೋಷಣೆಯಾದರೋ ಆಗ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬಿಡಿಜೆಎಸ್ ನಾಯಕೊರೊಂದಿಗೆ ಮಾತನಾಡಿ ತುಷಾರ್‌ ವೆಳ್ಳಾಪಳ್ಳಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು.

ತುಷಾರ್‌ ವೆಳ್ಳಾಪಳ್ಳಿ ಅವರು ಶ್ರೀ ನಾರಾಯಣ ಧರ್ಮ ಪರಿಪಾಲಮ್‌ ಯೋಗಮ್‌ ಸಂಸ್ಥೆಯ ಮುಖ್ಯಸ್ಥ
ವೆಳ್ಳಾಪಳ್ಳಿ ನಟೇಶನ್ ಎಂಬುವವರ ಪುತ್ರ. ಕೇರಳದ ಈಳವ ಸಮುದಾಯದವರು. ಈ ಸಮುದಾಯ ಕೇರಳದಾದ್ಯಂತ ಭಾರಿ ಪ್ರಭಾವ ಹೊಂದಿದೆ. ಇದೇ ಕಾರಣಕ್ಕಾಗಿಯೇ ಅವರನ್ನು ವಯನಾಡಿಗೆ ಕರೆತರಲಾಗಿದೆ ಎಂದು ಹೇಳಲಾಗಿದೆ. ತುಷಾರ್‌ ಮೊದಲು ತ್ರಿಶ್ಶೂರ್‌  ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿಯೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದರು. 

error: Content is protected !! Not allowed copy content from janadhvani.com