ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ವಿಮಾನಗಳು ನಿರಂತರವಾಗಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕ ಪನ್ನುನಿಂದ ಹೊಸ ಬೆದರಿಕೆ ಬಂದಿದೆ.
ನವೆಂಬರ್ 1 ರಿಂದ 19 ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಸೋಮವಾರ(ಅ.21) ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಾನೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಸಿಖ್ ಹತ್ಯಾಕಾಂಡದ 40 ನೇ ವಾರ್ಷಿಕದಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಮಾಡಬಹುದು ಎಂದು ಅವನು ಹೇಳಿದ್ದಾನೆ. ಸಿಖ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನು ಕಳೆದ ವರ್ಷ ಕೂಡ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಹಿಂದೆಯೂ ಬೆದರಿಕೆ ಹಾಕಿದ್ದ:
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನುನವೆಂಬರ್ 19 ರಂದು ಮುಚ್ಚಲಾಗುವುದು ಎಂದು ಪನ್ನು ನವೆಂಬರ್ 2023 ರಲ್ಲಿ ಬೆದರಿಕೆ ವಿಡಿಯೋ ಹಾಕಿದ್ದ. ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ.
ಈ ವರ್ಷದ ಆರಂಭದಲ್ಲಿ ಜನವರಿ 26 ರ ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರನ್ನು ಕೊಲ್ಲುವುದಾಗಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದ.
ದೇಶದ್ರೋಹ ಮತ್ತು ಪ್ರತ್ಯೇಕತಾವಾದದ ಆರೋಪದ ಮೇಲೆ ಪನ್ನುವನ್ನು ಭಯೋತ್ಪಾದಕ ಎಂದು ಜುಲೈ 2020ರಲ್ಲಿ ಗೃಹ ಸಚಿವಾಲಯ ಘೋಷಿಸಿತು. ಪನ್ನು ಪ್ರತ್ಯೇಕ ಸಿಖ್ ರಾಜ್ಯವನ್ನು ಪ್ರತಿಪಾದಿಸುವ ಸಿಖ್ ಫಾರ್ ಜಸ್ಟಿಸ್ (SFJ)ಅನ್ನು ಮುನ್ನಡೆಸುತ್ತಿದ್ದಾನೆ. ಇದಕ್ಕೂ ಒಂದು ವರ್ಷದ ಮೊದಲು, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಭಾರತವು ಸಿಖ್ ಫಾರ್ ಜಸ್ಟಿಸ್(SFJ) ಅನ್ನು ಕಾನೂನುಬಾಹಿರ ಸಂಘಟನೆ ಎಂದು ನಿಷೇಧಿಸಿತ್ತು.