janadhvani

Kannada Online News Paper

ಮದುವೆ ಸಮಾರಂಭಕ್ಕೆ ಚಿನ್ನ,ಜವಳಿ ಖರೀದಿಸುವವರು ಗಮನಿಸಿ

ಹುಬ್ಬಳ್ಳಿ,ಏ.3- ಮನೆಯಲ್ಲಿ ಮದುವೆ ಇನ್ನಿತರ ಶುಭ ಸಮಾರಂಭ ಇಟ್ಟುಕೊಂಡಿದ್ದೀರಾ? ಜವಳಿ, ಚಿನ್ನ, ಪಾತ್ರೆ ಖರೀದಿಸಬೇಕೆಂದಿದ್ದೀರಾ? ಹಾಗಾದರೆ ಮಾರುಕಟ್ಟೆಗೆ ತೆರಳುವ ಮುನ್ನ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಗೆ ಹೋಗಿ ವಿಷಯ ತಿಳಿಸಿಬಿಡಿ.

50 ಸಾವಿರ ರೂ.ಗಿಂತ ಹೆಚ್ಚಿನ ನಿಮ್ಮದೇ ಹಣದೊಂದಿಗೆ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದರೂ ಫಜೀತಿ ಅನುಭವಿಸಬೇಕಾಗುತ್ತದೆ. ಇದು ಲೋಕಸಭೆ ಚುನಾವಣೆಯ ನೀತಿ ಸಂಹಿತೆಯ ಬಿಸಿ. ಸಾಗಿಸುವ ಹಣಕ್ಕೆ ಅಗತ್ಯ ದಾಖಲೆ ಇಲ್ಲದಿದ್ದರೆ ಹಣ ಜಪ್ತಿಯಾಗಿ ಶುಭ ಸಮಾರಂಭಗಳ ಮೇಲೆ ದುಷ್ಪರಿಣಾಮ ಬೀರಲಿದೆ.

ಮದುವೆ, ಇತರ ಸಮಾರಂಭಗಳಿಗೆ ಚಿನ್ನ, ಬಟ್ಟೆ ಖರೀದಿಗೆ ಹೋಗುವುದಾದರೆ ಆಯಾ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮಾಹಿತಿ ನೀಡುವುದು ಒಳಿತು. ಇದಕ್ಕೆ ಜಿಲ್ಲಾಡಳಿತ ಅಧಿಕೃತ ಪರವಾನಗಿ ನೀಡದಿದ್ದರೂ ಮದುವೆಗಾಗಿ ಜವಳಿ ಅಥವಾ ಚಿನ್ನ ಖರೀದಿಗೇ ಹಣ ಸಾಗಿಸಲಾಗುತ್ತಿದೆ
ಎಂದು ಖಚಿತಪಡಿಸಿದರೆ ತಲೆಬಿಸಿ ಇರುವುದಿಲ್ಲ. ಜವಳಿ ಖರೀದಿಗೆ ನಗದು ಸಾಗಿಸುವ ಬದಲು ಆನ್‍ಲೈನ್ ಪೇಮೆಂಟ್, ಚೆಕ್ ಅಥವಾ ಆರ್‍ಟಿಜಿಎಸ್ ಮೂಲಕ ಹಣ ಸಂದಾಯ ಮಾಡುವುದು ಸೂಕ್ತ.

ಯಾವುದೇ ಗೊಜಲಿಗೆ ಸಿಲುಕಬಾರದು ಎಂದಾದರೆ ಮದುವೆ ಆಹ್ವಾನ ಪತ್ರಿಕೆ, ತಾವು ವಧು- ವರರ ಸಂಬಂಧಿ ಎಂಬುದನ್ನು ಸಾಬೀತುಪಡಿಸುವ ಫೋಟೊ ಗುರುತಿನ ಚೀಟಿ ಇಟ್ಟುಕೊಳ್ಳುವುದು ಉತ್ತಮ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಸಲಹೆ ನೀಡಿದ್ದಾರೆ.

ಅಭ್ಯರ್ಥಿಗಳು ಪ್ರಚಾರಕ್ಕೆ ಹೋದಾಗ ಮಹಿಳೆಯರು ಸ್ವಾಗತಿಸಿ ಆರತಿ ಮಾಡುವುದು ಸಾಮಾನ್ಯ. ಈ ವೇಳೆ ಆರತಿ ತಟ್ಟೆಗೆ ಹಣ ಹಾಕುವ ಹಾಗಿಲ್ಲ. ಈ ಬಗ್ಗೆ ದೂರು ಬಂದರೆ ಅಭ್ಯರ್ಥಿಯ ಖರ್ಚು- ವೆಚ್ಚದ ಲೆಕ್ಕಕ್ಕೆ ಜಮೆಯಾಗಲಿದೆ.

ಹಣ ಸಾಗಣೆ, ಹಂಚಿಕೆ ತಡೆಗೆ ಜಿಲ್ಲಾಡಳಿತ ವ್ಯಾಪಕ ಕ್ರಮ ಜರುಗಿಸುತ್ತಿದೆ. ನಗರದಿಂದ ಹೊರಹೋಗುವ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಚೆಕ್ ಪೊೀಸ್ಟ್‍ಗಳನ್ನು ತೆರೆದಿದೆ. ನಗರದಿಂದ ಹೊರಹೋಗುವ ಹಾಗೂ ನಗರ ಪ್ರವೇಶಿಸುವ ವಾಹನಗಳ ಮೇಲೆ ಪೊಲೀಸ್ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ದಿನದ 24 ಗಂಟೆಯೂ ವಾಹನಗಳ ಸಂಪೂರ್ಣ ತಪಾಸಣೆ ಮಾಡಿ ಬಿಡಲಾಗುತ್ತಿದೆ.

ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ಕಣ್ಣಿಡಲಿದೆ. ಪ್ರಮುಖವಾಗಿ ಮದುವೆ, ಇತರ ಶುಭ ಸಮಾರಂಭಗಳಲ್ಲಿ ಹಣ, ಚಿನ್ನ, ಸೀರೆ, ಇತರ ಸಾಮಗ್ರಿ ಹಂಚಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.

ಅಭ್ಯರ್ಥಿಗಳು ಶುಭ ಸಮಾರಂಭಗಳಲ್ಲಿ ಪ್ರಚಾರ ಮಾಡಿದರೆ, ಆಶ್ವಾಸನೆ ಕೊಟ್ಟರೆ ಅಥವಾ ನಗದು ರೂಪದಲ್ಲಿ ಕೊಡುಗೆ ನೀಡಿದರೆ ಖರ್ಚು- ವೆಚ್ಚಕ್ಕೆ ಒಳಪಡಲಿದೆ.  ನೀತಿ ಸಂಹಿತೆ ಉಲ್ಲಂಘನೆ ತಡೆದು ನ್ಯಾಯಸಮ್ಮತ ಚುನಾವಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರು ನೀಡಲು ಚುನಾವಣಾ ಆಯೋಗ ಸಿ- ವಿಜಿಲ್ ಆಪ್ ಅಭಿವೃದ್ಧಿಪಡಿಸಿದೆ. ಮೊಬೈಲ್‍ನಲ್ಲಿ ಫೋಟೊ ಅಥವಾ ವಿಡಿಯೋ ಅಪ್‍ಲೋಡ್ ಮಾಡಿದರೆ 100 ನಿಮಿಷದಲ್ಲಿ ಕ್ರಮ ಜರುಗಿಸಲಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಸಿ- ವಿಜಿಪ್ ಆಪ್ ಮೂಲಕ ದೂರು ನೀಡಬೇಕು ಎಂದು ಡಾ. ಬಿ.ಸಿ. ಸತೀಶ್ ಕೋರಿದ್ದಾರೆ.

ಸಾಮೂಹಿಕ ವಿವಾಹಕ್ಕೆ ತಡೆ: ಚುನಾವಣೆ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಆಯೋಜನೆ ಮತದಾರರನ್ನು ಸೆಳೆಯುವ ತಂತ್ರವಾದೀತು. ಹಾಗಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳಿಗೆ ಕಡಿವಾಣ ಹಾಕಲಾಗಿದೆ. ವಿವಾಹ ಆಯೋಜನೆಗೆ ಜಿಲ್ಲಾ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯ.

ಅನುಮತಿ ಕೋರುವ ಆಯೋಜಕರ ಪೂರ್ವಾಪರ, ಎಷ್ಟು ವರ್ಷಗಳಿಂದ ಆಯೋಜಿಸುತ್ತಿದ್ದಾರೆ? ಚುನಾವಣೆಯ ವರ್ಷದಲ್ಲಿ ಮಾತ್ರ ಆಯೋಜಿಸುತ್ತಾರಾ? ಎಂಬ ವಿವರ ಕಲೆ ಹಾಕಲಾಗುತ್ತದೆ. ಸೇವಾ ಮನೋಭಾವನೆಯಿಂದ ಪ್ರತಿವರ್ಷವೂ ಆಯೋಜಿಸುತ್ತಿದ್ದರೂ ಅನುಮತಿ ನೀಡುವುದು ಚುನಾವಣಾಧಿಕಾರಿಯ ವಿವೇಚನೆಗೆ ಬಿಟ್ಟ ವಿಚಾರ.

error: Content is protected !! Not allowed copy content from janadhvani.com