janadhvani

Kannada Online News Paper

‘ನಾನು ಒಂದೆಡೆ ಚೌಕಿದಾರ, ಮತ್ತೊಂದೆಡೆ ಜನಸೇವಕ’- ಮೋದಿ

ಮೀರತ್ (ಉ.ಪ್ರ.), ಮಾ.28- ಭೂಮಿ, ಆಗಸ ಮತ್ತು ಅಂತರಿಕ್ಷ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸರ್ಜಿಕಲ್ ಸ್ಟ್ರೈಕ್ ಮಾಡುವ ದಿಟ್ಟ ಧೈರ್ಯವನ್ನು ತಮ್ಮ ನೇತೃತ್ವದ ಸರ್ಕಾರ ಸಾಬೀತು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಇಂದು ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದ ಅವರು, ನಾನು ಒಂದೆಡೆ ಚೌಕಿದಾರ, ಮತ್ತೊಂದೆಡೆ ಜನರ ಹಿತಾಸಕ್ತಿ ರಕ್ಷಿಸುವ ಜನಸೇವಕ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡರು.

ಈ ಲೋಕಸಭಾ ಚುನಾವಣೆ ಉತ್ತಮ ಸರ್ಕಾರ ಮತ್ತು ಹಿಂದಿನ ದುರಾಡಳಿತ ಆಳ್ವಿಕೆಯ ವಿರುದ್ಧ ನಡೆಯುವ ಸಮರವಾಗಿದೆ ಎಂದ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

ಎನ್‍ಡಿಎ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಏನೆಲ್ಲ ಸಾಧನೆ ಮಾಡಿದೆ ಎಂಬ ಪಟ್ಟಿಯನ್ನು ನಾನು ನೀಡಿ ಅದಕ್ಕೆ ಉತ್ತರದಾಯಿಯಾಗಿರುತ್ತೇನೆ. ಅದೇ ರೀತಿ ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳ ವಿಫಲತೆಯನ್ನು ನಾನು ಜನರ ಮುಂದಿಡುತ್ತೇನೆ ಎಂದು ಮೋದಿ ಹೇಳಿದರು.

ಇದಕ್ಕೂ ಮುನ್ನ ಮಾಜಿ ಪ್ರಧಾನಿ ದಿ.ಚರಣ್‍ಸಿಂಗ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಉತ್ತರ ಪ್ರದೇಶದ ಇನ್ನೂ ಎರಡು ಕಡೆ ಇಂದು ಮೋದಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ.

error: Content is protected !! Not allowed copy content from janadhvani.com