ತುಮಕೂರು, ಮಾ.28- ಸಿಬಿಐ ಹಾಗೂ ಐಟಿ ಸರ್ಕಾರಿ ಸಂಸ್ಥೆಗಳಾಗಿ ಉಳಿದಿಲ್ಲ. ಒಂದು ರೀತಿಯ ಏಜೆನ್ಸಿ ಸಂಸ್ಥೆಗಳಾಗಿವೆ. ಇವು ನಂಬಿಕೆಗೆ ಅರ್ಹವಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ, ಐಟಿ ದಾಳಿ ಹೊಸ ವಿಚಾರವೇನಲ್ಲ.
ಅದೆಲ್ಲ ಹಳಸಿದ ವಿಚಾರ. ಸತತ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋಗುವವರ ಮೇಲೆ ಸಿಬಿಐ, ಐಟಿ ದಾಳಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಸಿಬಿಐ, ಐಟಿ ಬಿಜೆಪಿ ಜತೆ ಅಲಯನ್ಸ್ ಪಾರ್ಟ್‍ನರ್ ರೀತಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ ಅವರು, ಚುನಾವಣೆ ವೇಳೆ ನಡೆದಿರುವ ಈ ದಾಳಿ ದೇಶದ ಇತಿಹಾಸದಲ್ಲೇ ಹೊಸದು ಎಂದರು.ನೀರವ್ ಮೋದಿಯನ್ನಾಗಲಿ, ಲಲಿತ್ ಮೋದಿಯನ್ನಾಗಲಿ ಹಿಡಿಯಲು ಇವರಿಗೆ ಆಗಲಿಲ್ಲ.
ರಾಜಕೀಯ ವಿರೋಧಿಗಳ ಮೇಲೆ ಸೇಡಿನ ದಾಳಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ, ಸೋನಿಯಾಗಾಂಧಿ ಅವರ ಮೇಲೂ ಕೇಸು ದಾಖಲಿಸಿದ್ದಾರೆ, ಹಲವರ ಮೇಲೆ ದಾಳಿ ನಡೆಸಿದ್ದಾರೆ. ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ದಾಸಯ್ಯನ ಜಾಗಟೆಗೆ ಹೆದರುತ್ತಾರಾ ಎಂದು ಐಟಿ ದಾಳಿ ಬಗ್ಗೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಐದು ವರ್ಷಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಅವರೇ ತೀರ್ಮಾನ ಮಾಡುತ್ತಾರೆ ಎಂದರು.
ಕಠಿಣ ಕ್ರಮ: ಮುದ್ದಹನುಮೇಗೌಡರು ಲೋಕಸಭೆ ಸದಸ್ಯರು. ಒಳ್ಳೆ ಅಭ್ಯರ್ಥಿಯಾಗಿದ್ದರು. ಅವರ ಮನವೊಲಿಕೆಗೆ ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್ ಪ್ರಯತ್ನಿಸುತ್ತಿದ್ದಾರೆ. ಅವರು ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಯಾರ್ಯಾರು ಕಾಂಗ್ರೆಸ್‍ಗೆ ರೆಬಲ್ ಆಗಿ ಸ್ಪರ್ಧಿಸಿದ್ದಾರೋ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುತ್ತದೆ.ಒಂದು ವೇಳೆ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆಯದಿದ್ದರೆ ಪಕ್ಷದ ಹೈಕಮಾಂಡ್ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ರಾಹುಲ್‍ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ. ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಮೇಲೆ ಮಹಾಘಟಬಂಧನ್‍ನಲ್ಲಿ ಪ್ರಧಾನಮಂತ್ರಿ ಯಾರು ಎಂಬುದು ನಿರ್ಧಾರವಾಗುತ್ತದೆ ಎಂದು ಅವರು ಹೇಳಿದರು.