janadhvani

Kannada Online News Paper

ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಪ್ರಧಾನಿ ವಿರುದ್ಧ ಸ್ಪರ್ಧೆ?

ರಾಯ್ಬರೇಲಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧೆ ಮಾಡುತ್ತಾರಾ? ಕಳೆದ ಬಾರಿ ಮೋದಿಗೆ ಕೇಕ್ ವಾಕ್ ಆಗಿದ್ದ ವಾರಣಾಸಿ ಈ ಭಾರಿ ಕಬ್ಬಿಣದ ಕಡಲೆಯಾಗಲಿದೆಯಾ? ಮೋದಿ ಎಂಬ ಬಿಜೆಪಿಯ ಬ್ರಹ್ಮಾಸ್ತ್ರವನ್ನು ಬಹುಪಾಲು ವಾರಣಾಸಿಗೇ ಬಳಸುವಂತೆ, ಆ ಮೂಲಕ ಹೊರಗಡೆ ಹೆಚ್ಚು ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಖೆಡ್ಡಾ ತೋಡಿದೆಯಾ?

ಇಂಥ ಚರ್ಚೆಗಳೀಗ ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿರುಸಾಗಿ ನಡೆಯುತ್ತಿವೆ. ಇದಕ್ಕೆ ಕಾರಣ ಪ್ರಿಯಾಂಕಾ ಗಾಂಧಿ ವಾರಣಾಸಿ ವಿಚಾರದಲ್ಲಿ ನಡೆಸಿರುವ ತಾಲೀಮು ಮತ್ತು ಈಗ ಆಡುತ್ತಿರುವ ಮಾತುಗಳು.

ಮೊದಲನೆಯದಾಗಿ ಪ್ರಿಯಾಂಕಾ ಗಾಂಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಪೂರ್ವ ವಿಭಾಗದ ಉಸ್ತುವಾರಿಯಾಗಿ ಸಕ್ರೀಯ ರಾಜಕಾರಣ ಪ್ರವೇಶ ಮಾಡಿದ ಮರುದಿನವೇ ವಾರಣಾಸಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ‘ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯಬೇಕು’ ಎಂಬ ಪ್ರೀತಿಪೂರ್ವಕ ಆಗ್ರಹ ಮಾಡಿದ್ದರು. ವಾರಣಾಸಿ ತುಂಬಾ ಪೋಸ್ಟರ್ ಹಚ್ಚಿದ್ದರು. ಆದರೆ ಈ ಬಗ್ಗೆ ಪ್ರಿಯಾಂಕಾ ಗಾಂಧಿ ಅವರಾಗಲೀ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಾಗಲೀ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನ ನಾಯಕರಾಗಲಿ ತುಟಿ ಬಿಚ್ಚಿರಲಿಲ್ಲ.

ಇದಾದ ಮೇಲೆ ಇತ್ತೀಚೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಒಂದೆಡೆ ಸಮಾಗಮವಾಗುವ ಸಂಗಮದಿಂದ (ಪ್ರಯಾಗ್ ರಾಜ್) ವರಣಾಸಿವರೆಗೆ ಬೋಟ್ ಮುಖಾಂತರ ಗಂಗಾ ಯಾತ್ರೆ ಮಾಡಿದ್ದರು ಪ್ರಿಯಾಂಕಾ ಗಾಂಧಿ. ಗಂಗಾಯಾತ್ರೆ ಎಂಬ ಈ ಜಲವಿಹಾರದ ನಡುವೆ ಪ್ರಿಯಾಂಕಾ ಗಾಂಧಿ ಅಲ್ಲಿನ ಗಂಗಾಮತಸ್ಥರೊಂದಿಗೆ(ಮೀನುಗಾರರೊಂದಿಗೆ) ಮುಕ್ತವಾಗಿ ಬೆರೆತು, ಸಂವಾದ ಮಾಡಿ ಅವರ ಮನಸ್ಸು ಗೆದ್ದಿದ್ದರು. ಮಾಧ್ಯಮಗಳಲ್ಲೂ ಪ್ರಿಯಾಂಕಾ ಗಾಂಧಿ ನಡೆಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ನಂತರ ವಾರಣಾಸಿ ತಲುಪಿದ ಪ್ರಿಯಾಂಕಾ ಗಾಂಧಿ, ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾ ದೇವಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದರು. ಇದಕ್ಕೆ ವಿವಾದದ ಬಣ್ಣ ಹಚ್ಚಲು ಹೋದ ಬಿಜೆಪಿ ಈ ಸುದ್ದಿ ಹೆಚ್ಚು ಪಸರಿಸುವಂತೆ ಮಾಡಿ ಪ್ರಿಯಾಂಕಾ ಗಾಂಧಿ ಅವರಿಗೆ ಪರೋಕ್ಷವಾಗಿ ಸಹಕಾರವನ್ನೇ ಮಾಡಿತ್ತು. ಸಹಜವಾಗಿ ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧೆ ಮಾಡಬಹುದೆಂಬ ಲೆಕ್ಕಾಚಾರಗಳು ಕೇಳಿಬಂದಿದ್ದವು. ಆದರೆ ಆಗಲೂ ಪ್ರಿಯಾಂಕಾ ಗಾಂಧಿ ಅವರಾಗಲೀ, ರಾಹುಲ್ ಗಾಂಧಿ ಅವರಾಗಲೀ, ಕಾಂಗ್ರೆಸ್ ಹೈಕಮಾಂಡ್ ನಾಯಕರಾಗಲೀ ‘ಹೌದು’ ಅಥವಾ ‘ಇಲ್ಲ’ ಎಂದು ಹೇಳಿರಲಿಲ್ಲ.

ಈಗ ಸ್ವತಃ ಪ್ರಿಯಾಂಕಾ ಗಾಂಧಿ ಬಾಯಿ ಬಿಟ್ಟಿದ್ದಾರೆ, ಸುಳಿವು ಕೊಟ್ಟಿದ್ದಾರೆ. ಮೊನ್ನೆ ಮೊನ್ನೆ ಸುದ್ದಿಗಾರರೊಬ್ಬರು ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರಾ?’ ಎಂದು ಪ್ರಶ್ನೆ ಮಾಡಿದಾಗ ‘ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ದ’ ಎಂಬ ಚುಟುಕಾದ ಹೇಳಿಕೆ ಮುಖಾಂತರ ಉತ್ತರ ಪ್ರದೇಶದ ರಾಜಕಾರಣಕ್ಕೆ ಚುರುಕು ಮುಟ್ಟಿಸಿದ್ದರು. ನಿನ್ನೆ ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ಬರೇಲಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದ ಪ್ರಿಯಾಂಕಾ ಗಾಂಧಿ ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿ ಇನ್ನಷ್ಟು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಾರ್ಯಕರ್ತರೊಬ್ಬರು ‘ನೀವೇ ರಾಯ್ಬರೇಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ’ ಎಂದು ಮನವಿ ಮಾಡಿದಾಗ, ಎಂಥದೇ ವಿಚಾರಕ್ಕೂ ಥಟ್ ಅಂಥ ಪ್ರತಿಕ್ರಿಯಿಸುವ ಪ್ರಿಯಾಂಕಾ ಗಾಂಧಿ, ತಕ್ಷಣವೇ ‘ವಾರಣಾಸಿ ಏಕಾಗಬಾರದು?’ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿಯವರ ಸ್ಪಾಂಟೇನಿಯಸ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಪ್ರಿಯಾಂಕಾ ಗಾಂಧಿ ಅವರು ನಿಜಕ್ಕೂ ವಾರಣಾಸಿಯಲ್ಲಿ ಮೋದಿ ವಿರುದ್ಧ ಅಭ್ಯರ್ಥಿ ಆಗಬಹುದು ಅಂತಾ ಹೇಳಲಾಗುತ್ತಿದೆ. ಮೋದಿ ಮತ್ತು ಪ್ರಿಯಾಂಕಾ ಗಾಂಧಿ ಎದುರಾಳಿಗಳಾದರೆ ವಾರಣಾಸಿ ಚುನಾವಣಾ ಕಣ ಹೇಗಿರಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ಇನ್ನೊಂದು ವಿಶೇಷ ಅಂದರೆ ಈಗಾಗಲೇ ಉತ್ತರ ಪ್ರದೇಶದ ಬಹುತೇಕ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್ ವಾರಣಾಸಿಯಲ್ಲಿ ತನ್ನ ಪಕ್ಷದ ಹುರಿಯಾಳು ಯಾರೆಂದು ಮಾತ್ರ ಹೇಳಿಲ್ಲ. ಒಂದೊಮ್ಮೆ ಪ್ರಿಯಾಂಕಾ ಗಾಂಧಿ ಅವರೇ ಕಣಕ್ಕಿಳಿದರೆ ವಾರಣಾಸಿ ಇಡೀ ದೇಶದಲ್ಲೇ ಅತ್ಯಂತ ಮಹತ್ವದ ಕ್ಷೇತ್ರವಾಗುವುದರಲ್ಲಿ ಅನುಮಾನಗಳೇ ಇಲ್ಲ.

error: Content is protected !! Not allowed copy content from janadhvani.com