janadhvani

Kannada Online News Paper

ಹೀಗೂ ಒಂದು ಚರ್ಚೆ: ಮೋದಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ,”- ಹೀಗೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಕೆಲವರು ಈ ವಿಚಾರ ಹೌದೆಂದು ವಾದಿಸಿದರೆ, ಇನ್ನು ಕೆಲವರು ಇದರಲ್ಲಿ ಹುರುಳಿಲ್ಲ ಎಂದಿದ್ದಾರೆ.

ಬೆಂಗಳೂರು ದಕ್ಷಿಣವನ್ನು ಅನಂತ್​ಕುಮಾರ್​ ಪ್ರತಿನಿಧಿಸಿದ್ದರು. ಅವರ ಮರಣಾ ನಂತರ ಈ ಕ್ಷೇತ್ರದಿಂದ ಅವರ ಹೆಂಡತಿ ತೇಜಸ್ವಿನಿ ಅನಂತ್​ಕುಮಾರ್​ ಅವರನ್ನು ಕಣಕ್ಕೆ ಇಳಿಸುವ ನಿರ್ಧಾರಕ್ಕೆ ಬಿಜೆಪಿ ಬಂದಿತ್ತು. ಅಚ್ಚರಿ ಎಂದರೆ, ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ರಾಜ್ಯದ 21 ಕ್ಷೇತ್ರಗಳ ಅಭ್ಯರ್ಥಿಯ ಹೆಸರನ್ನು ಮಾತ್ರ ಘೋಷಿಸಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಬಹಿರಂಗ ಮಾಡದೇ ಇರುವುದು ಈ ಚರ್ಚೆಗೆ ನಾಂದಿ ಹಾಡಿದೆ. ಮೋದಿ ಇಲ್ಲಿಂದ ಸ್ಪರ್ಧಿಸುವ ಆಲೋಚನೆ ಇಟ್ಟುಕೊಂಡಿರುವುದಕ್ಕೆ ಈ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಗೊಂಡಿಲ್ಲ ಎನ್ನುತ್ತಿವೆ ಮೂಲಗಳು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ವಡೋದರ ಹಾಗೂ ವಾರಾಣಾಸಿಯಲ್ಲಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಭಾರೀ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಇದೇ ತತ್ವ ಅನುಸರಿಸಲು ಅವರು ಮುಂದಾಗಿದ್ದಾರಂತೆ. ಆದರೆ ವಡೋದರಾ ಬದಲು ಬೆಂಗಳೂರು ದಕ್ಷಿಣದಿಂದ ಚುನಾವಣೆ ಎದುರಿಸುವ ಚಿಂತನೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಮೋದಿ ಬೆಂಗಳೂರಿನಿಂದ ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ಪ್ರಮುಖ ಕಾರಣವೊಂದಿದೆ. ಈ ಬಾರಿ ಬಿಜೆಪಿ ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಒಂದೊಮ್ಮೆ ಮೋದಿ ಬೆಂಗಳೂರಿನಿಂದ ಸ್ಪರ್ಧಿಸಿದರೆ ಕರ್ನಾಟಕ ರಾಜಕಾರಣದಲ್ಲಿ ಮೋದಿ ಪ್ರಭಾವ ಬೀರಬಹುದು. ಇದರಿಂದ ನೇರವಾಗಿ ಬಿಜೆಪಿಗೆ ಲಾಭವಾಗಬಹುದು. ಸದ್ಯ ರಾಜ್ಯದಲ್ಲಿ ಬಿಜೆಪಿ 15-16 ಕ್ಷೇತ್ರ ಗೆಲ್ಲುವ ಸಾಧ್ಯತೆಯಿದೆ ಎಂಬುದು ಚುನಾವಣಾ ಪೂರ್ವ ಸಮೀಕ್ಷೆ ಮತ್ತು ರಾಜಕೀಯ ಪಂಡಿತರ ವಾದವಾಗಿದೆ. ಆದರೆ, ಮೋದಿ ಬೆಂಗಳೂರಿನಿಂದ ಸ್ಪರ್ಧಿಸಿದ್ದೇ ಆದಲ್ಲಿ, ಬಿಜೆಪಿ 22 ಕ್ಷೇತ್ರ ಗೆಲ್ಲುವ ಗುರಿ ತಲುಪುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.

ಬಿಜೆಪಿ ಕರ್ನಾಟಕ ಹೊರತು ಪಡಿಸಿ ದಕ್ಷಿಣ ಭಾರತದ ಮೇಲೆ ಅಷ್ಟಾಗಿ ಹಿಡಿತ ಹೊಂದಿಲ್ಲ. ಹಾಗಾಗಿ ಮೋದಿ ದಕ್ಷಿಣ ಭಾರತದಿಂದ ಸ್ಪರ್ಧೆಗೆ ಇಳಿದರೆ ಬಿಜೆಪಿ ಬಲ ಹೆಚ್ಚುವ ನಿರೀಕ್ಷೆ ಇದೆ. ಇದರಿಂದ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸೀಟು ಗೆಲ್ಲಬಹುದು ಎಂಬ ಲೆಕ್ಕಾಚಾರವೂ ಇದೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯ ನಾಯಕರು ಈ ಆಲೋಚನೆಯನ್ನು ಮೋದಿ ಎದುರು ಇಟ್ಟಿದ್ದರು ಎನ್ನಲಾಗಿತ್ತು. ಆದರೆ, ಅವರು ಈ ಮನವಿಯನ್ನು ತಿರಸ್ಕರಿಸಿದ್ದರು. ಈಗ ಆ ಆಲೋಚನೆ ಮರುಜೀವ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

error: Content is protected !! Not allowed copy content from janadhvani.com