janadhvani

Kannada Online News Paper

“ನೀತಿಸಂಹಿತೆ” ಸಾಮಾಜಿಕ ತಾಣದಲ್ಲಿ ನೈತಿಕ ಸಂಯಮ ಕಾಯ್ದುಕೊಳ್ಳಿ-ಚುನಾವಣಾ ಆಯೋಗ

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿ ಇರುವ ಕಾರಣ, ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌, ಗೂಗಲ್‌, ಶೇರ್‌ಚಾಟ್‌, ಟಿಕ್‌ ಟಾಕ್‌ ಹಾಗು ಬಿಗೊ ಟಿವಿಯಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವಯಂಪ್ರೇರಿತ/ನೈತಿಕ ಸಂಯಮ ಕಾಯ್ದುಕೊಳ್ಳುವಂತೆ ಚುನಾವಣಾ ಆಯೋಗವು ಸೂಚಿಸಿದೆ.

ಅಂತರ್ಜಾಲ ಮತ್ತು ಮೊಬೈಲ್‌ ಅಸೋಸಿಯೇಷನ್ ಆಫ್ ಇಂಡಿಯಾ(ಐಎಎಂಎಐ) ಜತೆ ಚುನಾವಣಾ ಆಯೋಗದ ಸಭೆ ಬುಧವಾರ ನಡೆಯಿತು. ಈ ವೇಳೆ ಮುಖ್ಯ ಚುನಾವಣಾಧಿಕಾರಿ ಸುನಿಲ್‌ ಆರೋರಾ, ಸದ್ಯದ ಚುನಾವಣೆಗಾಗಿ ಜಾರಿಗೊಳಿಸಲಾಗಿರುವ ಮಾದರಿ ನೀತಿಸಂಹಿತೆಯಂತಹ ನೈತಿಕ ಸಂಹಿತೆಯೊಂದನ್ನು ಪ್ರಬಲ ಸಾಮಾಜಿಕ ಮಾಧ್ಯಮ ವೇದಿಕೆಗಳು ತಕ್ಷಣದಲ್ಲೇ ಜಾರಿಗೊಳಿಸುವಂತೆ ಹೇಳಿದ್ದಾರೆ.

‘ಮಾದರಿ ನೀತಿಸಂಹಿತೆಯು ವಿಭಿನ್ನ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ನಡುವಣ ಒಮ್ಮತದ ಫಲಿತಾಂಶವಾಗಿದೆ. ಇದು ಕಾನೂನಾತ್ಮಕವಾಗಿ ಅತ್ಯಂತ ಕಟ್ಟುನಿಟ್ಟಾದ ನಿಬಂಧನೆಗಳನ್ನು ಅಳವಡಿಸುವುದನ್ನು ತಡೆಯುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಆಯುಕ್ತ ಅಶೋಕ್‌ ಲವಾಸಾ ಅವರು, ಸ್ವಯಂಪ್ರೇರಿತ ಸಂಯಮವು ನಾಗರೀಕ ಸಮಾಜದ ಲಕ್ಷಣವಾಗಿದ್ದು, ಯಾವುದೇ ನಿಯಂತ್ರಣಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್‌ 11ರಿಂದ ಆರಂಭವಾಗಲಿದೆ. ಮತ ಎಣಿಕೆ ಪ್ರಕ್ರಿಯೆ ಮೇ 23ರಂದು ನಡೆಯಲಿದೆ. ಆಯೋಗವು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಉದ್ದೇಶಿಸಿ ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದೆ. ಚರ್ಚೆಯ ಅಂಶಗಳು ಇಲ್ಲವೆ.

ಸಾಮಾಜಿಕ ಮಾಧ್ಯಮ ವೇದಿಕೆಗಳ ಜವಾಬ್ದಾರಿ
ಚುನಾವಣಾ ಉದ್ದೇಶ ಇಲ್ಲವೇ ರಾಜಕೀಯ ಪ್ರೇರಿತವಾಗಿ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಬಳಕೆದಾರರಿಗೆ ಷರತ್ತು ವಿಧಿಸಿ, ಸ್ವಯಂ ಪ್ರೇರಿತವಾಗಿ ಅದನ್ನು ಪರಿಗಣಿಸುವಂತೆ ಸ್ಪಷ್ಟಪಡಿಸಬೇಕು. ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಪೂರ್ವಭಾವಿಯಾಗಿ ಕ್ರಮ ಕೈಗೊಳ್ಳುವುದು. ಬಳಕೆದಾರರಿಗೆ ತಮ್ಮ ಜವಾಬ್ದಾರಿಗಳು ಏನು ಎಂಬುದನ್ನು ಆಯಾ ವೇದಿಕೆಗಳು ಸ್ಪಷ್ಟವಾಗಿ ತಿಳಿಸಿಕೊಡುವುದು. 

ರಾಜಕೀಯ ಜಾಹೀರಾತುಗಳು ಮತ್ತು ಪ್ರಮಾಣೀಕರಣ
ಜಾಹೀರಾತುಗಳಿಗೆ ಪೂರ್ವ ಪ್ರಮಾಣೀಕರಣ ನೀಡುವುದಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಪ್ರಾಯೋಜಕರು ಯಾರು? ಜಾಹೀರಾತು ಒಳಗೊಂಡಿರುವ ಮಾಹಿತಿ ಮತ್ತು ಅದರ ಉದ್ದೇಶಿತ ಗುರಿಯನ್ನು ಕಡ್ಡಾಯವಾಗಿ ನಮೂದಿಸಿಬೇಕು ಎಂದು ಸಲಹೆ ನೀಡಿದೆ. ಗೂಗಲ್‌ ಸಂಸ್ಥೆಯು ತನ್ನಲ್ಲಿರುವ ರಾಜಕೀಯ ಜಾಹೀರಾತು ಲೈಬ್ರರಿಯನ್ನು ಬಿಡುಗಡೆಯಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಆಯೋಗ ಕಳವಳ ವ್ಯಕ್ತಪಡಿಸಿದೆ.(ಫೇಸ್‌ಬುಕ್‌ ಹಾಗೂ ಟ್ವಿಟರ್‌ನ ಜಾಹೀರಾತುಗಳು ಅಂತರ್ಜಾಲದಲ್ಲಿ ಸದ್ಯ ಲಭ್ಯವಿದೆ) 

ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳು ಟಿವಿ ಜಾಹೀರಾತು ನೀಡುವ ಮುನ್ನ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ 2004ರಲ್ಲಿ ತೀರ್ಪು ನೀಡಿತ್ತು. ಅದನ್ನು ಉಲ್ಲೇಖಿಸಿರುವ ಐಎಎಂಎಐ, ಜಾಹೀರಾತುಗಳ ವಿಚಾರದಲ್ಲಿ ಪೂರ್ವ ಪ್ರಮಾಣೀಕರಣ ಪಡೆದುಕೊಳ್ಳುವ ಜವಾಬ್ದಾರಿ ಜಾಹೀರಾತುದಾರರದೇ ಹೊರತು ಮಧ್ಯವರ್ತಿಗಳದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಪೂರ್ವ ಪ್ರಮಾಣಿಕರಣವು ಕಾನೂನುಬದ್ಧ ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಾಗಿದೆ ಎಂದೂ ಐಎಎಂಐ ಹೇಳಿದೆ. 

ತಾನು ಯಾವುದೇ ರಾಜಕೀಯ ಪಕ್ಷದ ಅಧಿಕೃತ ಖಾತೆಯನ್ನು ಹೊಂದಿಲ್ಲ ಮತ್ತು ಜಾಹೀರಾತುಗಳನ್ನು ಪ್ರಕಟಿಸುತ್ತಿಲ್ಲ ಎಂದು ಟಿಕ್‌ ಟಾಕ್‌ ಮಾಹಿತಿ ನೀಡಿದೆ.

ತಪ್ಪು ಮಾಹಿತಿ/ಸುಳ್ಳು ಸುದ್ದಿಗಳನ್ನು ತಡೆಹಿಡಿಯುವುದು
ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಎರಡೂ ರೀತಿಯ(ಸರಿ ಮತ್ತು ತಪ್ಪು) ವಿಚಾರಗಳು ಹರಿದಾಡುತ್ತವೆ. ಆದರೆ, ಸುಳ್ಳು ಸುದ್ದಿಗಳನ್ನು ನಿರ್ಬಂಧಿಸುವುದನ್ನು ಕಡೆಗಣಿಸುವಂತಿಲ್ಲ ಎಂದಿದೆ.

ಮಾಹಿತಿಯನ್ನು ತೆಗೆದು ಹಾಕುವುದು
ಪ್ರಕಟವಾದ ವಿಷಯಗಳನ್ನು 48ಗಂಟೆಗಳ ಮೌನ ಅವಧಿಯಲ್ಲಿ ತೆಗೆದುಹಾಕುವ ವಿಚಾರವಾಗಿ ಚುನಾವಣಾ ಆಯೋಗದ ಮನವಿಯನ್ನೊಳಗೊಂಡ ಪ್ರಕಟಣಾ(ನೋಟಿಫಿಕೇಷನ್‌) ವ್ಯವಸ್ಥೆ ಅಳವಡಿಸಿಕೊಳ್ಳುವ ಸಂಬಂಧ ಪ್ರಮುಖ ವೇದಿಕೆಗಳ ಪ್ರತಿನಿಧಿಗಳು ಆಯೋಗದ ಎದುರು ಪ್ರಸ್ತಾಪಿಸಿದವು. ಆದರೆ, ಜಾಹೀರಾತುದಾರರು ನೋಟಿಫಿಕೇಷನ್‌ಗಳಿಗೆ ಪ್ರತಿಕ್ರಿಯಿಸಬೇಕಾದ ಸಮಯ ನಿಗದಿಪಡಿಸುವ ವಿಚಾರದಲ್ಲಿ ಆಯೋಗ ಮತ್ತು ವೇದಿಕೆಗಳ ನಡುವೆ ಒಮ್ಮತ ಮೂಡಲಿಲ್ಲ. ಆಯೋಗವು ಮೊದಲು 3 ಗಂಟೆಗಳ ಕಾಲಾವಧಿಯನ್ನು ನಿಗದಿಪಡಿಸಲು ಸೂಚಿಸಿತು. ಆದರೆ ಐಎಎಂಎಐ, ‘ಸಾಧ್ಯವಾದಷ್ಟು ಬೇಗ ತೆಗೆದು ಹಾಕಲಾಗುವುದು’ ಅಥವಾ ‘ಸಮಯ-ನಿರ್ಬಂಧಿತ ವಿಧಾನವನ್ನು ವಿವರಿಸಿ’ ಜಾಹೀರಾತನ್ನು ಏಕೆ ತೆಗೆದುಹಾಕಬಾರದು ಎಂದು ತಿಳಿಸಲು ಅವಕಾಶ ನೀಡುವ ಬಗ್ಗೆ ಹೇಳಿದೆ.

ರಾಜಕೀಯ ಜಾಹೀರಾತುಗಳುಗಳನ್ನು ತೆಗೆದುಹಾಕಲು ಕಾನೂನಾತ್ಮ ನಿಬಂಧನೆಗಳನ್ನು ರೂಪಿಸುವ ವಿಚಾರವು ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತಾದರೂ, ನೈತಿಕ ಸಂಹಿತೆಯ ವ್ಯಾಪ್ತಿಗೆ ಅವುಗಳನ್ನೂ ಸೇರಿಸಲಾಗುತ್ತದೆಯೇ, ಇಲ್ಲವೇ ಸ್ಪಷ್ಟವಾಗಿಲ್ಲ.

ರಾಜಕೀಯ ಪ್ರಾಯೋಜಿತ ಜಾಹೀರಾತು ಯಾವುದು?
ರಾಜಕೀಯದಿಂದ ಹೊರಗಿನವರು ರಚಿಸುವ ಪೋಸ್ಟ್‌ಗಳನ್ನು ಪ್ರಚಾರ ಮಾಡಲು, ಉತ್ತೇಜಿಸಲು ಯಾರು ಹಣ ನೀಡುತ್ತಾರೆ ಎಂಬುದನ್ನು ರಾಜಕೀಯ ಜಾಹೀರಾತುವಿನಲ್ಲಿ ಉಲ್ಲೇಖಿಸಬೇಕೇ ಎಂಬುದು ಸಭೆಯಲ್ಲಿ ಇತ್ಯರ್ಥವಾಗದ ವಿಚಾರ. ಈ ವಿಚಾರದಲ್ಲಿ ಸ್ಪಷ್ಟನೆ ಬಯಸಿದ ಐಎಎಂಎಐ, ‘ರಾಜಕೀಯ ಪ್ರಾಯೋಜಿತ ಜಾಹೀರಾತು’ ಎಂಬುದನ್ನು ನಿರ್ಧರಿಸುವ ಸಂಬಂಧ ನಿಯಮಗಳನ್ನು ತ್ವರಿತವಾಗಿ ಸ್ಪಷ್ಟಪಡಿಸುವಂತೆ ಕೇಳಿದೆ. ಇದಕ್ಕೆ ಧನಿಗೂಡಿಸಿದ ಶೇರ್‌ಚಾಟ್‌, ‘ರಾಜಕೀಯ ಜಾಹೀರಾತುಗಳು ಒಳಗೊಂಡಿರುವ ಅಂಶಗಳನ್ನು ಪ್ರಮಾಣೀಕರಿಸುವುದು ಹೇಗೆ? ಪ್ರಮಾಣೀಕರಣದ ಕಟ್ಟುಪಾಡುಗಳಿಗೆ ಬದ್ಧರಾಗಿರುವವರು ಯಾರು? ಜಾಹೀರಾತುದಾರರು, ಅಭ್ಯರ್ಥಿಗಳು, ಪಕ್ಷ ಹಾಗೂ ಸಂಬಂಧಿಸಿದವರಿಗೆ ಕಟ್ಟುಪಾಡುಗಳು ಯಾವ ಸಮಯದವರೆಗೆ ಅನ್ವಯವಾಗುತ್ತವೆ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಕೋರಿದೆ.

ಜಾಹೀರಾತು ಹಿಂಪಡೆಯುವ ಸಂಬಂಧ ನಿರ್ದಿಷ್ಟ ಕಾನೂನು ನಿಬಂದನೆಗಳು?
ಜಾಹೀರಾತು ಹಿಂಪಡೆಯುವ ಸಂಬಂಧ ಚುನಾವಣಾ ಆಯೋಗವು ಕಳೆದವಾರವೇ ಫೇಸ್‌ಬುಕ್‌ಗೆ ಸೂಚನೆ ನೀಡಿತ್ತು. ಆದರೆ, ನಿರ್ದಿಷ್ಟ ಕಾನೂನು ನಿಬಂಧನೆಗಳನ್ನು ಉಲ್ಲೇಖಿಸಿರಲಿಲ್ಲ. ಹೀಗಾಗಿ ಅದು ಉಲ್ಲಂಘನೆಯಾಗುತ್ತದೆ ಎಂದು ಕಂಪೆನಿ ಹೇಳಿತ್ತು. ಈ ಬಗ್ಗೆ ಮಾತನಾಡಿದ ಐಎಎಂಎಐ ಅಧ್ಯಕ್ಷ ಸುಭೋ ರಾಯ್‌, ನ್ಯಾಯಬದ್ಧವಾಗಿ ನೋಟಿಸ್‌ ನೀಡಲು ಕಾನೂನು ಆದೇಶವು ಸಹಕಾರಿ. ಒಂದು ವೇಳೆ ಇದರ(ನೋಟಿಸ್‌) ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದರೆ ಹೋರಾಟ ನಡೆಸಲು ಕಾನೂನುಬದ್ಧ ಬೆಂಬಲವೂ ದೊರೆತಂತಾಗುತ್ತದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನ ಭಾರತೀಯ ಸಾರ್ವಜನಿಕ ನೀತಿ ನಿರ್ದೇಶಕರಾದ ಶಿವನಾಥ್ ತುಕ್ರಾಲ್, ಸ್ನೇಹಶಿಶ್ ಘೋಷ್ ಮತ್ತು ನತಾಶಾ ಜೋಗ್ ಹಾಗೂ ಟ್ವಿಟರ್–ಗೂಗಲ್‌ನ ಮಹಿಮಾ ಕೌಲ್ ಮತ್ತು ಚೇತನ್ ಕೃಷ್ಣಸ್ವಾಮಿ, ಶೇರ್‌ಚಾಟ್‌ನ ಬೆರ್ಜಸ್ ಮಾಲು ಮತ್ತು ಬೈಟ್‌ಡ್ಯಾನ್ಸ್‌(ಟಿಕ್‌ ಟಾಕ್‌) ಇಂಡಿಯಾದ ಕಾನೂನು ಸಲಹೆಗಾರ ಅಪೂರ್ವ ಮೆಹ್ತಾ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com