janadhvani

Kannada Online News Paper

ಲೋಕಸಭೆ ಚುನಾವಣೆಗೆ ಸಜ್ಜು- ರಾಜ್ಯ ಮೈತ್ರಿ ನಾಯಕರ ಸಭೆ

ಬೆಂಗಳೂರು (ಮಾ.19): ಮೈತ್ರಿ ಮೂಲಕ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್​-ಜೆಡಿಎಸ್​  ನಾಯಕರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ.

ಈ  ಸುದ್ದಿಗೋಷ್ಠಿಗೂ ಮುನ್ನ ಉಭಯ ಪಕ್ಷದ ಶಾಸಕರು ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದರು. ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಗಳ ಆಯ್ಕೆ, ಕೆಲ ಕ್ಷೇತ್ರದಲ್ಲಿ ಉಂಟಾಗಿರುವ ಕಾಂಗ್ರೆಸ್- ಜೆಡಿಎಸ್ ನಡುವಿನ ಅಸಮಾಧಾನ, ಹಾಗೂ ಮೈತ್ರಿ ಪಕ್ಷಗಳಿಗೆ ಪರಸ್ಪರ ಬೆಂಬಲ ನೀಡುವುದು, ಜೆಡಿಎಸ್‌ ನಾಯಕರ ಜೊತೆ ಚುನಾವಣಾ ಪ್ರಚಾರ ಕೈಗೊಳ್ಳುವ ವಿಷಯ ಸೇರಿದಂತೆ ಮೊದಲಾದವುಗಳ ಕುರಿತು  ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭಾಗಿಯಾಗಿದ್ದಾರೆ.

ದೇವೇಗೌಡರಿಗೆ ಖುರ್ಚಿ ಬಿಟ್ಟುಕೊಟ್ಟ ಸಿದ್ದರಾಮಯ್ಯ

ದೇವೇಗೌಡರ ಆಗಮನಕ್ಕೂ ಮುನ್ನ  ಕುರ್ಚಿಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ,  ಅವರು ಬರುತ್ತಿದ್ದಂತೆ ತಾವು ಕುಳಿತಿದ್ದ ಕುರ್ಚಿಯನ್ನು ತಮ್ಮ ಗುರುವಿಗೆ ಬಿಟ್ಟುಕೊಟ್ಟು ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಈ ವೇಳೆ ದೇವೇಗೌಡರ ಆರೋಗ್ಯವನ್ನು ಅವರು ವಿಚಾರಿಸಿದರು.

ಸಭೆಗೆ ಗೈರಾಗುವ ಮೂಲಕ ಡಿಸಿಎಂ ಅಸಮಾಧಾನ

ತುಮಕೂರು ಕ್ಷೇತ್ರ ಕೈ ತಪ್ಪಿದ ಹಿನ್ನೆಲೆ ಬೇಸರವಾಗಿದ್ದ ಡಿಸಿಎಂ ಪರಮೇಶ್ವರ್​, ಕ್ಷೇತ್ರ ಬಿಟ್ಟುಕೊಡುವಂತೆ  ದೇವೇಗೌಡ ಹಾಗೂ ಕುಮಾರಸ್ವಾಮಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆ ನಾಯಕರುಗಳ ವಿರುದ್ಧ ಅಸಮಾಧಾನ ಹೊಂದಿರುವ ಅವರು ಸಭೆಯಿಂದ ದೂರ ಉಳಿದಿದ್ದಾರೆ.  ತುಮಕೂರು ಕ್ಷೇತ್ರವನ್ನು  ಮುದ್ದುಹನುಮೇಗೌಡರಿಗೆ ಬಿಟ್ಟು ಕೊಡಬೇಕು ಎಂದು ಪಟ್ಟು ಹಿಡಿದಿರುವ ಪರಮೇಶ್ವರ್​ ಗೈರಾಗುವ ಮೂಲಕ ನಾಯಕರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ.

error: Content is protected !! Not allowed copy content from janadhvani.com