janadhvani

Kannada Online News Paper

ಲೋಕಸಭೆ ಚುನಾವಣೆ- ದೋಸ್ತಿ ನಾಯಕರಿಂದ ಜಂಟಿ ಪತ್ರಿಕಾಗೋಷ್ಠಿ

ಬೆಂಗಳೂರು, ಮಾ.19- ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರಚಾರ ನಡೆಸಲು ತಿರ್ಮಾನಿಸಿದ್ದು, ಇನ್ನೂ ಮುಂದೆ ಉಭಯ ಪಕ್ಷಗಳ ನಾಯಕರು ಒಡಕಿನ ಮಾತುಗಳನ್ನಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ನಗರದ ಖಾಸಗಿ ಹೋಟೆಲ್‍ನಲ್ಲಿಂದು ನಡೆದ ಸುದೀರ್ಘ ಸಭೆಯಲ್ಲಿ ಮಿತ್ರ ಪಕ್ಷಗಳ ನಾಯಕರು ಲೋಕಸಭೆ ಚುನಾವಣೆಯ ರಣತಂತ್ರಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದರು. ಮಾರ್ಚ್ 31ರಂದು ಬೆಂಗಳೂರು ಹೊರ ವಲಯದಲ್ಲಿ ಜಂಟಿಯಾಗಿ ಬೃಹತ್ ಸಮಾವೇಶ ನಡೆಸಿ ಚುನಾವಣಾ ಪ್ರಚಾರಕ್ಕೆ ರಣಕಹಳೆ ಊದಲಿದ್ದಾರೆ. ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸೇರಿ ಎರಡು ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಇಂದು ಖಾಸಗಿ ಹೋಟೆಲ್‍ನಲ್ಲಿ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಭಯ ಪಕ್ಷಗಳ ನಾಯಕರು, ಸಮಾವೇಶದ ಬಗ್ಗೆ ಮಾಹಿತಿ ನೀಡಿದ್ದರಲ್ಲದೆ. ಎರಡು ಪಕ್ಷಗಳ ಶಾಸಕರು, ಸಂಸದರು, ಸಚಿವರು, ಕೆಳ ಹಂತದ ನಾಯಕರು ಜೆಡಿಎಸ್ ಕಾಂಗ್ರೆಸ್ ಮೈತ್ರಿಯ ಬಗ್ಗೆ ಒಡಕಿನ ಮಾತುಗಳನ್ನು ಆಡಬಾರದು. ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗಲೂ ಎರಡು ಪಕ್ಷಗಳು ಬೇರೆ ಬೇರೆ ಎಂಬ ಆರ್ಥ ಬರದಂತೆ ಎಚ್ಚರಿಕೆ ವಹಿಸಿ, ಎರಡು ಪಕ್ಷಗಳು ಒಂದೆ ಎಂಬಂತೆ ಮಾತನಾಡಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಪ್ರಚಾರದ ವೇಳೆ ಮತ್ತು ಮತದಾರರನ್ನು ಸೆಳೆಯುವಾಗ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಎಚ್ಚರಿಕೆ ವಹಿಸಲು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಎರಡು ಪಕ್ಷಗಳಿಂದ ತಲಾ ಒಬ್ಬರು ವಿಕ್ಷಕರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕೋಮುವಾದಿ ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿರುವ 28 ಕ್ಷೇತ್ರಗಳನ್ನು ಗೆಲ್ಲುವುದು ಗೆಲ್ಲುವುದು ದೋಸ್ತಿ ಪಕ್ಷಗಳ ಗುರಿ ಎಂದು ನಾಯಕರು ಘೋಷಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾತನಾಡಿ, ಪೂರ್ವಭಾವಿ ಹಂತದ ಚರ್ಚೆಯಲ್ಲಿ ಎಲ್ಲಾ ನಾಯಕರು ಭಾಗವಹಿಸಿದ್ದೇವೆ. ಮೊದಲ ಹಂತದ ಚುನಾವಣೆಗೆ ಇಂದಿನಿಂದ ನಾಮ ಪತ್ರ ಸಲ್ಲಿಕೆ ಆರಂಭವಾಗಿದೆ.

ಚುನಾವಣಾ ಪ್ರಚಾರಕ್ಕೆ ಮಾ.31 ಸಮಾವೇಶ ಸಮಾವೇಶದಲ್ಲಿ ಚಾಲನೆ ನೀಡಲಾಗುತ್ತದೆ. ಅಲ್ಲಿಯವರೆಗೂ ನಾವು ಸುಮ್ಮನೆ ಕೂರುವುದಿಲ್ಲ. ಜೆಡಿಎಸ್‍ಗೆ ಹಂಚಿಕೆಯಾಗಿರುವ 8, ಕಾಂಗ್ರೆಸ್‍ಗೆ ಹಂಚಿಕೆಯಾಗಿರುವ 20 ಕ್ಷೇತ್ರಗಳಲ್ಲಿ ಇರುವ ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತೇವೆ.

ಕಾರ್ಯಕರ್ತರು ಮತ್ತು ಮುಖಂಡರಲ್ಲಿರುವ ಭಿನ್ನಾಭಿಪ್ರಾಯಗಳನ್ನು ರಾಜ್ಯ ನಾಯಕರಾದ ಹಂತದಲ್ಲೆ ಬಗೆಹರಿಸುತ್ತೇವೆ. ಇನ್ನು ಮುಂದೆ ಶಾಸಕರು, ಜಿಲ್ಲಾ ಮುಖಂಡರು ಒಡಕಿನ ಮಾತುಗಳನ್ನಾಡಬಾರದು. ಏನೇ ಇದ್ದರೂ ನಾವು ಬಗೆಹರಿಸಿಕೊಡುತ್ತೇವೆ. ಚುನಾವಣೆ ನಂತರವೂ ಸಮ್ಮಿಶ್ರ ಸರ್ಕಾರದ ರಾಜ್ಯಾಡಳಿತ ಮುಂದುವರೆಯುತ್ತೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಇರುತ್ತೋ ಹೋಗುತ್ತೋ ಎಂಬ ಅನುಮಾನಗಳು ಬೇಡ. ನಾನು ಮತ್ತು ಸಿದ್ದರಾಮಯ್ಯ ಜಂಟಿಯಾಗಿಯೇ ಪ್ರಚಾರ ಮಾಡುತ್ತೇವೆ. ಒಟ್ಟಾಗಿಯೇ ಇದ್ದೇವೆ. ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರಲ್ಲದೆ, ಇಂದಿನ ಸಭೆಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಆಕಸ್ಮಿಕವಾಗಿ ಬಂದಿಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಚುನಾವಣೆಗೆ ದೇವೇಗೌಡರು ನಿಲ್ಲುತ್ತಾರೋ ಇಲ್ಲವೋ, ಮೈಸೂರಿಗೆ ಹೋಗುತ್ತಾರೋ ಇಲ್ಲವೋ, ಮಂಡ್ಯಕ್ಕೆ ಸಿದ್ದರಾಮಯ್ಯ ಬರುವುದಿಲ್ಲವೇ ಎಂಬ ಸಂಶಯಗಳಿಗೆ ಇಂದಿನ ಸಭೆಯ ಮೂಲಕ ತೆರೆ ಎಳೆದಿದ್ದೇವೆ. ನಮ್ಮ ಹಠ, ಹೋರಾಟ ಇರುವುದು ಬಿಜೆಪಿಯನ್ನು ಸೋಲಿಸುವುದಕ್ಕೆ.

ಕೋಮುವಾದಿಗಳನ್ನು ಸೋಲಿಸುವುದು ನಮ್ಮ ಗುರಿ, ಅದಕ್ಕಾಗಿ ನಮ್ಮ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಸರ್ವ ಪ್ರಯತ್ನ ನಡೆಸುತ್ತೇವೆ, ಅದರಲ್ಲಿ ಯಶಸ್ವಿಯೂ ಆಗುತ್ತೇವೆ. ಜೆಡಿಎಸ್ ಕಾಂಗ್ರೆಸ್ ಎರಡು ಪಕ್ಷಗಳು ಈಗ ಹೊಂದಿರುವ 12 ಸ್ಥಾನಗಳ ಜೊತೆಗೆ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಬೇಕು. ರಾಜ್ಯದಲ್ಲಿ ಬಿಜೆಪಿಗೆ ಎರಡಂಕಿ ದಾಟಲು ಬಿಡುವುದಿಲ್ಲ.

ಮಿತ್ರ ಪಕ್ಷಗಳ ನಾಯಕರು ಒಟ್ಟಾಗಿಯೇ ಪ್ರಚಾರ ಮಾಡುತ್ತೇವೆ. ಮೊದಲ ಹಂತದ ಚುನಾವಣೆ ನಂತರ ಎರಡನೆ ಹಂತದಲ್ಲೂ ಒಟ್ಟಾಗಿ ಪ್ರಚಾರ ಮಾಡುತ್ತೇವೆ. ಮನಸ್ಸಿನಲ್ಲಿ ಯಾವುದೇ ಬೇಸರ ಇದ್ದರೂ ಶಾಸಕರು, ಸಚಿವರು ಐಕ್ಯತೆಯ ಹೇಳಿಕೆ ನೀಡಬೇಕು. ಮೈತ್ರಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬ ಭಾವನೆ ಬರದಂತೆ ಜನರಿಗೆ ಸಂದೇಶ ತಲುಪಿಸಬೇಕು ಎಂದರು.
ಎಷ್ಟೇ ಕಾರ್ಯಕ್ರಮಗಳಿದ್ದರೂ ರಾಹುಲ್ ಗಾಂಧಿ ಮಾ.31ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ದೇಶದಲ್ಲಿ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಯ ಸಂದೇಶ ರವಾನಿಸುತ್ತೇವೆ ಎಂಬ ವಿಶ್ವಾಸವನ್ನು ದೇವೇಗೌಡರು ವ್ಯಕ್ತ ಪಡಿಸಿದರು.

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯ ವೇಳೆ ದೇಶದಲ್ಲಿ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಎಲ್ಲ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾತ್ಯತೀತ ಪಕ್ಷಗಳ ಮಹಾಘಟ್ ಬಂಧನ್ ಬಗ್ಗೆ ಲಘುವಾಗಿ ಮಾತನಾಡುತ್ತಾರೆ, ಹಾಸ್ಯ ಮಾಡುತ್ತಾರೆ. ಆದರೆ ಬಿಜೆಪಿ ಇನ್ನೂ 15 ರಾಜ್ಯಗಳಲ್ಲಿ ಘಟಬಂಧನ್‍ನಲ್ಲೆ ಸರ್ಕಾರ ನಡೆಸುತ್ತಿದೆ ಎಂಬುದರ ಅರಿವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ದೇವೇಗೌಡರು ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಎರಡು ಪಕ್ಷಗಳ ಒಟ್ಟಾಗಿ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದಾಗಲೆ ಎರಡು ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಬಿಜೆಪಿ ಎದುರಿಸಬೇಕು ಎಂಬ ನಿರ್ಣಯ ಆಗಿತ್ತು. ಅದರಂತೆ ಇತ್ತಿಚೆಗೆ ನಡೆದ ಉಪಚುನಾವಣೆಗಳಲ್ಲಿ ಜಂಟಿಯಾಗಿ ಎದುರಿಸಿದ್ದೇವು.

ಶಿವಮೊಗ್ಗದಲ್ಲಿ ಸ್ವಲ್ಪ ಅಂತರದಿಂದ ಸೋತೆವು. ಉಳಿದ ಕ್ಷೇತ್ರಗಳಾದ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳು, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಗೆದ್ದೇವು. ಈ ಬಾರಿ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಪದೇ ಪದೇ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದೆ. ಅದು ಸಾಧ್ಯವಿಲ್ಲ. ಜಾತ್ಯತೀತ ಮತಗಳು ವಿಭಜನೆಯಾಗುತ್ತಿದ್ದರಿಂದ ಈವರೆಗೂ ಬಿಜೆಪಿ ಗೆಲ್ಲುತ್ತಿತ್ತು.

ಈ ಬಾರಿ ಅದಕ್ಕೆ ಅವಕಾಶ ಆಗದಂತೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಕ್ಷೇತ್ರ ಹಂಚಿಕೆಯಾಗಿದೆ, ಒಂದೆರೆಡು ದಿನದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗುತ್ತದೆ ಎಂದು ತಿಳಿಸಿದರು.

ತಳಮಟ್ಟದಿಂದ ಎಲ್ಲಾ ನಾಯಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗುತ್ತದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಎರಡು ಪಕ್ಷಗಳಿಂದಲೂ ಒಬ್ಬರು ವೀಕ್ಷಕರನ್ನು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ನೇಮಿಸಲಾಗುತ್ತದೆ ಎಂದರು.

ಬೆಂಗಳೂರಿನ ಹಾಸುಪಾಸಿನಲ್ಲಿ ಮಾ.31ರಂದು ಬೃಹತ್ ಸಮಾವೇಶ ನಡೆಯಲಿದೆ. ಅದರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಜಂಟಿಯಾಗಿ ಭಾಗವಹಿಸುತ್ತಾರೆ. ಈ ಐತಿಹಾಸಿಕ ಸಮಾವೇಶದಿಂದಲೇ ಚುನಾವಣಾ ರಣಕಹಳೆ ಆರಂಭಿಸುತ್ತೇವೆ ಎಂದರು.
ರಾಜ್ಯದಲ್ಲಿರುವ 28 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಅದಕ್ಕೆ ಬೇಕಾದಂತೆ ಕಾರ್ಯಕರ್ತರನ್ನು ಹುರಿದುಂಬಿಸುತ್ತೇವೆ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮತ್ತಿತರರು ಸಭೆಯಲ್ಲಿ ಭಾಗವಹ

error: Content is protected !! Not allowed copy content from janadhvani.com