janadhvani

Kannada Online News Paper

ಬೇರೋಜ್ಗಾರ್ (ನಿರುದ್ಯೋಗಿ) ಎಂದು ಟ್ವಿಟರ್ ಖಾತೆಯ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್

ಅಹಮದಾಬಾದ್: ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿದ್ದ ಗುಜರಾತಿನ ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಖಾತೆಯ ಹೆಸರಿಗೆ ಬೇರೋಜ್ಗಾರ್ ( ನಿರುದ್ಯೋಗಿ ) ಎಂದು ಸೇರಿಸಿದ್ದಾರೆ. ಈ ಮೂಲಕ ಬಿಜೆಪಿಯ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಟಾಂಗ್ ನೀಡಿದ್ದಾರೆ. ಮತ್ತೀಗ ಅವರ ಟ್ವಿಟಕರ್ ಖಾತೆ ಹೆಸರು ಬೇರೋಜ್ಗಾರ್ ಹಾರ್ದಿಕ್ ಪಟೇಲ್ (Berojgar Hardik Patel) ಎಂದಾಗಿದೆ. 

ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಾರ್ದಿಕ್ ಅವರನ್ನು ಅನುಸರಿಸಿರುವ ಹಲವರು ತಮ್ಮ ಟ್ವಿಟರ್ ಹೆಸರಿನ ಆರಂಭದಲ್ಲಿದನ್ನು ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಸಹ ಸದ್ಯದಲ್ಲೇ ಬೇರೋಜ್ಗಾರ್ ಅಭಿಯಾನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಿದೆ. 

ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮೋದಿ ತಮ್ನನ್ನು ತಾವು ಚೌಕಿದಾರ್ ( ಕಾವಲುಗಾರ ) ಎಂದು ಕರೆಸಿಕೊಳ್ಳುತ್ತಾರೆ. ಮೈ ಭಿ ಚೌಕಿದಾರ್ ಅಭಿಯಾನದಡಿಯಲ್ಲಿ ಪ್ರಧಾನಿಯನ್ನು ಅನುಸರಿಸಿರುವ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ತಮ್ಮ ಟ್ವಿಟರ್ ಖಾತೆಯ ಹೆಸರಿನ ಆರಂಭದಲ್ಲಿ ಚೌಕಿದಾರ್ ಎಂದು ಸೇರಿಸಿಕೊಂಡಿದ್ದಾರೆ.
ಪ್ರಧಾನಿ ತಮ್ಮನ್ನು ತಾವು ಕಾವಲುಗಾರ ಎಂದು ಕರೆಸಿಕೊಳ್ಳುತ್ತಿರುವುದಕ್ಕೆ ಟಾಂಗ್ ನೀಡುತ್ತಿರುವ ರಾಹುಲ್ ಗಾಂಧಿ ರಫೇಲ್ ಒಪ್ಪಂದವನ್ನು ಉಲ್ಲೇಖಿಸಿ ಚೌಕಿದಾರ್ ಚೋರ್ ಹೈ ಎಂದು ಹೀಗಳೆಯುತ್ತಿದ್ದಾರೆ.   

ಮಾರ್ಚ್ 12ರಂದು ಕೈ ಹಿಡಿದಿದ್ದ ಹಾರ್ದಿಕ್:ಪಾಟೀದಾರ್‌ ಮೀಸಲಾತಿ ಹೋರಾಟದ ಮೂಲಕ ಗುಜರಾತ್‌ನ ಬಿಜೆಪಿ ಸರಕಾರದ ವಿರುದ್ಧ ಸಮರ ಸಾರಿದ್ದ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮಾರ್ಚ್ 12ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು.ಮಹಿಳಾ ಸುರಕ್ಷತೆ, ರೈತರ ಸಮಸ್ಯೆ ಮತ್ತು ಕೃಷಿ ಬಿಕ್ಕಟ್ಟು ತಮ್ಮ ಅಜೆಂಡಾದಲ್ಲಿರಲಿವೆ ಎಂದವರು ಹೇಳಿದ್ದರು. 

ಪಟೇಲ್ ಸಮುದಾಯದ ಹೋರಾಟಗಾರ ಎಂಬ ಹಣೆಪಟ್ಟಿ ಹೊತ್ತಿರುವ ನಿಮಗೆ ಬೇರೆ ಸಮುದಾಯದವರ ಬೆಂಬಲ ಹೇಗೆ ಸಿಗಲು ಸಾಧ್ಯ ಎಂಬ ಪ್ರಶ್ನೆಗೆ ನಾನು ಕೇವಲ ಪಟೇಲ್ ಸಮುದಾಯದವರಿಗಾಗಿ ಹೋರಾಟ ನಡೆಸಿಲ್ಲ. ರೈತರು, ಯುವಜನಾಂಗ ಮತ್ತು ಬಡವರ ಪರವಾಗಿ ಸಹ ಹೋರಾಡಿದ್ದೇನೆ. ನನ್ನ ಪ್ರಯತ್ನಗಳು ಸರಕಾರ ಜನರ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿವೆ. ನಾನು ಎಲ್ಲರ ಬೆಂಬಲ ಪಡೆಯಬಲ್ಲೆನೆಂಬ ವಿಶ್ವಾಸ ನನಗಿದೆ ಎಂದವರು ಭರವಸೆ ವ್ಯಕ್ತಪಡಿಸಿದ್ದರು. 

ಅವರು ಗುಜರಾತ್‌ನ ಜಾಮ್‌ನಗರ್ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಸ್ತುತ ಜಾಮ್‌ನಗರ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಪೂನಂಬೆನ್ ಮಾಧಮ್ ಪ್ರತಿನಿಧಿಸುತ್ತಿದ್ದಾರೆ. ಕಳೆದ ಜನವರಿ ತಿಂಗಳಲ್ಲಷ್ಟೇ ಹಾರ್ದಿಕ್ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. 

error: Content is protected !! Not allowed copy content from janadhvani.com