janadhvani

Kannada Online News Paper

ಬೆನಾಮಿ ವ್ಯವಹಾರ :10 ಲಕ್ಷ ರಿಯಾಲ್ ದಂಡ 2 ವರ್ಷಗಳ ಜೈಲು ಶಿಕ್ಷೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಬೆನಾಮಿ ವ್ಯವಹಾರಗಳನ್ನು ಕೊನೆಗೊಳಿಸಲು ಕಠಿಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ವಿವಿಧ ಸರಕಾರಿ ಇಲಾಖೆಗಳು ಈ ಯೋಜನೆಗೆ ಸಹಕಾರ ನೀಡಲಿದೆ. ರಾಷ್ಟ್ರೀಯ ಪರಿವರ್ತನಾ ಕಾರ್ಯಕ್ರಮದ ಭಾಗವಾಗಿ ಬೆನಾಮಿ ಉದ್ಯಮ ವಿರೋಧಿ ರಾಷ್ಟ್ರೀಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ವಿವಿಧ ವಾಣಿಜ್ಯ ಕ್ಷೇತ್ರಗಳಲ್ಲಿ ಸ್ವದೇಶಿಗಳಿಗೆ ಅವಕಾಶಗಳನ್ನು ನೀಡುವುದು ಮತ್ತು ಬೆನಾಮಿ ವ್ಯವಹಾರಗಳನ್ನು ಕೊನೆಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಪ್ರೋತ್ಸಾಹಿಸುವ ಸಲುವಾಗಿ ಸ್ವದೇಶಿಗಳಿಗೆ ಬೆಂಬಲ ಮತ್ತು ಸಾಲಗಳನ್ನು ಒದಗಿಸಿ ಉತ್ತೇಜಿಸಲಾಗುತ್ತದೆ.

ಇದು ವ್ಯವಸ್ಥಿತ ಆರ್ಥಿಕ ವಹಿವಾಟುಗಳನ್ನು ಸ್ಥಾಪಿಸಲಿದೆ ಮತ್ತು ಆರ್ಥಿಕ ಹಾನಿಯನ್ನುಂಟುಮಾಡುವ ನಗದು ಹರಿವನ್ನು ತಡೆಯಲಿದೆ. ಬೆನಾಮಿ ವ್ಯವಹಾರ ಪ್ರಕರಣದಲ್ಲಿ ಬಂಧಿತರಾದವರಿಗೆ 10 ಲಕ್ಷ ರಿಯಾಲ್ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು.

ಬಂಧನಕ್ಕೊಳಗಾಗುವ ವಿದೇಶಿ ಪ್ರಜೆಗಳು ಮತ್ತು ಅವರಿಗೆ ಬೆಂಬಲ ನೀಡಿದ ಸ್ವದೇಶೀ ಪ್ರಜೆಗಳು ಕೂಡ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಇದಲ್ಲದೆ, ವಿದೇಶಿಯರನ್ನು ಗಡೀಪಾರು ಮಾಡಲಾಗುವುದು ಮತ್ತು ಸ್ವದೇಶಿಗೆ ಆ ವಲಯದಲ್ಲಿನ ವ್ಯವಹಾರಗಳಿಗೆ ನಿಷೇಧ ಹೇರಲಾಗುವುದು.

ಬೇನಾಮಿ ಪ್ರಕರಣದ ಅರೋಪಿಗಳಿಗೆ 2017 ಮತ್ತು 2018 ರಲ್ಲಿ ವಿವಿಧ ನ್ಯಾಯಾಲಯಗಳು 10.5 ಮಿಲಿಯನ್ ರಿಯಾಲ್ ಗಳನ್ನು ದಂಡವಾಗಿ ವಿಧಿಸಿದೆ.

error: Content is protected !! Not allowed copy content from janadhvani.com