janadhvani

Kannada Online News Paper

ಬಿಜೆಪಿಯಲ್ಲಿ ಕಿತ್ತಾಟ: ಆಪರೇಷನ್ ಕಮಲಕ್ಕೆ ಬ್ರೇಕ್

ಬೆಂಗಳೂರು (ಫೆ.13): ರಾಜ್ಯದಲ್ಲಿ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿಗೆ ಈಗ ತೀವ್ರ ಹಿನ್ನಡೆಯಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಯೋಜನೆಯನ್ನು ಸದ್ಯಕ್ಕೆ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಸದ್ಯ, ಬಿಜೆಪಿಯಲ್ಲೇ ಕಿತ್ತಾಟ ಶುರುವಾಗಿದೆ. ಇದರ ಜೊತೆಗೆ, ಯಡಿಯೂರಪ್ಪ, ಶಿವನಗೌಡ ನಾಯಕ್ ವಿರುದ್ಧ ಮೈತ್ರಿ ಸರ್ಕಾರದ ನಾಯಕರು ಆಡಿಯೋ ಬಾಂಬ್ ಸಿಡಿಸಿದ್ದಾರೆ. ಈ ಮಧ್ಯೆ, ಬಿಜೆಪಿಯ ಪ್ರತಿ ಯೋಜನೆ ಕೂಡ ಸೋರಿಕೆ ಆಗುತ್ತಿದೆ ಎನ್ನಲಾಗಿದೆ. ಈ ವಿಚಾರವಾಗಿ ಬಿ.ಎಲ್. ಸಂತೋಷ್, ಅನಂತ್ ಕುಮಾರ್ ಹೆಗಡೆ, ವಿ. ಸೋಮಣ್ಣ ಸೇರಿದಂತೆ ಹಲವರ ವಿರುದ್ಧ ಯಡಿಯೂರಪ್ಪ ಸಿಟ್ಟಿಗೆದ್ದಿದ್ದಾರಂತೆ. ಹಾಗಾಗಿ, ಲೋಕಸಭೆ ಚುನಾವಣೆಯವರೆಗೆ ಆಪರೇಷನ್ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಆಪರೇಷನ್ ಕಮಲ ನಿಲ್ಲಿಸುವ ಬಗ್ಗೆ ಪಕ್ಷೇತರರು, ರೆಬೆಲ್ ಶಾಸಕರಿಗೆ ಯಡಿಯೂರಪ್ಪ ಸಂದೇಶ ರವಾನೆ ಮಾಡಿದ್ದಾರಂತೆ. ಯಡಿಯೂರಪ್ಪ ಅವರ ಈ ನಿರ್ಧಾರ ರೆಬೆಲ್ ಶಾಸಕರು ಹಾಗೂ ಪಕ್ಷೇತರರಿಗೆ ತೀವ್ರ ಬೇಸರ ಮೂಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಅತೃಪ್ತ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಬೆಂಗಳೂರಿಗೆ ಆಗಮಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಈಗಾಗಲೇ ರಮೇಶ್ ಜಾರಕಿಹೊಳಿ, ಪಕ್ಷೇತರ ಶಾಸಕ ಶಂಕರ್, ನಾಗೇಶ್ ರಾಜಧಾನಿಗೆ ಆಗಮಿಸಿದ್ದಾರೆ. ನಾಗೇಂದ್ರ, ಮಹೇಶ್ ಕಮಟಳ್ಳಿ, ಉಮೇಶ್ ಜಾದವ್ ಕೂಡ ಇಂದು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.

ಮುಂದಿನ ನಡೆ ಏನು?:

ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು ನಾಲ್ಕು ರೆಬೆಲ್ ಶಾಸಕರನ್ನು ವಜಾ ಮಾಡುವಂತೆ ಸ್ಪೀಕರ್ ರಮೇಶ್ ಕುಮಾರ್ಗೆ ಕೋರಿದ್ದಾರೆ. ಈಗ ಬಿಜೆಪಿ ಕೂಡ ಆಪರೇಷನ್ ಕಮಲ ಡ್ರಾಪ್ ಮಾಡಿರುವುದು ಅತೃಪ್ತರನ್ನು ಇಕ್ಕಟಿಗೆ ಸಿಲುಕಿಸಿದೆ. ಮುಂದಿನ ನಡೆಯ ಬಗ್ಗೆ ರೆಬೆಲ್ ಶಾಸಕರು ಚಿಂತಾಕ್ರಾಂತರಾಗಿದ್ದಾರೆ. ಅನಿವಾರ್ಯವಾಗಿ ಕಾಂಗ್ರೆಸ್ನಲ್ಲೇ ಉಳಿಯಲು ರೆಬೆಲ್ಸ್ ಚಿಂತನೆ ನಡೆಸಿದ್ದಾರೆ ಎಂಬುದು ಮೂಲಗಳ ಮಾಹಿತಿ.

ರಮೇಶ್-ಮಹೇಶ್ ತಡರಾತ್ರಿ ಭೇಟಿ:

ರಮೇಶ್ ಜಾರಕಿಹೊಳಿ ಅವರನ್ನು ಮಹೇಶ್ ಕುಮಟಹಳ್ಳಿ ತಡರಾತ್ರಿ ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಮುಂದಿನ ನಡೆ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ತಡರಾತ್ರಿವರೆಗೂ ಇಬ್ಬರೂ, ವಸಂತ ನಗರದಲ್ಲಿರುವ ಸರ್ಕಾರಿ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ.

error: Content is protected !! Not allowed copy content from janadhvani.com