janadhvani

Kannada Online News Paper

ಸಿಎಲ್ಪಿ ಸಭೆಗೆ ಗೈರು: ನಾಲ್ವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ನಿರ್ಧಾರ

ಬೆಂಗಳೂರು(ಫೆ. 08): ಇವತ್ತು ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಐವರು ಶಾಸಕರು ಗೈರಾಗಿದ್ದಾರೆ. ಇವರಲ್ಲಿ ನಾಲ್ವರು ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಬಿ. ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಅವರಿದ್ದಾರೆ.

ಈಗಲ್ಟರ್ ರೆಸಾರ್ಟ್ನಲ್ಲಿ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ನಾಪತ್ತೆಯಾಗಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರೂ ಈ ಸಭೆಗೆ ಬಂದಿಲ್ಲ. ಇವರನ್ನು ಬಿಟ್ಟು ಉಳಿದವರೆಲ್ಲರೂ ಸಿಎಲ್ಪಿ ಸಭೆಗೆ ಆಗಮಿಸಿದ್ದಾರೆಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇವತ್ತು ಗೈರಾಗಿದ್ದ ನಾಲ್ವರು ಅತೃಪ್ತ ಶಾಸಕರು ಕಳೆದ ತಿಂಗಳು ನಡೆದಿದ್ದ ಸಿಎಲ್ಪಿ ಸಭೆಗೂ ಬಂದಿರಲಿಲ್ಲ. ಈ ನಾಲ್ವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ವಿಪ್ ಉಲ್ಲಂಘನೆ ಹಾಗೂ ಪಕ್ಷಾಂತರ ಕಾಯ್ದೆ ಅನ್ವಯ ಇವರನ್ನು ಅನರ್ಹಗೊಳಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ, ಇವರು ಅನರ್ಹಗೊಂಡರೆ ಮುಂದಿನ 6 ವರ್ಷಗಳ ಕಾಲ ಚುನಾವಣೆ ಎದುರಿಸುವಂತಿಲ್ಲ.
ಇದೇ ವೇಳೆ, ಇನ್ನಷ್ಟು ಅತೃಪ್ತರು ಕೈಜಾರದಂತೆ ತಡೆಯಲು ಕಾಂಗ್ರೆಸ್ ಬೇರೊಂದು ಪ್ಲಾನ್ ಮಾಡಿದೆ. ಸಮ್ಮಿಶ್ರ ಸರಕಾರದ ಸಂಪುಟದಿಂದ ನಾಲ್ವರು ಹಿರಿಯ ಸಚಿವರ ಸ್ಥಾನಕ್ಕೆ ಹೊಸ ಮುಖಗಳಿಗೆ ಅವಕಾಶ ಕೊಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಮೂಲಗಳು ತಿಳಿಸಿರುವಂತೆ ಹಿರಿಯರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ ಮತ್ತು ಯುಟಿ ಖಾದರ್ ಅವರು ಸಚಿವ ತ್ಯಾಗ ಮಾಡಲಿದ್ದಾರೆ. ಇವರ ಬದಲು ಅತೃಪ್ತರ ಸಾಲಿನಲ್ಲಿರುವ ಹಾಗೂ ಅಸಮಾಧಾನಿತಗೊಂಡಿರುವ ಶಾಸಕರಾದ ಬಿ.ಸಿ. ಪಾಟೀಲ್, ಬಸನಗೌಡ ದದ್ದಲ್, ಅಜಯ್ ಸಿಂಗ್ ಮೊದಲಾದವರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಸಮಾಲೋಚನೆ ನಡೆಸಿ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

error: Content is protected !! Not allowed copy content from janadhvani.com