janadhvani

Kannada Online News Paper

ಬೆಂಗಳೂರು: ರಾಜ್ಯ ರಾಜಕೀಯ ಡೋಲಾಯಮಾನ ಪರಿಸ್ಥಿತಿಯಲ್ಲಿರುವಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರ್ಕಾರದ ಎರಡನೇ ಬಜೆಟ್ ಮಂಡಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ 2019-20ನೇ ಸಾಲಿನ ಬಜೆಟ್ ಮಂಡಿಸಿದ ಕುಮಾರಸ್ವಾಮಿ, ಕೃಷಿ, ಪಶುಸಂಗೋಪನೆ, ನೀರಾವರಿ, ಅಸಂಘಟಿತ ವಲಯಕ್ಕೆ ಆದ್ಯತೆ, ಮಠ ಮಂದಿರಗಳಿಗೂ ಕೋಟ್ಯಂತರ ರೂಪಾಯಿ ಅನುದಾನ ಪ್ರಕಟಿಸಿದ್ದಾರೆ.

ರೈತರ ಸಾಲ ಮನ್ನಾ, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಹಂಚಿಕೆ ಮಾಡಿದ್ದಾರೆ. ಆದರೆ, ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಉತ್ತರ ಕರ್ನಾಟಕವನ್ನು ಕಡೆಗಣಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರಕ್ಕೆ ಈ ಸಾಲಿನ ಮುಂಗಡ ಪತ್ರದಲ್ಲಿ 46 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದ್ದು, ಇದರಲ್ಲಿ ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಣೆ ಹಾಕಲಾಗಿದೆ.

ಒಟ್ಟಾರೆ, 2 34 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅತಿ ಮುಖ್ಯ ಎನ್ನಿಸಿಕೊಂಡ ಸಾಲ ಮನ್ನಾ ಯೋಜನೆಗೆ ಈ ಸಾಲಿನ ಮುಂಗಡ ಪತ್ರದಲ್ಲಿ 12,650 ಕೋಟಿ ರೂ. ನಿಗದಿಪಡಿಸಲಾಗಿದೆ. ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ ಇದೇ ಜೂನ್‍ ಒಳಗೆ ಪೂರ್ಣವಾಗಲಿದ್ದು, ವಾಣಿಜ್ಯ ಬ್ಯಾಂಕುಗಳ ಸಾಲ ಯೋಜನೆ 2019-20ನೇ ಸಾಲಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ.

ಅನ್ನದಾತನ ಬದುಕಿಗೆ ಹೊಸ ಕಾಯಕಲ್ಪ ಕಲ್ಪಿಸಲು ‘ರೈತಸಿರಿ’ ಎಂಬ ಹೊಸ ಯೋಜನೆ, ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಳ, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ‘ರೈತ ಕಣಜ’ ಎಂಬ ಹೊಸ ಯೋಜನೆ ಪ್ರಕಟಿಸಿ ಇದಕ್ಕೆ 510 ಕೋಟಿ ರೂ. ಅನುದಾನ ನಿಗದಿ ಮಾಡಿದ್ದಾರೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಅಭರಣಗಳ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ‘ಗೃಹ ಲಕ್ಷ್ಮಿ’ ಎಂಬ ಹೊಸ ಬೆಳೆ ಸಾಲ ಯೋಜನೆ, ರೇಷ್ಮೆ ಕೃಷಿ ವಿಸ್ತರಣಾ ಕಾರ್ಯಕ್ರಮಕ್ಕೆ 2 ಕೋಟಿರೂ ಅನುದಾನ ಪ್ರಕಟಿಸಿದ್ದಾರೆ.

ಖಾಸಗಿ ಲೇವಾ ದೇವಿದಾರರು ರೈತರನ್ನು ಸುಲಿಗೆ ಮಾಡುವುದನ್ನು ತಪ್ಪಿಸಲು ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ‘ಸಾಲ ಪರಿಹಾರ ಆಯೋಗ’ ಸ್ಥಾಪಿಸುವ ಜೊತೆಗೆ, ಬಾಕಿ ಇರುವ ಹಾಗೂ ಹಾಲಿ ನೀರಾವರಿ ಯೋಜನೆಗಳ ಜಾರಿಗಾಗಿ ಜಲ ಸಂಪನ್ಮೂಲ ಇಲಾಖೆಗೆ 17 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.

ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ 60 ಕೋಟಿ ರೂ. ಕಾರವಾರದಲ್ಲಿ ಆಸ್ಪತ್ರೆ ಸ್ಥಾಪನೆಗೆ 150 ಕೋಟಿ ರೂ. ಕೊಡಗು, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಆವರಣದಲ್ಲಿ ಆಸ್ಪತ್ರೆಗೆ ಸ್ಥಾಪನೆಗೆ 100 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಪ್ರಾಥಮಿಕ ಶಿಕ್ಷಣದ ಸುಧಾರಣೆಗಾಗಿ 1,500 ಶಾಲಾ ಕೊಠಡಿ ನಿರ್ಮಾಣ, 5000 ಶಾಲಾ ಕೊಠಡಿಗಳ ಉನ್ನತೀಕರಣ, ಮುಂದಿನ ನಾಲ್ಕು ವರ್ಷಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಒಟ್ಟು 1 ಸಾವಿರ ರಾಜ್ಯ ಪಬ್ಲಿಕ್ ಶಾಲೆಗಳ ಸ್ಥಾಪನೆ, ಎಸ್ಎಸ್ಎಲ್ ಸಿ ಮೌಲ್ಯಮಾಪನ ಕೇಂದ್ರಗಳ ಡಿಜಿಟಲೀಕರಣ, ಉನ್ನತ ಶಿಕ್ಷಣದಲ್ಲಿ ಹೊಸ ಕಲಿಕಾ ವಿಧಾನ ಅಳವಡಿಕೆಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಹೊಸ ಪೀಳಿಗೆ ಉನ್ನತ ಶಿಕ್ಷಣ ಕೇಂದ್ರ ಸ್ಥಾಪನೆ, ಎಸ್‍ಎಸ್ ಎಲ್‍ಸಿ ಮೌಲ್ಯಮಾಪನ ಡಿಜಟೀಲೀಕರಣ, ‘ಗುರುಚೇತನ’ ಎಂಬ ಕಾರ್ಯಕ್ರಮಗಳ ಅಡಿಯಲ್ಲಿ 1 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಿ ಉತ್ತಮ ಶಿಕ್ಷಣ ನೀಡಲು ಸಜ್ಜುಗೊಳಿಸುವ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.

ರಕ್ತ ಸಂಗ್ರಹಣೆ, ಶೇಖರಣೆ ಮತ್ತು ವಿತರಣೆಗಾಗಿ ನಾಲ್ಕು ವಿಭಾಗೀಯ ಮಾದರೀ ರಕ್ತನಿಧಿ ಕೇಂದ್ರಗಳ ಸ್ಥಾಪನೆಗೆ 2019-20ನೇ ಸಾಲಿನ ಬಜೆಟ್ ನಲ್ಲಿ 10 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ 500 ರೂ. ಸಹಾಯಕರಿಗೆ 250 ರೂ. ಗೌರವಧನ ಹೆಚ್ಚಳಕ್ಕಾಗಿ 60 ಕೋಟಿ ರೂ. ಅನುದಾನ ನಿಗದಿಗೊಳಿಸಲಾಗಿದೆ. ಮಾತೃಶ್ರೀ ಯೋಜನೆಯ ಸಹಾಯಧನಮಾಸಿಕ 1 ಸಾವಿರ ರೂ. ಗಳಿಂದ 2 ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ. ಆದರೆ, ಇದು ಜಾರಿಗೆ ಬರುವುದು ಮುಂದಿನ ನವೆಂಬರ್ 1ರಿಂದಲೇ ಎಂಬುದು ಗಮನಿಸಬೇಕಾದ ಅಂಶ.

ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಒಟ್ಟು 41 ಕೋಟಿ ರೂ. ಮೀಸಲಿಡಲಾಗಿದೆ. ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾತಸಿ ತಾಣವನ್ನಾಗಿ ಹಾಗೂ ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

2019-20ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ 4 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಬೆಂಗಳೂರು ನಗರದಲ್ಲಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುವಂತೆ ‘ಸಾರಥಿಯ ಸೂರು’ , ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗಾಗಿ ‘ಶ್ರಮಿಕ ಸೌರಭ ‘ ಎಂಬ ಯೋಜನೆಯನ್ನು ಪ್ರಕಟಿಸಿದ್ದಾರೆ. ರೈತರಿಗೆ ಗುಣಮಟ್ಟದ ವಿದ್ಯುತ್‍ ಪೂರೈಸಲು ಅನುಕೂಲವಾಗುವಂತೆ 40 ಸಾವಿರ ಹೊಸ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗುವುದು ಮತ್ತು ಹಗಲು ವೇಳೆ ಹೆಚ್ಚಿನ ವಿದ್ಯುತ್ ಪೂರೈಕೆ, ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್ ಸೆಟ್‍, ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಸಹಾಯಧನವನ್ನು 11, 250 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯ ಹುಟ್ಟೂರಾದ ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವ ದರ್ಜೆಯ ಸಾಂಸ್ಕೃತಿಕ ಪಾರಂಪರಿಕ ಕೇಂದ್ರವನ್ನು 25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ , ಜಾನಪದ ಕಲಾವಿದರು ಮತ್ತು ಕಲೆಗೆ ಉತ್ತೇಜನ ನೀಡಲು ಈ ಹಿಂದೆ ಆರಂಭಿಸಲಾಗಿದ್ದ ಜಾನಪದ ಜಾತ್ರೆ ಕಾರ್ಯಕ್ರಮದ ಮರು ಚಾಲನೆ ನೀಡುವುದಾಗಿ ಬಜೆಟ್ ಭಾಷಣದಲ್ಲಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ರಾಜ್ಯದ ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 1, 525 ಕೋಟಿ ರೂ. ವೆಚ್ಚದಲ್ಲಿ ‘ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ’ ಪ್ರಕಟಿಸಲಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಒಟ್ಟಾರೆ ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ಅದರ ಪ್ರಕಾರ, ಹಾರೋಹಳ್ಳಿ, ಚೇಳೂರು, ತೇರದಾಳ ಹಾಗೂ ಕಳಸ ಹೊಸ ತಾಲೂಕುಗಳಾಗಿ ಮಾರ್ಪಡಲಿವೆ. ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ, ಕೊಡಗು ಜಿಲ್ಲೆಗಳಲ್ಲಿ ಡ್ರೋನ್‍ ಮೂಲಕ ಮರು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನಲ್ಲಿ ರಾಜ್ಯದ ವಿವಿಧ ಮಠಗಳು, ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ. ನಿಗದಿ ಮಾಡಲಾಗಿದೆ.

ಪರಿಶಿಷ್ಟರ ಜಾತಿ, ಪಂಗಡಗಳ ಅಭಿವೃದ್ಧಿಗೆ ವಿಶೇಷ ಉಪ ಯೋಜನೆಯಡಿ 29 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಹಿರಿಯ ನಾಗರಿಕರ ಮಾಶಾಸವನ್ನು 600 ರೂ.ಗಳಿಂದ 1 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಆಯುಷ್ಮಾನ್‍ ಭಾರತ್‍-ಆರೋಗ್ಯ ಕರ್ನಾಟಕ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 950 ಕೋಟಿ ರೂ. ನಿಗದಿಪಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ನಿವಾರಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಅಬಕಾರಿ ಸುಂಕ ಹೆಚ್ಚಳ
ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಕಡಿಮೆ ಆಲ್ಕೋಹಾಲ್ ಅಂಶಗಳಿರುವ ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಅಬಕಾರಿ ವಲಯದಲ್ಲಿ 2019 – 20 ನೇ ಸಾಲಿನಲ್ಲಿ ಒಟ್ಟು 20,950 ಕೋಟಿ ರೂ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈ ಗುರಿ ಸರ್ವಕಾಲಿಕ ದಾಖಲೆಯಾಗಿದೆ. ರೈತರ ಸಾಲ ಮನ್ನಾ ಮತ್ತಿತರ ವಲಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಅಬಕಾರಿ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.
ಸಾರಿಗೆ ವಲಯದಲ್ಲಿ ಈ ವರ್ಷ 7100 ಕೋಟಿ ರೂ, ನೋಂದಣಿ ಮತ್ತು ಮುದ್ರಾಂಕದಲ್ಲಿ 11, 828 ಕೋಟಿ ರೂ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 76,046 ಕೋಟಿ ರೂ ಸಂಪನ್ಮೂಲ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ. ಅಡಿ ರಾಜಸ್ವ ಅಂತರ ಸರಿದೂಗದಿದ್ದರೆ ರಾಜ್ಯಗಳಿಗೆ ಪರಿಹಾರ ಕಾಯ್ದೆಯಡಿ ನಿಗದಿಪಡಿಸಿದಂತೆ ಸಾಕಷ್ಟು ಪರಿಹಾರವನ್ನು 2025ನೇ ಸಾಲಿನವರೆಗೂ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಒತ್ತಾಯಿಸಿದ್ದಾರೆ.
ಬೆಂಗಳೂರಿಗೆ ಭರಪೂರ ಕೊಡುಗೆ
ಬೆಂಗಳೂರಿನ ಚಲನಶೀಲತೆಗಾಗಿ ಸಮಗ್ರ ಯೋಜನೆ ಜಾರಿ,. ಸಾರ್ವಜನಿಕ ಸಾರಿಗೆ ಮತ್ತು ಸುಸ್ಥಿರತೆಗೆ ಆದ್ಯತೆ, ಬಿಎಂಟಿಸಿಗೆ ಬಸ್ ಸಂಖ್ಯೆ ಹೆಚ್ಚಳ, ಕನಿಷ್ಠ 50 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿಗೆ ಯೋಜನೆ, ಇದಕ್ಕಾಗಿ 50 ಕೋಟಿ ರೂ. ಅನುದಾನ ಮೀಸಲಿಡುವುದಾಗಿ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.
ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2,300 ಕೋಟಿ ರೂ. ಅನುದಾನ, ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1,000 ಕೋಟಿ ರೂ. 5 ಲಕ್ಷ ಬೀದಿ ದೀಪಗಳನ್ನು ಎಲ್‍ಇಡಿ ದೀಪಗಳಾಗಿ ಪರಿವರ್ತನೆ, .195 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್ ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ, ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣ, 23,093 ಕೋಟಿ ರೂ. ಅಂದಾಜು ಮೊತ್ತದ ಬೆಂಗಳೂರು ಉಪ ನಗರ ರೈಲು ಸೇವೆ ಯೋಜನೆಗೆ ಚಾಲನೆ ನೀಡುವ ಯೋಜನೆಯನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
3 ಕೋಚ್‍ಗಳಿರುವ ಎಲ್ಲಾ 50 ಮೆಟ್ರೋ ರೈಲುಗಳನ್ನು 6 ಕೋಚ್‍ಗಳ ರೈಲುಗಳಾಗಿ ಪರಿವರ್ತನೆ, ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರಂ ಮತ್ತು ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ – ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕೆ 16,579 ಕೋಟಿ ರೂ. ಅನುದಾನ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ 17,200 ಕೋಟಿ ರೂ. ವೆಚ್ಚದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2019-20ನೇ ಸಾಲಿಗೆ 1,000 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

error: Content is protected !! Not allowed copy content from janadhvani.com