janadhvani

Kannada Online News Paper

ಲೋಕಸಭಾ ಚುನಾವಣಾ ಸಮೀಕ್ಷೆ- ಮೋದಿ ಪಾಲಿಗೆ ಅಗ್ನಿ ಪರೀಕ್ಷೆ

ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮಹಾಘಟಬಂಧನ್, ಎಸ್‍ಪಿ-ಬಿಎಸ್‍ಪಿ ಮೈತ್ರಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾತನಾಡುತ್ತಿರಬಹುದು. ಚುನಾವಣಾ ಪೂರ್ವ ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾದಿ ಸುಲಭವಲ್ಲ. ಇವತ್ತು ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಅದರಲ್ಲಿ ಮೋದಿ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ ಎಂಬ ಸೂಚನೆ ಸಿಕ್ಕಿದೆ.

ಮೋದಿ ವಿರೋಧಿಗಳು ಕೈ ಜೋಡಿಸಿದ್ರೆ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಆಗಲಿದೆ. ಅದರಲ್ಲೂ ಸಿ ವೋಟರ್ ಸರ್ವೇ ಪ್ರಕಾರ, ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮಹಾ ಮೈತ್ರಿಯಿಂದ ಬಿಜೆಪಿ ಭಾರೀ ಮುಖಭಂಗ ಅನುಭವಿಸಲಿದೆ. ಕರ್ನಾಟಕದಲ್ಲಿ ದೋಸ್ತಿ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‍ಮೇಕರ್ ಆಗಲಿವೆ. ಇತರೆ ಪಕ್ಷಗಳು 143 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕೇಂದ್ರದ ಅಧಿಕಾರದ ಗದ್ದುಗೆಗೆ ಏರುವವರು ಯಾರು ಎಂಬುದನ್ನು ಈ ಬಾರಿ ನಿರ್ಧರಿಸಲಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 233, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 167 ಸ್ಥಾನಗಳಲ್ಲಿ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ.ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ ಬೇಕಾದ 273 ಸ್ಥಾನಗಳನ್ನು ಯಾವೊಂದು ಮೈತ್ರಿಕೂಟವೂ ಈ ಬಾರಿ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಪಕ್ಷ 266 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಇಬ್ಬರು ನಾಮನಿರ್ದೇಶಿತ ಸದಸ್ಯರೂ ಸೇರಿದಂತೆ ಕಳೆದ ಬಾರಿ ಎನ್‍ಡಿಎ ಮೈತ್ರಿಕೂಟದ ಒಟ್ಟು ಸದಸ್ಯರ ಸಂಖ್ಯೆ 305. ಆದರೆ, ಈ ಬಾರಿ ಎನ್‍ಡಿಎ ಬಲ 233ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

ಕರ್ನಾಟಕದಲ್ಲಿ ಯಾರಿಗೆ ಸಿಗಲಿದೆ ಗೆಲುವು: ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಕರ್ನಾಟಕ ಹೊಂದಿದೆ. ಇವುಗಳಲ್ಲಿ ಬಿಜೆಪಿ-14, ಕಾಂಗ್ರೆಸ್-11 ಮತ್ತು ಜೆಡಿಎಸ್-3 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ಸಿ ವೋಟರ್ ಸಮೀಕ್ಷೆ ಹೇಳಿದೆ.

ಸಿ ವೋಟರ್ ಚುನಾವವಣಾ ಪೂರ್ವ ಸಮೀಕ್ಷೆ:

ಕರ್ನಾಟಕ: ಒಟ್ಟು ಸ್ಥಾನ – 28, ಬಿಜೆಪಿ-14, ಕಾಂಗ್ರೆಸ್-11, ಜೆಡಿಎಸ್- 03

ಉತ್ತರ ಪ್ರದೇಶ: ಒಟ್ಟು ಸ್ಥಾನ – 80, ಎಸ್‍ಪಿ-ಬಿಎಸ್‍ಪಿ 51, ಬಿಜೆಪಿ 25, ಕಾಂಗ್ರೆಸ್ 04
ಆಂಧ್ರ ಪ್ರದೇಶ: ಒಟ್ಟು ಸ್ಥಾನ 25, ವೈಎಸ್‍ಆರ್‍ಸಿಪಿ -19, ಟಿಡಿಪಿ-06
ಬಿಹಾರ: ಒಟ್ಟು ಸ್ಥಾನ – 40, ಎನ್‍ಡಿಎ -35, ಯುಪಿಎ-05
ಮಹಾರಾಷ್ಟ್ರ: ಒಟ್ಟು ಸ್ಥಾನ – 48, ಎನ್‍ಡಿಎ -20, ಯುಪಿಎ-28
ದೆಹಲಿ: ಒಟ್ಟು ಸ್ಥಾನ 07- ಬಿಜೆಪಿ-07, ಕಾಂಗ್ರೆಸ್ – 00
ಪಶ್ಚಿಮ ಬಂಗಾಳ: ಒಟ್ಟು ಸ್ಥಾನ 42, ಟಿಎಂಸಿ-34, ಬಿಜೆಪಿ 07, ಕಾಂಗ್ರೆಸ್-01
ಒಡಿಶಾ: ಒಟ್ಟು ಸ್ಥಾನ -21, ಎನ್‍ಡಿಎ 12, ಇತರರು – 09
ಮಧ್ಯಪ್ರದೇಶ: ಒಟ್ಟು ಸ್ಥಾನ -29, ಎನ್‍ಡಿಎ-23, ಯುಪಿಎ-06
ತಮಿಳುನಾಡು: ಒಟ್ಟು ಸ್ಥಾನ -39, ಬಿಜೆಪಿ -0, ಡಿಎಂಕೆ+ -39, ಎಐಎಡಿಎಂಕೆ -0
ಹರಿಯಾಣ: ಒಟ್ಟು ಸ್ಥಾನ -10, ಬಿಜೆಪಿ 07, ಕಾಂಗ್ರೆಸ್ -03

ಇಂಡಿಯಾ ಟುಡೇ ಸರ್ವೇ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗಂಡಾಂತರ ಎದುರಾಗಲಿದೆ ಅನ್ನೋದು ಇಂಡಿಯಾ ಟುಡೇ-ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದರ ಪ್ರಕಾರ ಯಾವ ಮೈತ್ರಿ ಕೂಟಕ್ಕೆ ಎಷ್ಟೆಷ್ಟು ಸ್ಥಾನ ಅಂಕಿ ಅಂಶ ಈ ಕೆಳಗಿನಂತಿದೆ.

1. ಲೋಕಸಭೆ ಒಟ್ಟು ಸ್ಥಾನ -543, ಎನ್‍ಡಿಎ – 237 (-86), ಯುಪಿಎ-166 (+60), ಇತರರು 140 (-13)ಒಂದು ವೇಳೆ, ಯುಪಿಎ ಜೊತೆ ಟಿಎಂಸಿ, ಎಸ್‍ಪಿ, ಬಿಎಸ್‍ಪಿ ಕೈ ಜೋಡಿಸಿದ್ರೆ ಈ ಫಲಿತಾಂಶ ಬದಲಾಗಲಿದೆ.

2. ಲೋಕಸಭೆ ಒಟ್ಟು ಸ್ಥಾನ – 543, ಎನ್‍ಡಿಎ – 219, ಯುಪಿಎ-269, ಇತರರು 55 (ಅಧಿಕಾರದ ಸನಿಹಕ್ಕೆ ಯುಪಿಎ ಬರಲಿದೆ)

ಉತ್ತರ ಪ್ರದೇಶ – ಒಟ್ಟು ಸ್ಥಾನ-80, ಎಸ್‍ಪಿ-ಬಿಎಸ್‍ಪಿ -58, ಬಿಜೆಪಿ – 18, ಕಾಂಗ್ರೆಸ್ – 04

error: Content is protected !! Not allowed copy content from janadhvani.com