ಪುತ್ತೂರು: ಸಾರ್ವಜನಿಕ ಸೇವೆಯಲ್ಲಿರುವವರು ಸಾರ್ವಜನಿಕರೊಂದಿಗೆ ಗೌರವದಿಂದ ವರ್ತಿಸಬೇಕು ಎಂಬುದು ಕನಿಷ್ಠ ನಿಯಮ. ಆದರೆ, ಧರ್ಮ ಮತ್ತು ವಸ್ತ್ರಧಾರಣೆಯನ್ನು ನೋಡಿ ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ಅಳೆಯುವ ಕೆಟ್ಟ ಪ್ರವೃತ್ತಿ ಸಾರ್ವಜನಿಕ ವಲಯದಲ್ಲಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಉಪ್ಪಿನಂಗಡಿ-ಪುತ್ತೂರು ಬಸ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ.
ಘಟನೆಯ ವಿವರ:
ಇತ್ತೀಚೆಗೆ ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳುವ ಸರಕಾರಿ ಬಸ್ (KA-19-F-3151) ಏರಿದ್ದ ಶಿಕ್ಷಕಿ ತನ್ಸೀರಾ ಆತೂರು ಅವರಿಗೆ ಉಂಟಾದ ಕಹಿ ಅನುಭವದ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಬಸ್‌ಗಾಗಿ ಕಾಯುತ್ತಿದ್ದ ಅವರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳೊಂದಿಗೆ ಅನಿವಾರ್ಯವಾಗಿ ಕಿಕ್ಕಿರಿದು ತುಂಬಿದ್ದ ಬಸ್ ಏರಿದ್ದರು. ಕೈಯಲ್ಲಿ ಬ್ಯಾಗುಗಳು, ಮಡಿಲಲ್ಲಿ ಸಣ್ಣ ಮಗು – ನಿಲ್ಲಲೂ ಜಾಗವಿಲ್ಲದ ಆ ಗೊಂದಲದ ಪರಿಸ್ಥಿತಿಯಲ್ಲಿ ಟಿಕೆಟ್ ಪಡೆಯಲು ಮುಂದಾದಾಗ ಅಹಿತಕರ ಘಟನೆ ನಡೆದಿದೆ.
“ನಿಮ್ಮವರೇ ಹೀಗೆ” ಎಂಬ ಮಾತಿನ ಆಘಾತ:
ಮೂವರು ಪ್ರಯಾಣಿಕರ ಆಧಾರ್ ಕಾರ್ಡ್‌ಗಳನ್ನು ಒಬ್ಬರೇ ಹಿಡಿದು ಹಣ ನೀಡಿದ ಸಂದರ್ಭದಲ್ಲಿ ನಿರ್ವಾಹಕರು ವರ್ತಿಸಿದ ರೀತಿ ಅಮಾನವೀಯವಾಗಿತ್ತು. “ಆಧಾರ್ ಕಾರ್ಡ್ ಅವರವರ ಕೈಯಲ್ಲೇ ಕೊಡಿ” ಎಂದು ಶಾಂತವಾಗಿ ಹೇಳುವ ಬದಲು, ನಿರ್ವಾಹಕರು “ನಿಮ್ಮವರೇ ಹೀಗೆ” ಎಂದು ಗದರಿಸಿದ್ದಾರೆ. ಅಷ್ಟೊಂದು ಜನರ ಮಧ್ಯೆ “ಮುಂದೆ ಹೋಗು” ಎಂದು ಅರಚಾಡುತ್ತಾ ಹೀಯಾಳಿಸಿದ ರೀತಿ, ಮಹಿಳೆಯರ ಆತ್ಮಗೌರವಕ್ಕೆ ಪೆಟ್ಟು ನೀಡಿದೆ.
ಶಿಕ್ಷಕಿಯ ಪ್ರಶ್ನೆ:
ಈ ಬಗ್ಗೆ ಮನನೊಂದ ತನ್ಸೀರಾ ಅವರು, “ಆ ‘ನಿಮ್ಮವರು’ ಅಂದರೆ ಯಾರು? ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರೇ? ಅಥವಾ ಮಕ್ಕಳನ್ನು ಮಡಿಲಲ್ಲಿ ಹಿಡಿದು ಪ್ರಯಾಣಿಸುವ ತಾಯಂದಿರೇ?” ಎಂದು ಪ್ರಶ್ನಿಸಿದ್ದಾರೆ. “ನಾನು ಒಬ್ಬ ಶಿಕ್ಷಕಿಯಾಗಿ ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲಾ ಧರ್ಮದವರೂ ಒಂದೇ ಎಂದು ಸಮಾನತೆಯ ಪಾಠ ಮಾಡುತ್ತೇನೆ. ಆದರೆ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯೊಬ್ಬ ವಸ್ತ್ರ ಮತ್ತು ಧರ್ಮದ ಆಧಾರದ ಮೇಲೆ ಮಾಡುವ ಇಂತಹ ಬೇಧಭಾವಗಳು ನಾವು ಕಲಿಸುವ ಮೌಲ್ಯಗಳನ್ನೇ ಪ್ರಶ್ನಿಸುವಂತೆ ಮಾಡುತ್ತವೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗೌರವಕ್ಕೆ ಬೆಲೆ ಇಲ್ಲವೇ?
ಕೇವಲ ವರ್ತನೆಯಷ್ಟೇ ಅಲ್ಲದೆ, ಹಣದ ವ್ಯವಹಾರದಲ್ಲೂ ಅಸಮಾಧಾನ ವ್ಯಕ್ತವಾಗಿದೆ. 20 ರೂಪಾಯಿ ನೀಡಿದಾಗ ಉಳಿದ 2 ರೂಪಾಯಿ ಚಿಲ್ಲರೆಯನ್ನು ನಿರ್ವಾಹಕರು ವಾಪಸ್ ನೀಡಿಲ್ಲ. “ಇಲ್ಲಿ ಪ್ರಶ್ನೆ ಎರಡು ರೂಪಾಯಿಯದ್ದಲ್ಲ, ಬದಲಾಗಿ ಪ್ರಯಾಣಿಕರಿಗೆ ನೀಡಬೇಕಾದ ಕನಿಷ್ಠ ಗೌರವದ ಬಗ್ಗೆ. ಬಸ್ ಚಿಲ್ಲರೆ ಇಲ್ಲದಿರಬಹುದು, ಆದರೆ ಪ್ರಯಾಣಿಕರ ಗೌರವಕ್ಕೂ ಚೇಂಜ್ (ಬದಲಾವಣೆ) ಇಲ್ಲವೇ?” ಎಂಬುದು ಅವರ ಆಕ್ರೋಶದ ನುಡಿ.
ಕೆಲವು ಚಾಲಕರು ಮತ್ತು ನಿರ್ವಾಹಕರು ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಾರೆ, ಅಂತಹವರಿಂದಲೇ ಇಲಾಖೆಯ ಮೇಲೆ ನಂಬಿಕೆ ಉಳಿದಿದೆ. ಆದರೆ, ಇಂತಹ ಕೆಲವರಿಂದ ಇಡೀ ಇಲಾಖೆಗೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತಿದೆ. ಕೆಎಸ್ಆರ್‌ಟಿಸಿ ಅಧಿಕಾರಿಗಳು ಇಂತಹ ವರ್ತನೆಗಳ ಬಗ್ಗೆ ಗಮನಹರಿಸಿ, ಸಿಬ್ಬಂದಿಗಳಿಗೆ ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಪಾಠವನ್ನು ಕಲಿಸಬೇಕಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ