janadhvani

Kannada Online News Paper

ಕಳಪೆ ಕಾಮಗಾರಿ: ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಬಿರುಕು- ವಾಹನ ಸವಾರರಲ್ಲಿ ಆತಂಕ

ಮಂಗಳೂರು: ದಶಕದ ಹಿಂದೆ ಕಾಮಗಾರಿ ಆರಂಭಿಸಿ ಕಳೆದ ಜ.31ರಂದು ಸಂಚಾರಮುಕ್ತ ಗೊಂಡಿದ್ದ ಪಂಪ್‌ವೆಲ್‌ ಫ್ಲೈಓವರ್ ನ ಮಧ್ಯಭಾಗದ ಎರಡು ರಸ್ತೆ ಹಾಗೂ ತಡೆಗೋಡೆ ಉದ್ದಕ್ಕೆ ಬಿರುಕು ಬಿಟ್ಟಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು-ಉಡುಪಿ ರಸ್ತೆಯ ಪಂಪ್‌ವೆಲ್‌ ಮೇಲ್ಸೇತುವೆಯು 600 ಮೀ. ಉದ್ದ ಹಾಗೂ 20 ಮೀ. ಅಗಲವಿರುವ ಈ ಫ್ಲೈಓವರ್‌ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ನಿರ್ಮಾಣವಾಗಿದೆ. ಇಷ್ಟು ಉದ್ದದ ಮೇಲ್ಸೇತುವೆ 10 ವರ್ಷಗಳಿಂದ ಕುಂಟುತ್ತಾ ಸಾಗಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ತಿಂಗಳಲ್ಲೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗಿತ್ತು. ಎರಡು ಕಡೆಗಳಿಂದಲೂ ಕಾಂಕ್ರೀಟ್‌ ಪ್ಯಾನೆಲ್‌ಗಳನ್ನು ಒಂದರ ಮೇಲೆ ಒಂದರಂತೆ ಸುಮಾರು 4.5 ಮೀ. ಎತ್ತರಕ್ಕೆ ಜೋಡಿಸಿ, ಪ್ಯಾನೆಲ್‌ಗಳ ಹಿಂದಿರುವ ಹುಕ್‌ಗಳಿಗೆ 7 ಮೀ. ಪ್ಲಾಸ್ಟಿಕ್‌ ರೋಪ್‌ ಮಾದರಿಯ ಶೀಟ್‌ಗಳನ್ನು ಹಾಸಿ ಅದರ ಮೇಲೆ ಮಣ್ಣು ಹಾಕಲಾಗಿದೆ. ಫ್ಲೈ ಓವರ್‌ನ ಎರಡು ಬದಿಯಲ್ಲೂ ಪ್ಯಾನೆಲ್‌ನ 1 ಅಡಿ ಗ್ಯಾಪ್‌ಗೆ ಜಲ್ಲಿಕಲ್ಲುಗಳನ್ನು ಹಾಕಿ ಫಿಲ್‌ ಮಾಡಲಾಗಿದ್ದು, ಅದರ ಮೇಲೆ ಕಾಂಕ್ರೀಟ್‌ ಫಿನಿಶಿಂಗ್‌ ಮಾಡಲಾಗಿದೆ. ಈ ಎಲ್ಲ ಕಾಮಗಾರಿಗಳು ಕೇವಲ 3 ತಿಂಗಳ ಅಂತರದಲ್ಲಿ ನಡೆದಿದ್ದು, ಆಗಲೇ ಎಲ್ಲರ ಅನುಮಾನಕ್ಕೆ ಕಾರಣವಾಗಿತ್ತು.

ಪಂಪ್‌ವೆಲ್‌ ಫ್ಲೈಓವರ್‌ ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಕೇವಲ 2 ತಿಂಗಳಲ್ಲಿ ಟಿಪ್ಪರ್‌ಗಳಲ್ಲಿ ಲೋಡ್‌ಗಟ್ಟಲೆ ಮಣ್ಣು ತಂದು ಸುರಿಯಲಾಗಿತ್ತು. ಇದನ್ನು ನೀರು ಹಾಕಿ ಹದ ಮಾಡುವ ಅಥವಾ ರೋಲರ್‌ ಬಳಸಿ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆ ನಡೆದಿರಲೇ ಇಲ್ಲ. ಇದೇ ರೀತಿ ಸುಮಾರು 4.5 ಮೀ.ನಷ್ಟು ಮಣ್ಣನ್ನು ಸುರಿದು ಕೋಟೆಯಂತೆ ತುಂಬಿಸಲಾಗಿತ್ತು. ಈ ರೀತಿ ಮಣ್ಣು ಹಾಕಿದ್ದರಿಂದಲೇ ಈಗ ಮೇಲ್ಸೇತುವೆ ಮೇಲ್ಭಾಗದಲ್ಲಿ ಬಿರುಕು ಬಿದ್ದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಅದಕ್ಕೆ ಗುಣಮಟ್ಟದ ಮಾನದಂಡವಿದ್ದು, ಅದೆಲ್ಲವೂ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿಯಲ್ಲಿ ಉಲ್ಲಂಘನೆಯಾಗಿದೆ. ಸರ್ವಿಸ್‌ ರಸ್ತೆಗಳ ನಿರ್ಮಾಣ, ಹೆದ್ದಾರಿ ಜೋಡಣೆ ಪ್ರಮುಖ ರಸ್ತೆಗಳ ಬಗ್ಗೆಯೂ ಕಾಂಟ್ರ್ಯಾಕ್ಟ್ ದಾರರು ಗಮನಹರಿಸಿದಂತಿಲ್ಲ. ಈ ಫ್ಲೈ ಓವರ್‌ ಕಳಪೆಯಾಗಿರುವ ಬಗ್ಗೆ ಹಿರಿಯ ವಕೀಲರಾದ ದಯಾನಾಥ್‌ ಕೋಟ್ಯಾನ್‌ ಆಕ್ಷೇಪ ಮಾಡಿದ್ದರು.

ಪಂಪ್‌ವೆಲ್‌ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಆಧಾರದಲ್ಲಿ ಆಗಿಲ್ಲ. ಈ ಬಗ್ಗೆ ನಾವು ಹಂತಹಂತವಾಗಿ ಆಕ್ಷೇಪ ಮಾಡುತ್ತಿದ್ದೆವು. ನಾವು ಈ ಬಗ್ಗೆ ಮೇಲ್ಸೇತುವೆ ಎಂಜಿನಿಯರ್‌ಗಳಲ್ಲಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಸರಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಈಗ ಮೇಲ್ಸೇತುವೆ ಬಿರುಕು ಬಿಟ್ಟಿರುವುದು ನಮ್ಮ ಆಪಾದನೆಗೆ ಪುಷ್ಟಿ ನೀಡಿದೆ.
-ದಯಾನಾಥ ಕೋಟ್ಯಾನ್‌, ಹಿರಿಯ ನ್ಯಾಯವಾದಿ, ಮಂಗಳೂರು